
ಬಿಜೆಪಿ ಬಿಟ್ಟು ಈಶ್ವರಪ್ಪ ಜೊತೆ ಕೈಜೋಡಿಸಿದ ಕಣ್ಕಿ ಮಹೇಶ್, ನಳಿನಿರಾವ್, ಕಾಂಗ್ರೆಸ್ ನಿಂದ ಬಿಜೆಪಿಗೆ ಜಿಗಿದ ಹಾಲಗದ್ದೆ ಉಮೇಶ್
ಶಿವಮೊಗ್ಗ: ಲೋಕಸಭಾ ಚುನಾವಣೆ ಸಮೀಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷಾಂತರ ಜೋರಾಗುತ್ತಿದೆ. ಅದರಲ್ಲು ಹೊಸನಗರ ಭಾಗದಲ್ಲಿ ಕಣ್ಕಿ ಮಹೇಶ ನೇತೃತ್ವದಲ್ಲಿ ಒಂದು ದೊಡ್ಡ ಸಂಖ್ಯೆ ಈಶ್ವರಪ್ಪ ಜೊತೆ ಕೈಜೋಡಿಸುವ ಮೂಲಕ ಬಿಜೆಪಿಗೆ ಶಾಕ್ ನೀಡಿದೆ. ಕಾಂಗ್ರೆಸ್ ಪಪಂ ಸದಸ್ಯ ಹಾಲಗದ್ದೆ ಉಮೇಶ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಾರೆ.
ಹೌದು ಈಬಾರಿಯ ಶಿವಮೊಗ್ಗ ಲೋಕಸಭಾ ಕಣ ಅಕ್ಷರಶಃ ರಂಗೇರುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರಾ ಹಣಾಹಣಿ ಕಂಡು ಬರುತ್ತಿದ್ದು ಕೆ.ಎಸ್.ಈಶ್ವರಪ್ಪನವರ ಬಂಡಾಯ ಸ್ಪರ್ಧೆ ಬಿಜೆಪಿಯನ್ನು ಆತಂಕಕ್ಕೆ ದೂಡಿದೆ. ಇದರ ಲಾಭ ಪಡೆಯಲು ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಆದರೆ ಕೆ.ಎಸ್.ಈಶ್ವರಪ್ಪ ಲೆಕ್ಕಾಚಾರ ಮಾತ್ರ ನಿಗೂಢವಾಗಿದೆ.


ಜಿದ್ದಾಜಿದ್ದಿನ ಕಣವಾಗುತ್ತಿರುವ ಶಿವಮೊಗ್ಗದಲ್ಲಿ ಪ್ರಮುಖರನ್ನು ತಮ್ಮ ಪಕ್ಷದತ್ತ ಸೆಳೆಯಲು ಎರಡು ರಾಷ್ಟ್ರೀಯ ಪಕ್ಷಗಳು ಹಿಂದೆ ಬಿದ್ದಿಲ್ಲ. ಈ ನಡುವೆ ಅಸ್ತಿತ್ವದ ಪ್ರಶ್ನೆ ಎದುರಿಸುತ್ತಿರುವ ಕೆ.ಎಸ್.ಈಶ್ವರಪ್ಪ ಕೂಡ ಪಕ್ಷದ ಪ್ರಮುಖರನ್ನು ತಮ್ಮತ್ತ ಸೆಳೆಯುವ ವಿಚಾರದಲ್ಲಿ ಹೆಚ್ಚು ಗಮನಹರಿಸಿದ್ದಾರೆ.
ಹೊಸನಗರದಲ್ಲಿ ಸಹಕಾರಿ ಯೂನಿಯನ್ ನಿರ್ದೇಶಕ ವಾಟಗೋಡು ಸುರೇಶ್ ಈಶ್ವರಪ್ಪ ಜೊತೆ ಕೈಜೋಡಿಸಿದ ಬೆನ್ನಲ್ಲೇ ಎಪಿಎಂಸಿ ಮಾಜಿ ಸದಸ್ಯ, ನಗರ ಹೋಬಳಿಯ ಪ್ರಭಾವಿ ಮುಖಂಡ ಕಣ್ಕಿ ಮಹೇಶ್, ಈ ಹಿಂದೆ ಬಿಜೆಪಿಯಿಂದ ಜಿಪಂಗೆ ಸ್ಪರ್ಧಿಸಿದ್ದ ನಳಿನಿರಾವ್, ಅಶೋಕ ಕುಂಬ್ಳೆ ಸೇರಿದಂತೆ 25ಕ್ಕು ಹೆಚ್ಚು ಪ್ರಮುಖರು ಬಿಜೆಪಿ ಬಿಟ್ಟು ಈಶ್ವರಪ್ಪ ತೆಕ್ಕೆ ಸೇರಿದ್ದಾರೆ.
ಇನ್ನು ಕಾಂಗ್ರೆಸ್ ಪ್ರಮುಖ, ಪಪಂ ಸದಸ್ಯ ಹಾಲಗದ್ದೆ ಉಮೇಶ್ ಬಿಜೆಪಿ ಸೇರಿದ್ದಾರೆ. ನಿಟ್ಟೂರು ಗ್ರಾಪಂ ಅಧ್ಯಕ್ಷೆ ಚಂದ್ರಾವತಿ ಶೆಟ್ಟಿ, ಉಪಾಧ್ಯಕ್ಷೆ ವಿನೋದ ಗುರುಮೂರ್ತಿ, ಪ್ರಮುಖರಾದ ಚಂದ್ರಶೇಖರ ಶೆಟ್ಟಿ, ಗುರುಮೂರ್ತಿ, ಸಿರಾಜ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.
ಮೂಡುಗೊಪ್ಪ ಗ್ರಾಪಂ ಮಾಜಿ ಅಧ್ಯಕ್ಷ ಸತೀಶಗೌಡ ಹೆಂಡೆಗದ್ದೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.
ಒಟ್ಟಾರೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ಕೆ.ಎಸ್.ಈಶ್ವರಪ್ಪನವರ ಬಂಡಾಯ ಸ್ಪರ್ಧೆಯಿಂದ ರಾಷ್ಟ್ರದ ಗಮನ ಸೆಳೆದಿದೆ. ಈ ಹೊತ್ತಿನ ವರೆಗೆ ಗೆಲವು ಯಾರಿಗೂ ಸುಲಭದ ತುತ್ತಲ್ಲ ಎಂಬ ಸಂದೇಶವನ್ನು ಇತ್ತೀಚಿನ ಬೆಳವಣಿಗೆಗಳು ಸಾಕ್ಷೀಕರಿಸಿದೆ. ಚುನಾವಣೆಯನ್ನು ಕುತೂಹಲದ ಘಟ್ಟಕ್ಕೆ ತಂದು ನಿಲ್ಲಿಸಿರುವುದು ಕೆ.ಎಸ್.ಈಶ್ವರಪ್ಪ ಎಂಬುದರಲ್ಲಿ ಎರಡು ಮಾತಿಲ್ಲ.
