
ಶಿವಮೊಗ್ಗ.ಸೆ.14: ಪಕ್ಷ ನನ್ನ ಮೇಲೆ ವಿಶ್ವಾಸವಿಟ್ಟು ಪ್ರದೇಶ ಕಾಂಗ್ರೆಸ್ ಹಿಂದುಳಿದ ವರ್ಗಗಳ (OBC) ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಹೈಕಮಾಂಡ್ ವಿಶ್ವಾಸವನ್ನು ಹುಸಿ ಮಾಡದೇ ಕಾರ್ಯನಿರ್ವಹಿಸುತ್ತೇನೆ ಎಂದು ಮಾಜಿ ಶಾಸಕ ಪ್ರದೇಶ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಿತಿಯ ನೂತನ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದ್ದಾರೆ.
ಮಂಗಳೂರು ಪ್ರವಾಸದ ನಡುವೆ ಗುಡ್ ಮಾರ್ನಿಂಗ್ ಕರ್ನಾಟಕ.ಕಾಂ ದ ಜೊತೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಸಂಘಟನೆ ಬಲಪಡಿಸುವ ಜೊತೆಗೆ ಎಲ್ಲಾ ವರ್ಗಗಳ ಸಮಸ್ಯೆ ಅರಿತು ಕಾರ್ಯನಿರ್ವಹಿಸುತ್ತೇನೆ. ಪಕ್ಷದ ಬಲವರ್ಧನೆ ಮತ್ತು ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಬೇಕು ಈ ನಿಟ್ಟಿನಲ್ಲಿ ಪಕ್ಷದ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದರು.


ಕಾಂಗ್ರೆಸ್ ಸೇರಿದ ಮೇಲೆ ತಟಸ್ಥರಾಗಿದ್ದೀರಿ ಎಂಬ ಪ್ರಶ್ನೆಗೆ ಖಂಡಿತಾ ಸುಳ್ಳು, ಪಕ್ಷ ಹಲವು ಜವಾಬ್ದಾರಿಗಳನ್ನು ನೀಡಿತ್ತು. ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷರನ್ನಾಗಿ ಕೂಡ ಮಾಡಿತ್ತು. ಇಂದು ಮಂಗಳೂರು ಪ್ರವಾಸದಲ್ಲಿದ್ದೇನೆ, ಇಡೀ ರಾಜ್ಯಾಧ್ಯಂತ ಸುತ್ತಾಡಿದ್ದೇನೆ ಎಂದರು.
ಆಕಾಂಕ್ಷಿ ಆಗಿರಲಿಲ್ಲ:
ಹಿಂದುಳಿದ ವರ್ಗಗಳ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿರಲಿಲ್ಲ. ನನಗೆ ನನ್ನ ತಂದೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ನಾಮಬಲವಿದೆ. ಬೇರೆ ಸೂಕ್ತ ವ್ಯಕ್ತಿಯನ್ನು ಗುರುತಿಸಿ ಅಂತಲೂ ಹೇಳಿದ್ದೆ. ಆದರೆ ಪಕ್ಷದ ಪ್ರಮುಖರು ನೀವೆ ವಹಿಸಿಕೊಳ್ಳುವಂತೆ ಹೇಳಿದ್ದಾರೆ. ಅವರು ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದರು.
ಎಐಸಿಸಿಯ ಸುರ್ಜೇವಾಲ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷದ ವರಿಷ್ಠರು ಪಕ್ಷವನ್ನು ಅಧಿಕಾರ ತರುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಜನರ ಸ್ಪಂದನೆ ಕೂಡ ಸಿಗುತ್ತಿದೆ ಎಂದರು.
ನಿಮ್ಮ ಪದೋನ್ನತಿ ಶಿವಮೊಗ್ಗ ಜಿಲ್ಲೆಗೆ ಎಷ್ಟು ಲಾಭ ಎಂಬ ಪ್ರಶ್ನೆಗೆ, ಕೇವಲ ಶಿವಮೊಗ್ಗ ಮಾತ್ರವಲ್ಲ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ಎಲ್ಲಾ ಸ್ತರದ ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಹಿಂದೇನು ಮಾಡಿದೆ ಮುಂದೇನು ಮಾಡುತ್ತದೆ ಎಂಬುದನ್ನು ಮನನ ಮಾಡಿ ಪಕ್ಷದ ಸಂಘಟನೆ ಬಲಪಡಿಸಬೇಕು. ಹಿಂದುಳಿದ ವರ್ಗಗಳ ಏಳಿಗಗೆ ಕಾಂಗ್ರೆಸ್ ಹಿಂದಿನಿಂದಲೂ ಬದ್ದವಾಗಿದೆ. ಇನ್ನಷ್ಟು ಸಂಘಟನೆ ಗಟ್ಟಿಗೊಳಿಸುವ ಸಲುವಾಗಿ ಪಕ್ಷದ ವೇದಿಕೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದರು.
ಸಂಘಟನೆಗೆ ಪ್ರಥಮ ಆಧ್ಯತೆ:
ಪ್ರದೇಶ ಕಾಂಗ್ರೆಸ್ ಒಬಿಸಿ ಕಮಿಟಿ ಅಧ್ಯಕ್ಷನಾಗಿ ರಾಜ್ಯದ ಎಲ್ಲಾ ಹಿಂದುಳಿದ ವರ್ಗಗಳ ಸಂಘಟನೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಪ್ರಥಮ ಆಧ್ಯತೆ.
ಮಧು ಬಂಗಾರಪ್ಪ, ಅಧ್ಯಕ್ಷರು ಹಿಂದುಳಿದ ವರ್ಗಗಳ ಸಮಿತಿ, ಕೆಪಿಸಿಸಿ
