
-
ಹೊಸನಗರದಲ್ಲಿ ಬರಗಾಲ| ಬೇರೆ ಜಿಲ್ಲೆಗಳ ಜೆಸಿಬಿ ಹಿಟಾಚಿ ಕಾಮಗಾರಿಗೆ ತಡೆ ನೀಡಿ | ಸ್ಥಳೀಯ ಜೆಸಿಬಿ, ಹಿಟಾಚಿಗೆ ಆಧ್ಯತೆ ನೀಡಿ | ತಾಲೂಕು ಜೆಸಿಬಿ ಹಿಟಾಚಿ ಮಾಲೀಕರ ಸಂಘ ಆಗ್ರಹ
ಹೊಸನಗರ: ತಾಲೂಕಿನಲ್ಲಿ ಭೀಕರ ಬರಗಾಲ ಕಂಡು ಬರುತ್ತಿದೆ. ಸ್ಥಳೀಯರಿಗೆ ಕೆಲಸವಿಲ್ಲದಂತಾಗಿದೆ. ಹಾಗಾಗಿ ಹೊರ ಜಿಲ್ಲೆಗಳಿಂದ ಜೆಸಿಬಿ ಹಿಟಾಚಿ ತಂದು ಇಲ್ಲಿ ಕಾಮಗಾರಿ ನಿರ್ವಹಿಸದಂತೆ ತಡೆ ನೀಡಲು ಹೊಸನಗರ ತಾಲೂಕು ಜೆಸಿಬಿ ಹಿಟಾಚಿ ಮಾಲೀಕರ ಸಂಘ ಆಗ್ರಹಿಸಿದೆ.
ಸಾಗರ ಹೊಸನಗರ ಶಾಸಕರಾದ ಗೋಪಾಲಕೃಷ್ಣ ಬೇಳೂರು ರನ್ನು ಭೇಟಿ ಮಾಡಿದ ಸಂಘದ ನಿಯೋಗ ಮನವಿ ಸಲ್ಲಿಸಿದೆ.


ತಾಲೂಕಿನಲ್ಲಿ 150 ಕ್ಕು ಹೆಚ್ಚು ಕುಟುಂಬಗಳು ಮತ್ತು ಅದಕ್ಕೆ ಪೂರಕವಾಗಿ ಕಾರ್ಮಿಕರು ಜೆಸಿಬಿ ಇಟಾಚಿ ಕಾಮಗಾರಿಯನ್ನು ನಂಬಿ ಬದುಕು ಸಾಗಿಸುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಏಜಂಟರು ಹೊರ ಜಿಲ್ಲೆಯ ಜೆಸಿಬಿ ಹಿಟಾಚಿ ಯಂತ್ರಗಳನ್ನು ತಂದು ಬೇಕಾಬಿಟ್ಟಿ ಕಾಮಗಾರಿ ನಡೆಸುತ್ತಿದ್ದಾರೆ. ಇದು ಸ್ಥಳೀಯವಾಗಿ ಜೆಸಿಬಿ ಹಿಟಾಚಿ ಯಂತ್ರಗಳಿಗೆ ಕೆಲಸವಿಲ್ಲದಂತಾಗಿದೆ. ಯಾರೇ ಆಗಲಿ ಬೇರೆ ಜಿಲ್ಲೆಗಳಿಂದ ಕಮಿಷನ್ ಮೇಲೆ ತಂದು ಜೆಸಿಬಿ ಕೆಲಸ ಮಾಡಿಸುವುದಕ್ಕಿಂದ ಅದೇ ರೀತಿ ಸ್ಥಳೀಯವಾಗಿರುವ ಜೆಸಿಬಿ ಹಿಟಾಚಿ ಬಳಸಿಕೊಳ್ಳಲಿ ಎಂದು ಆಗ್ರಹಿಸಿದ್ದಾರೆ.
ಅದರಲ್ಲೂ ಬರಗಾಲ ಬಂದಿರುವ ಕಾರಣ ಹೊರಜಿಲ್ಲೆಗಳ ಜೆಸಿಬಿ ಯಂತ್ರಗಳಿಗೆ ಎರಡು ತಿಂಗಳ ತನಕವಾದರೂ ತಡೆ ನೀಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ ತಾಲೂಕಿನಲ್ಲಿ ಬಹುತೇಕ ಜೆಸಿಬಿ ಮಾಲೀಕರು, ಏಜೆಂಟರು ಸಹಕರಿಸಿದ್ದಾರೆ. ಆದರೆ ಕೆಲ ಏಜೆಂಟರು ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ. ಸ್ಥಳೀಯವಾಗಿ ಉದ್ಯೋಗ ನೀಡಿ, ಸ್ಥಳೀಯ ಕುಟುಂಬಗಳ ಹಿತದೃಷ್ಟಿಯಿಂದ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇದಕ್ಕೆ ಸ್ಪಂದಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು, ಸ್ಥಳೀಯ ಹಿತರಕ್ಷಣೆ ಕಾಪಾಡುವುದು ನಮ್ಮ ಜವಾಬ್ದಾರಿ, ಹೊರಜಿಲ್ಲೆಯಿಂದ ಜೆಸಿಬಿ ತಂದು ಕಾನೂನು ಉಲ್ಲಂಘಿಸಿ ಕಾಮಗಾರಿ ನಡೆಸುತ್ತಿರುವುದು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಹೊಸನಗರ ಪಿಎಸ್ಐ ಶಿವಾನಂದ ಕೋಳಿಗೆ ಸೂಚಿಸಿದರು.
ಹೊಸನಗರ ತಾಲೂಕು ಜೆಸಿಬಿ ಹಿಟಾಚಿ ಮಾಲೀಕರ ಸಂಘದ ಅಧ್ಯಕ್ಷ ಸುರೇಶ ಶೆಟ್ಟಿ, ಗೌರವಾಧ್ಯಕ್ಷ ಹಿಟಾಚಿ ಶ್ರೀಧರ್, ತ್ರಿಭುವನ್, ಮಂಜುನಾಥ್, ರಾಜು ಕೊಡೂರು, ಮಹೇಶ ಬಾಣಿಗ, ಬಸವ ಜಯನಗರ, ನವೀನ ಮಾಸ್ತಿಕಟ್ಟೆ, ಅಭಿ ಕಾರಗಡಿ, ಧರ್ಮ ಗೇರುಪುರ, ರಘು ರಿಪ್ಪನಪೇಟೆ, ಮಾಧುಶೆಟ್ಟಿ ಜಂಬಳ್ಳಿ ಇತರರು ಇದ್ದರು.
