
ಹೊಸನಗರ: ಕೆಲಸಕ್ಕೆ ಹೋಗುತ್ತಿದ್ದ ವೇಳೆ ಮಹಿಳೆ ಮೇಲೆ ಕಾಡುಕೋಣ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ಸೋಮವಾರ ನಡೆದಿದೆ.
ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ಮಾಕೋಡು ನಿವಾಸಿ ಜಯಮ್ಮ(45) ಕಾಡುಕೋಣ ದಾಳಿಗೆ ತುತ್ತಾದ ಮಹಿಳೆ


ಬೆಳಿಗ್ಗೆ ಎದ್ದು ಅಡಿಕೆ ತೋಟಕ್ಕೆ ಕೆಲಸಕ್ಕೆ ಹೋಗುವ ವೇಳೆ ಕಾಡುಕೋಣ ಏಕಾಏಕಿ ದಾಳಿ ನಡೆಸಿದೆ. ಮಹಿಳೆಯ ಹೊಟ್ಟೆ, ಎದೆ, ಹಣೆಗೆ ಕೋಡಿನಿಂದ ತಿವಿದು ನಂತರ ಎತ್ತಿ ಬಿಸಾಡಿದೆ.
ಮಹಿಳೆಯ ಕೈಮುರಿತವಾಗಿದ್ದು, ಹೊಟ್ಟೆ, ಹಣೆ, ಎದೆಯ ಮೇಲೆ ತಿವಿದ ಗಾಯಗಳಾಗಿವೆ.
ಮಹಿಳೆಯ ಚೀರಾಟ ಕೇಳಿ ತುಸುದೂರದಲ್ಲಿದ್ದ ಪತಿ ನರಸಿಂಹ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಕಾಡುಕೋಣ ಅಲ್ಲಿಂದ ಮರೆಯಾಗಿದೆ. ಕೂಡಲೇ ತೀವ್ರ ಗಾಯಗೊಂಡಿದ್ದ ಜಯಮ್ಮರನ್ನು ಹೊಸನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ಶಿವಮೊಗ್ಗ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಯಿತು. ಬಳಿಕ ಈಗ ಮಂಗಳೂರು ಸುರತ್ಕಲ್ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪರಿಶೀಲನೆ: ಕಾಡುಕೋಣ ದಾಳಿಯ ಮಾಹಿತಿ ತಿಳಿಯುತ್ತಿದ್ದಂತೆ ನಗರ ವಲಯ ಅರಣ್ಯಾಧಿಕಾರಿ ಸಂಜಯ್ ಬೇಟಿ ನೀಡಿ ಪರಿಶೀಲಿಸಿದರು. ಬಳಿಕ ಸೂಕ್ತ ಪರಿಹಾರಕ್ಕೆ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಕೆಲದಿನಗಳ ಹಿಂದೆಯಷ್ಟೆ ಕಟ್ಟಿನಹೊಳೆ ಭಾಗದಲ್ಲಿ ವ್ಯಕ್ತಿಯೊಬ್ಬನ ಮೇಲೆ ಕಾಡುಕೋಣ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ನಡೆದ ಬೆನ್ನೆಲ್ಲೆ ಮಹಿಳೆಯೋರ್ವಳ ಮೇಲೆ ದಾಳಿಯಾಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
