
ಹೊಸನಗರ: ಈ ಬಾರಿಯ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಡಿಯಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನ ತುಮಕೂರಿನಲ್ಲಿ ಡಿ.28 ಮತ್ತು 29 ರಂದು ನಡೆಯಲಿದೆ ಎಂದು ರಾಜ್ಯ ವೈಜ್ಞಾನಿಕ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್ ಹೇಳಿದರು.
ಹೊಸನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಸರ್ವ ಸಮ್ಮೇಳನಾಧ್ಯಕ್ಷರಾಗಿ ಸುಧಾಮೂರ್ತಿ, ಸಿ.ಎನ್.ರಾವ್, ಮತ್ತು ಅಜಿತ್ ಪ್ರೇಮ್‌ಜಿ ಸೇರಿದಂತೆ ಮೂರು ಹೆಸರನ್ನು ಆಯ್ಕೆ ಮಾಡಲಾಗಿದೆ. ಅವರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ವೈಜ್ಞಾನಿಕ ಪರಿಷತ್‌ಗೆ ಮೂರು ವರ್ಷ ತುಂಬುತ್ತಿದೆ. ಈಗಾಗಲೇ 45 ಸಾವಿರ ಸದಸ್ಯರು ನೋಂದಣಿ ಮಾಡಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಮೊದಲ ಸಮ್ಮೇಳನದಲ್ಲಿ ಇಸ್ರೋದ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಸಮ್ಮೇಳನಾ ಅಧ್ಯಕ್ಷರಾಗಿದ್ದರು. ಜನರಲ್ಲಿ ವೈಜ್ಞಾನಿಕ ಮನೋಭಾವನೆ ಉಂಟು ಮಾಡುವುದು, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದು, ಪ್ರಯೋಗಾತ್ಮಕವಾಗಿ ಸಮ್ಮೇಳನವನ್ನು ವಿಶಿಷ್ಠವಾಗಿ ಆಯೋಜಿಸಲಾಗುವುದು ಎಂದರು.
ಪರಿಷತ್ ಇಂದು ರಾಷ್ರೀಯ ಮತ್ತು ರಾಜ್ಯ ಮಟ್ಟಕ್ಕೆ ಸೀಮಿತವಾಗಿಲ್ಲ. ಜಿಲ್ಲಾ, ತಾಲೂಕು ಮತ್ತು ಹೋಬಳಿ ಮಟ್ಟಕ್ಕು ವಿಸ್ತರಿಸಲಾಗುತ್ತಿದೆ. ಶಿಕ್ಷಕ ಸಮುದಾಯ, ಸಾರ್ವಜನಿಕ ಸಮುದಾಯ, ಸಮೂಹ ಮಾಧ್ಯಮಗಳನ್ನು ಒಂದೆಡೆ ಸೇರಿಸಿ ನಡೆಯುವ ಚಿಂತನಾ ಮಂಥನ ಕಾರ್ಯಕ್ರಮ ಇದಾಗಿದೆ ಎಂದರು.
ಶಿಡ್ಲಘಟ್ಟದಲ್ಲಿ 10 ಎಕರೆ ಭೂಮಿ:
ವೈಜ್ಞಾನಿಕ ಸಂಶೋಧನಾ ಪರಿಷತ್ ಕುವೆಂಪು ಹುಟ್ಟಿದ ದಿನ ಸ್ಥಾಪನೆಯಾಯಿತು. ಶಿಡ್ಲಘಟ್ಟದಲ್ಲಿ ಈಗಾಗಲೇ 10 ಎಕರೆ ಭೂಮಿ ಕೂಡ ನೋಂದಣಿಯಾಗಿದೆ. ಕೇಂದ್ರ ಸರ್ಕಾರ 10 ಎಕರೆ ಗ್ರಾಮದಲ್ಲಿ ವಿಜ್ಞಾನ ಗ್ರಾಮ ಮಾಡಲು ಮುಂದಾಗಿದೆ ಎಂದರು.
ಮೂಢನಂಬಿಕೆ:
ಮೂಲ ನಂಬಿಕೆಗಳು ಇರಲಿ, ಆದರೆ ಮೂಢ ನಂಬಿಕೆಗಳು ಬೇಡ, ಪಂಚಾಂಗಗಳಿಗಿಂತ ಪಂಚ ಅಂಗಗಳ ಕಡೆ ಗಮನಹರಿಸಬೇಕು. ಮನೆಯ ವಾಸ್ತುಗಿಂತ ಮನಸ್ಸಿನ ವಾಸ್ತು ಸುಧಾರಿಸಬೇಕು. ವಿಧ್ಯೆ ಮತ್ತು ಬುದ್ದಿವಂತ ಮನುಷ್ಯರಿಗಿಂತ ಪ್ರಜ್ಞಾವಂತ ಮನುಷ್ಯರ ನಿರ್ಮಾಣವಾಗಬೇಕು. ಸಮಾಜದ ಸಂಸ್ಕೃತಿ ವಿಕೃತಿ ಕಡೆ ಸಾಗುತ್ತಿದೆ. ಮಾನವೀಯ ಮೌಲ್ಯ ಪ್ರಾಕ್ಟಿಕಲ್ ಆಗಿರಲಿ ಎಂಬುದು ಪರಿಷತ್‌ನ ಉದ್ದೇಶವಾಗಿದ್ದು ಆ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ಎಂಜನಿಯರ್ ದಿನಾಚರಣೆ
ಇದಕ್ಕು ಮುನ್ನ ಸರ್ ಎಂ ವಿಶ್ವೇಶ್ವರರಯ್ಯ ಭಾವಚಿತ್ರಕ್ಕೆ ಪುಷ್ಪನಮನ ಮಾಡುವ ಮೂಲಕ ಹುಲಿಕಲ್ ಎಂಜನಿಯರ್ ದಿನಾಚರಣೆಯನ್ನು ಆಚರಿಸಲಾಯಿತು. ಒಂದು ಸಣ್ಣ ಹಳ್ಳಿ ದೀಪದ ಬೆಳಕಿನಲ್ಲಿ ಬೆಳೆದ ಸರ್.ಎಂ.ವಿಶ್ವೇಶ್ವರಯ್ಯ ಜಗತ್ತಿನಲ್ಲಿ ಶ್ರೇಷ್ಠರಲ್ಲಿ ಶ್ರೇಷ್ಠ ಸ್ಥಾನವನ್ನು ಅಲಂಕರಿಸಿದ ವ್ಯಕ್ತಿ, ಅವರು ಬದುಕು ಮತ್ತು ಕೆಲಸ ಪರಿಷತ್ತಿಗೆ ಪ್ರೇರಣೆ ಎಂದರು.
ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಉಪಾಧ್ಯಕ್ಷ ಡಾ.ಆಂಜನಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ವಿ.ಟಿ.ಸ್ವಾಮಿ, ಜಿಲ್ಲಾಧ್ಯಕ್ಷ ರಾಜೇಂದ್ರ ಆವಿನಹಳ್ಳಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ಡಿ.ರವಿಕುಮಾರ್, ರಾಜ್ಯ ಪುಸ್ತಕ ಸಮಿತಿ ಸದಸ್ಯ ಡಾ.ಕೆಳದಿ ವೆಂಕಟೇಶ್ ಜೋಯ್ಸ್, ತಾಲೂಕು ಅಧ್ಯಕ್ಷೆ ಸೀಮಾ ಶೆರಾವೋ ಹಾಜರಿದ್ದರು.
ಹೊಸನಗರದಲ್ಲಿ ಹುಲಿಕಲ್ ನಟರಾಜ್ ನಡೆಸಿದ ಪತ್ರಿಕಾಗೋಷ್ಠಿ ವಿವರದ VIDEO ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ