
ಹೊಸನಗರ.ಆ.12: ತಾಲೂಕಿನ ಕರಿಮನೆ ಗ್ರಾಮ ಪಂಚಾಯತ್ ಅಧ್ಯಕ್ಷರ ಚುನಾವಣೆ ಶುಕ್ರವಾರ ನಡೆದಿದ್ದು ಕಾಂಗ್ರೆಸ್ ಬೆಂಬಲಿತ ಸದಸ್ಯ ದೇವೇಂದ್ರ ನಾಯ್ಕ ಗುಡ್ಡೆಕೊಪ್ಪ ಅವಿರೋಧ ಆಯ್ಕೆಯಾಗಿದ್ದಾರೆ.
ನಿಕಟಪೂರ್ವ ಅಧ್ಯಕ್ಷ ರಮೇಶ ಹಲಸಿನಹಳ್ಳಿ ರಾಜೀನಾಮೆಯಿಂದ ಅಧ್ಯಕ್ಷ ಸ್ಥಾನ ತೆರವುಗೊಂಡ ಹಿನ್ನೆಲೆಯಲ್ಲಿ ಚುನಾವಣೆ ನಡೆಯಿತು. ಕರಿಮನೆ ಗ್ರಾಪಂ ಒಟ್ಟು 6 ಸದಸ್ಯರ ಬಲ ಹೊಂದಿದ್ದು ಚುನಾವಣೆ ಪ್ರಕ್ರಿಯೆಯಲ್ಲಿ ಐವರು ಭಾಗವಹಿಸಿದ್ದರು. ತಾಪಂ ಮಾಜಿ ಸದಸ್ಯೆ, ಕರಿಮನೆ ಗ್ರಾಪಂ ಸದಸ್ಯರಾದ ಅಶ್ವಿನಿ ಪಾಟೀಲ್ ಗೈರಾಗಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಕೇವಲ ಒಂದು ನಾಮಪತ್ರ ಬಂದ ಹಿನ್ನೆಲೆಯಲ್ಲಿ ದೇವೇಂದ್ರ ನಾಯ್ಕ್ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಕೆ.ಎನ್.ಮಲ್ಲಿಕಾರ್ಜುನ್ ಘೋಷಿಸಿದರು.
ಕರಿಮನೆ ಗ್ರಾಪಂ ಕಾಂಗ್ರೆಸ್ ಬೆಂಬಲಿತ ಸದಸ್ಯರ ಹಿಡಿತದಲ್ಲಿದ್ದು ಈ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ಹೊಂದಾಣಿಕೆ ನಡೆದಿತ್ತು ಈ ಅನ್ವಯ ರಮೇಶ ಹಲಸಿನಹಳ್ಳಿ ರಾಜೀನಾಮೆ ನೀಡಿದ್ದರು.
ಚುನಾವಣೆ ಬಳಿಕ ಸಿಹಿ ಹಂಚಿ ಘೋಷಣೆ ಕೂಗಿ ಸಂಭ್ರಮಿಸಲಾಯಿತು. ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಮೂಡುಗೊಪ್ಪ ಗ್ರಾಪಂ ಅಧ್ಯಕ್ಷ ಕರುಣಾಕರಶೆಟ್ಟಿ, ನಗರ ಸೊಸೈಟಿ ಉಪಾಧ್ಯಕ್ಷ ಹಿಲ್ಕುಂಜಿ ಕುಮಾರ್, ಕರಿಮನೆ ಗ್ರಾಪಂ ಉಪಾಧ್ಯಕ್ಷ ಪ್ರಕಾಶ ಮಳಲಿ, ಸದಸ್ಯರಾದ ದೇವಮ್ಮ, ನಾಗರತ್ನ, ಪ್ರಮುಖರಾದ ಹರೀಶ್, ಸುಭಾಷ್, ಪಾಂಡುಗೌಡ ಇತರರು ಇದ್ದರು.