ಡ್ರಾಪ್ ಔಟ್ ( ಶಾಲೆ ಬಿಟ್ಟ ) ಮಕ್ಕಳು ಕರೆ ತರಲು 80 ಕಿಮಿ ದೂರ ಪ್ರಯಾಣ ಮಾಡಿದ ಶಿಕ್ಷಕಿ

ಡ್ರಾಪ್ ಔಟ್ ( ಶಾಲೆ ಬಿಟ್ಟ ) ಮಕ್ಕಳು ಕರೆ ತರಲು 80 ಕಿಮಿ ದೂರ ಪ್ರಯಾಣ ಮಾಡಿದ ಶಿಕ್ಷಕಿ…..

ಸಾಗರ: ಶಾಲೆ ಬಿಟ್ಟ ಮಕ್ಕಳನ್ನು ವಾಪಾಸು ಶಾಲೆಗೆ ಕರೆತರಲು ಸರ್ಕಾರಿ ಶಾಲಾ ಶಿಕ್ಷಕಿಯೋರ್ವರು 80 ಕಿಮೀ ದೂರಕ್ಕೆ ತೆರಳಿದ ಘಟನೆ ಸಾಗರ ತಾಲೂಕಿನ ಹೊನ್ನೇಸರದಲ್ಲಿ ನಡೆದಿದೆ.

ಸಾಗರ ತಾಲೂಕು ಹೊನ್ನೇಸರ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಪಿಎಂಶ್ರೀ) ಯಲ್ಲಿ ವ್ಯಾಸಂಗ ಮಾಡುತ್ತಿದ್ದ 2 ವಿದ್ಯಾರ್ಥಿಗಳು ಕಳೆದ ಜೂನ್ ತಿಂಗಳಿಂದಲೂ ಗೈರು ಹಾಜರಿಯಾಗಿದ್ದು ಇಲ್ಲಿಯ ಶಿಕ್ಷಕರು ಇಲಾಖೆಯ ನಿಯಮದ ಪ್ರಕಾರ ಮಕ್ಕಳ ಮನೆಗೆ ಹತ್ತಾರು ಬಾರಿ ಭೇಟಿ ನೀಡಿದ್ದರು.

ಆ ಎಲ್ಲ ವೇಳೆ ಮನೆಗೆ ಬೀಗ ಹಾಕಲಾಗಿತ್ತು. ಮತ್ತು ಇದುವರೆಗೂ ದೂರವಾಣಿ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಈ ಕುರಿತು ಅನಿವಾರ್ಯವಾಗಿ ಮುಖ್ಯ ಶಿಕ್ಷಕರು ಸಿಆರ್ಪಿಯವರ ಮೂಲಕ ಮೇಲಧಿಕಾರಿಗಳಿಗೆ ಲಿಖಿತವಾಗಿ ತಿಳಿಸಿದ್ದರು.

ಈ ನಡುವೆ ಇಲ್ಲಿಯ ಹಿರಿಯ ಶಿಕ್ಷಕಿ ಜಯಂತಿ ಎಚ್. ವಿ. ಎನ್ನುವವರು ಬಲ್ಲಮೂಲಗಳಿಂದ ಮಕ್ಕಳು ಹೊಸನಗರ ತಾಲೂಕು ಸಂಪೆಕಟ್ಟೆಯ ಸಮೀಪ ಕುಂಬಾರಗೊಳಿ ಎನ್ನುವ ಊರಿನಲ್ಲಿರುವ ಮಾಹಿತಿ ತಿಳಿದು ಶನಿವಾರ ಅಲ್ಲಿಗೆ ಪ್ರಯಾಣ ಬೆಳೆಸಿ ಅಲ್ಲಿ ಪರಿಚಯವಿದ್ದ ಸ್ಥಳೀಯರ ಮೂಲಕ ಮಕ್ಕಳಿದ್ದ ಮನೆಗೆ ಭೇಟಿ ನೀಡಿ ಬದ್ದತೆ ಮೆರೆದಿದ್ದಾರೆ.

ಅಲ್ಲದೆ ಮಕ್ಕಳ ತಾಯಿ ಉಷಾ ಹಾಗೂ ಅವರ ಬಂಧುಗಳಿಗೆ ಮಕ್ಕಳಿಗೆ ವಿದ್ಯಾಭ್ಯಾಸದ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಟ್ಟಿರುವುದಲ್ಲದೆ ಯಾವುದೇ ಕಾರಣಕ್ಕೂ ಎಷ್ಟೆ ಕಷ್ಟವಿದ್ದರೂ ಮಕ್ಕಳನ್ನು ಶಾಲೆ ಬಿಡಿಸದಂತೆ ಮನವೊಲಿಸಿದ್ದಾರೆ.

ವಿದ್ಯಾರ್ಥಿಗಳಾದ ಸುಶಾನ್ (5 ತರಗತಿ) ಸಾನ್ವಿ (3 ತರಗತಿ) ಇಬ್ಬರು ಮಕ್ಕಳ ಜತೆಯೂ ಕೂರಿಸಿಕೊಂಡು ಮಾತನಾಡಿ ಅವರ ಆಸಕ್ತಿ ಗಮನಿಸಿ ಸೋಮವಾರದಿಂದಲೇ ಶಾಲೆಗೆ ಬರುವುದಕ್ಕೆ ಒಪ್ಪಿಸಿದ್ದಾರೆ. ಈ ನಡುವೆ ಆ ಊರಿಗೆ ಸಮೀಪ ಇರುವ ಮತ್ತಿಕೈ ಎನ್ನುವ ಶಾಲೆಯ ಶಿಕ್ಷಕರ ದೂರವಾಣಿಯನ್ನು ಪಡೆದು ಅವರಿಗೂ ಮಾಹಿತಿ ತಿಳಿಸಿದ್ದಾರೆ.


ಈ ಕಾರ್ಯಕ್ಕಾಗಿ ಸಾಗರದಿಂದ ಹೊಸನಗರ ತಾಲೂಕು ನಗರ ಹೋಬಳಿಯ ಸಂಪೆಕಟ್ಟೆಗೆ ಸುಮಾರು 80 ಕಿಮಿ ದೂರ ( ಒಟ್ಟು 160 km) ಹೋಗಿ ಅಲ್ಲಿಂದ ಕೊಡಚಾದ್ರಿ ತಪ್ಪಲಿನ ಕುಗ್ರಾಮದಲ್ಲಿರುವ ಮನೆಗೆ ಭೇಟಿ ನೀಡಿರುವ ಶಿಕ್ಷಕಿಯ ಕಾಳಜಿ ಹಾಗು ಕರ್ತವ್ಯನಿಷ್ಠೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಶ್ಲಾಘಿಸಿದ್ದಾರೆ. ಮತ್ತು ಸೂಕ್ತ ಮಾರ್ಗ ದರ್ಶನ ಕೂಡ ನೀಡಿದ್ದಾರೆ.

Exit mobile version