ದಶಮಾನೋತ್ಸವ ಸಂಭ್ರಮದಲ್ಲಿ ಗಲ್ಫ್ ರಾಷ್ಟ್ರದ ಕನ್ನಡ ಮೂವೀ ಸಂಸ್ಥೆ | ಹತ್ತು ವರ್ಷದಲ್ಲಿ ಕನ್ನಡ, ತುಳು ಚಲನಚಿತ್ರ ಪ್ರದರ್ಶನದಲ್ಲಿ ಗಮನಾರ್ಹ ಸಾಧನೆ

ವರದಿ: ನೇರಂಬಳ್ಳಿ ಸುರೇಶ್ ರಾವ್, ಕುವೈತ್

ಗಲ್ಫ್/ಬೆಂಗಳೂರು: ದಶಕಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ಮುಖ್ಯವಾಗಿ ಅನ್ಯ ಭಾಷೆಗಳ ಚಲನಚಿತ್ರಗಳ ವಿತರಣೆ ಹಾಗೂ ಪ್ರದರ್ಶನ ಏಕಸ್ವಾಮ್ಯವಾಗಿ ನೆಡೆಯುತ್ತಿದೆ. ಗಲ್ಫ್ ಕನ್ನಡಿಗರಿಗೆ ಬೇಸರದ ಸಂಗತಿ ಏನೆಂದರೆ, ಕನ್ನಡ ಚಲನಚಿತ್ರಗಳ ವಿತರಣೆ ಹಾಗೂ ಪ್ರದರ್ಶನ ನಡೆಯುತ್ತಲೇ ಇರಲಿಲ್ಲ. ಕನ್ನಡ ಭಾಷೆಯ ಸೇವೆ ಹಾಗೂ ಚಲನಚಿತ್ರರಂಗದ ಸೇವೆಗಾಗಿ, ಕನ್ನಡ ಚಲನಚಿತ್ರಗಳ ವಿತರಣೆ ಹಾಗೂ ಪ್ರದರ್ಶನಗಳ ಅವಶ್ಯಕತೆಯನ್ನು ಮನಗಂಡು, ಕನ್ನಡ ಅಭಿಮಾನಿಗಳಾದ, ಸಮಾನ ಮನಸ್ಕ ಸ್ನೇಹಿತರು, ತಮ್ಮ ತಮ್ಮ ಗಲ್ಫ್ ರಾಷ್ಟ್ರಗಳಿಂದ ತಮ್ಮ ಪ್ರತಿನಿಧಿತ್ವ ವಹಿಸಿಕೊಂಡರು. ಆ ಮೂಲಕ ದಶಕದ ಹಿಂದೆ ಗಲ್ಫ್ ಕನ್ನಡ ಮೂವೀಸ್ ಸಂಸ್ಥೆಯ ಹುಟ್ಟಿಗೆ ಹಾಗೂ ಕಾರ್ಯಾಚರಣೆಗೆ ಕಾರಣೀಭೂತರಾದರು.

ಸ್ಥಾಪಕರುಗಳಾಗಿ ದುಬೈನಿಂದ ದೀಪಕ್ ಸೋಮಶೇಖರ್ ರವರು ಹಾಗೂ ಬೆಂಗಳೂರಿನಿಂದ ಸಹೋದರ ದರ್ಶನ್ ಸೋಮಶೇಖರ್, ರಾಜಾಕುಳ್ಳ ಖ್ಯಾತಿಯ ಕನ್ನಡ ನಟ ದ್ವಾರಕೀಶ್ ರವರ ಪುತ್ರ ಸುಖೀಶ್ ದ್ವಾರಕೀಶ್ ಹಾಗೂ ಸದನ್ ದಾಸ್ ದುಬೈನಿಂದ ಸಹಕಾರ ನೀಡಿದ್ದಾರೆ.

ಸಂಸ್ಥೆಗಳ ಸಹವರ್ತಿಗಳಾಗಿ ಕುವೈತ್ ರಾಷ್ಟ್ರದ ಪ್ರತಿನಿಧಿಯಾಗಿ ಸುರೇಶ್ ರಾವ್ ನೇರಂಬಳ್ಳಿ ಹಾಗೂ ಖತಾರ್ ನಲ್ಲಿ ಸುಬ್ರಹ್ಮಣ್ಯ ಹೆಬ್ಬಾಗಿಲು ಸಹಕಾರ ನೀಡುತ್ತಾ ಒಂದು ತಂಡವಾಗಿ ಕಾರ್ಯನಿರ್ವಹಿಸಿ ಯಶಸ್ಸಿಗೆ ಮುನ್ನುಡಿ ಬರೆದರು.

ಗಲ್ಫ್ ಕನ್ನಡ ಮೂವೀಸ್ ಸಂಸ್ಥೆ ಮೂಲಕ ಈ ವರೆಗೆ 48 ಚಲನಚಿತ್ರಗಳನ್ನು ಬಿಡುಗಡೆಗೊಳಿಸಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ತಮ್ಮ ಭಾಷೆಯ ಚಲನಚಿತ್ರವನ್ನು ವೀಕ್ಷಿಸಬೇಕೆಂಬ ಆಶಯದಂತೆ ಕನ್ನಡಿಗರ ಕೋರಿಕೆಯ ಮೇರೆಗೆ ಪ್ರಪ್ರಥಮ ಬಾರಿಗೆ ಬೆಳ್ಳಿ ತೆರೆಯ ಇತಿಹಾಸದಲ್ಲಿ ಕನ್ನಡ ಚಲನಚಿತ್ರಗಳನ್ನು ಬಿಡುಗಡೆ ಮಾಡಿ ಸಂಸ್ಥೆ ಇತಿಹಾಸ ಸೃಷ್ಟಿಸಿದೆ. ನಂತರದ ದಿನಗಳಲ್ಲಿ, ತುಳು ಭಾಷೆಯ ಚಲನಚಿತ್ರಗಳ ಬೇಡಿಕೆ ಬಂದ ಕಾರಣ, ತುಳು ಚಲನಚಿತ್ರಗಳ ವಿತರಣೆ ಹಾಗೂ ಪ್ರದರ್ಶನವನ್ನು ಕೆಲವು ಗಲ್ಫ್ ರಾಷ್ಟ್ರಗಳಲ್ಲಿ ತುಳು ಚಲನಚಿತ್ರ ಕೂಡಾ ಬೆಳ್ಳಿ ತೆರೆಯ ಇತಿಹಾಸದಲ್ಲಿ ಪ್ರಪ್ರಥಮವಾಗಿ ಬಿಡುಗಡೆಗೊಂಡು ಇತಿಹಾಸ ಸೃಷ್ಟಿಸಿದೆ.

ಇದು ನಮ್ಮ ಗಲ್ಫ್ ಕನ್ನಡ ಮೂವೀಸ್ ಸಂಸ್ಥೆಗೆ ಹಾಗೂ ಎಲ್ಲಾ ಗಲ್ಫ್ ರಾಷ್ಟ್ರಗಳ ತುಳು-ಕನ್ನಡಿಗರಿಗೆ ಹೆಮ್ಮೆಯ ವಿಷಯ.
ಮೊತ್ತಮೊದಲ ಬಾರಿಗೆ ಗಲ್ಫ್ ನಲ್ಲಿ ಕನ್ನಡ ಚಲನಚಿತ್ರದ ಪ್ರೀಮಿಯರ್ ಶೋ (ಪ್ರಧಾನ ದೇಖಾವೆ)ಯನ್ನು ಡಾ.ಶಿವರಾಜ್ ಕುಮಾರ್ ರವರು ಅಭಿನಯಿಸಿದ ಚಿತ್ರದ ಬಿಡುಗಡೆಗಾಗಿ ಅವರು ಹಾಗೂ ತಾರಾಗಣದೊಂದಿಗೆ ಪ್ರದರ್ಶಿಸಲಾಯಿತು.

ಹಾಗೆಯೇ ಗಲ್ಫ್ ನಲ್ಲಿ ಮೊತ್ತಮೊದಲ ಬಾರಿಗೆ ತುಳು ಚಲನಚಿತ್ರದ ಪ್ರೀಮಿಯರ್ ಶೋ ವನ್ನು ಅರವಿಂದ ಬೋಳಾರ್, ನವೀನ್ ಡಿ. ಪಡೀಲ್ ಹಾಗೂ ಮತ್ತಿತ್ತರ ತಾರಾಗಣದೊಂದಿಗೆ ಪ್ರದರ್ಶಿಸಲಾಯಿತು.

ಹಿಂದಿಯೂ ಸೇರಿ ಹಲವು ಬಹು ಭಾಷಾ ಚಲನಚಿತ್ರಗಳನ್ನು ಬಿಡುಗಡೆ, ವಿತರಣೆಗೊಳಿಸಿದ ಕೀರ್ತಿ ಸಂಸ್ಥೆಗಿದೆ.
ನಮ್ಮೆಲ್ಲರ ನೆಚ್ಚಿನ ಅಪ್ಪು (ಪುನೀತ್ ರಾಜ್ ಕುಮಾರ್) ಅಗಲಿದಾಗ ಅವರ ಸಮಾಜ ಸೇವೆಯ ನೆನಪಿಗಾಗಿ, ಅವರ ಶೃದ್ಧಾಂಜಲಿ ಕಾರ್ಯಕ್ರಮದ ಅಂಗವಾಗಿ, ಸಂಸ್ಥೆಯ ಪರವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ಅವರಿಗೆ ಶೃದ್ಧಾಂಜಲಿ ಅರ್ಪಿಸಲಾಗಿದೆ.

ಎರಡು ವರುಷಗಳ ಮಾರಣಾಂತಿಕ ಕಾಯಿಲೆ ಕೋವಿಡ್ ಸಮಯದಲ್ಲಿ, ಗಲ್ಫ್ ರಾಷ್ಟ್ರಗಳಲ್ಲಿ ಮಾನಸಿಕ ಬೇಗುದಿಯಿಂದಿರುವ, ಅತಂತ್ರರಾಗಿರುವ ಕನ್ನಡಿಗರಲ್ಲಿ ಧೈರ್ಯ, ವಿಶ್ವಾಸ ತುಂಬಲು, ಮನೋಸ್ಥೈರ್ಯ ಹೆಚ್ಚಿಸಲು ಕನ್ನಡ ಚಲನಚಿತ್ರರಂಗದ ಮೇರು ನಟರುಗಳಾದ ಡಾ.ಶಿವರಾಜ್ ಕುಮಾರ್, ದ್ವಾರಕೀಶ್, ಪುನೀತ್ ರಾಜ್ ಕುಮಾರ್, ಸುದೀಪ್, ಉಪೇಂದ್ರ ಮುಂತಾದವರ ಜೊತೆಗೆ ಜೂಮ್ ಸಂವಾದವನ್ನು ಎರ್ಪಡಿಸಿ ಜನ ಮೆಚ್ಚುಗೆಗೂ ಪಾತ್ರವಾಯಿತು.

ಗಲ್ಫ್ ಕನ್ನಡ ಮೂವೀಸ್ ಸಂಸ್ಥೆಗೆ ಹತ್ತು ವರ್ಷಗಳನ್ನು ಪೂರೈಸಿದ ದಶಕದ ಸಂಭ್ರಮ. ಈ ಮೂಲಕ ಕನ್ನಡದ ಸೇವೆಗಾಗಿ ಹಾಗೂ ಸಂಸ್ಥೆಯ ಯಶಸ್ಸಿಗಾಗಿ ನಾವು ಕೂಡಾ ಶುಭ ಹಾರೈಸೋಣ ಅಲ್ಲವೆ? ಎನಂತೀರಿ? ಗಲ್ಫ್ ಕನ್ನಡ ಮೂವೀಸ್ ಸಂಸ್ಥೆ, ಎಲ್ಲಾ ಗಲ್ಫ್ ರಾಷ್ಟ್ರಗಳಲ್ಲಿ ಇನ್ನಷ್ಟು ತುಳು-ಕನ್ನಡಿಗರ ಅಚ್ಚುಮೆಚ್ಚಿನ ತುಳು, ಕನ್ನಡ ಚಲನಚಿತ್ರಗಳನ್ನು ವಿತರಣೆ ಹಾಗೂ ಪ್ರದರ್ಶನ ನೀಡುವಂತಾಗಲಿ ಎಂಬುದು ನಮ್ಮ ಆಶಯ.

Exit mobile version