ಹೊಸನಗರ ಪಟ್ಟಣ ಸಮೀಪ ಸನಂ 112ರಲ್ಲಿ ಕಲ್ಲು ಗಣಿಗಾರಿಕೆ : ಸ್ಥಗಿತಗೊಳಿಸುವಂತೆ ಕಳೂರು ಗ್ರಾಮಸ್ಥರ ಆಗ್ರಹ

ಹೊಸನಗರ: ಹೊಸನಗರ ಟೌನ್ ಸಮೀಪದ ಸನಂ 112 ರಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗಿದ್ದು ಕೂಡಲೇ ನಿಲ್ಲಿಸುವಂತೆ ಕಳೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಸಂಬಂಧ ತಾಲೂಕು ಕಚೇರಿಗೆ ಮನವಿ ಸಲ್ಲಿಸಿರುವ ಗ್ರಾಮಸ್ಥರು ಹೊಸನಗರ ಪಟ್ಟಣ ಸಮೀಪ ಸನಂ 112 ರಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಅದರಲ್ಲು‌ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಸ್ಥಳ ಮಾರಿಗುಡ್ಡದಲ್ಲಿರುವ ನ್ಯಾಯಾಲಯದಿಂದ ಕೇವಲ ಅರ್ಧ ಕಿಮೀ ದೂರದಲ್ಲಿದೆ. ಆದರೂ ಗಣಿಗಾರಿಕೆಗೆ ಯಾವ ಮಾನದಂಡದ ಮೇಲೆ ಅವಕಾಶ ನೀಡಿದ್ದಾರೆ ಎಂಬುದು ಆಶ್ಚರ್ಯಕರ. 12 ಅಡಿ ಗುಳಿ‌ತೆಗೆದು ಒಂದೇ ಹಂತದಲ್ಲಿ 50 ರಿಂದ 60 ಮದ್ದುಗಳನ್ನು ಹಾಕಿ ಸಿಡಿಸಲಾಗುತ್ತಿದೆ. ಸ್ಪೋಟಕ ಮತ್ತು ನಿರಂತರ ಜೆಸಿಬಿ ಬಳಕೆಯಿಂದ ಬರುತ್ತಿರುವ ಶಬ್ಧ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಸ್ಪೋಟಕದಿಂದ‌ ಮನೆಗಳು‌ ನಡುಗುತ್ತಿವೆ. ಸುತ್ತಮುತ್ತಲಿನ ತೋಟಗದ್ದೆಗಳಿಗೆ ಹಾನಿಯಾಗುತ್ತಿವೆ. ಹಿಂದೆ ಇದೇ ರೀತಿ ತೊಂದರೆಯಾದಾಗ ಅಧಿಕಾರಿಗಳ ಗಮನಕ್ಕೆ ತಂದ ನಂತರ ನಿಲ್ಲಿಸಲಾಗಿತ್ತು. ಆದರೆ ಈಗ ಮತ್ತೆ ಗಣಿಗಾರಿಕೆಗೆ ಚಾಲನೆ ನೀಡಲಾಗಿದೆ ಎಂದು ಆರೋಪಿಸಿದರು.

ಕೂಡಲೇ ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸುವಂತೆ ಕಳೂರು ಗ್ರಾಮಸ್ಥರು ಗ್ರೇಡ್ 2 ತಹಶೀಲ್ದಾರ್ ರಾಕೇಶ್ ಪ್ರಾನ್ಸಿಸ್ ಬ್ರಿಟ್ಟೋರಿಗೆ ಮನವಿ ಸಲ್ಲಿಸಿದ್ದಾರೆ.

ಈ ವೇಳೆ ಕಳೂರು ಗ್ರಾಮಸ್ಥರಾದ ರಮೇಶ್, ನಾಗೇಂದ್ರ, ಶಾಮಿಯಾನ ಶಿವಕುಮಾರ್, ಕಟ್ಟೆ ಸುರೇಶ, ಧರ್ಮರಾಜ್, ಗಣೇಶ್, ವರದರಾಜ್, ಮಂಜುನಾಥ, ಮಹೇಂದ್ರ, ಕಟ್ಟೆ ರಾಘು, ಮನೋಜಕುಮಾರ್, ಆಟೋ ಗಣೇಶ್, ನಾಗರಾಜ್, ಗಣೇಶ್, ಚಂದ್ರಶೇಖರ್, ಆಟೋ ಕುಮಾರ್ ಇದ್ದರು.

Exit mobile version