
ಹೊಸನಗರ ಪಟ್ಟಣ ಪಂಚಾಯತಿ ಸಭೆ:
ನೂತನ ಕಚೇರಿ ನಿರ್ಮಾಣಕ್ಕೆ ತೆರಿಗೆ ಹಣ ಬೇಡ: ವಿಶೇಷ ಅನುದಾನ ತರಲು ಶಾಸಕರು ಗಮನಹರಿಸಲಿ: ಸದಸ್ಯರ ಆಗ್ರಹ
ಹೊಸನಗರ: ಹೊಸನಗರ ಪಟ್ಟಣ ಪಂಚಾಯ್ತಿ ನೂತನ ಕಟ್ಟಡ ನಿರ್ಮಾಣಕ್ಕೆ ತೆರಿಗೆ ಹಣ ಬೇಡ. ವಿಶೇಷ ಅನುದಾನ ತರಲು ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಯತ್ನಿಸಲಿ ಎಂದು ಪಟ್ಟಣ ಪಂಚಾಯ್ತಿ ಸದಸ್ಯರು ಒಕ್ಕೊರಲ ಒತ್ತಾಯ ಮಾಡಿದ್ದಾರೆ
ಪಟ್ಟಣ ಪಂಚಾಯ್ತಿ ನಡೆದ ಸಾಮಾನ್ಯ ಸಭೆಯಲ್ಲಿ ಕಟ್ಟಡ ನಿರ್ಮಾಣ, ತೆರಿಗೆ ವಿಚಾರ ಮಾರ್ದನಿಸಿತು.
ಇಲ್ಲಿನ ಪಟ್ಟಣ ಪಂಚಾಯತಿಗೆ ಸೇರಿದ ಹತ್ತನೇ ಹಣಕಾಸು ಮಳಿಗೆ, ಹಳೇ ಕೋರ್ಟ್ ಸರ್ಕಲ್ ಮಳಿಗೆ, ಎಸ್ ಬಿ ಐ ಮುಂಭಾಗದ ಮಳಿಗೆ, ಬಸ್ ನಿಲ್ದಾಣದ ಮಳಿಗೆ ಹಾಗೂ ಮೀನು ಮಾರುಕಟ್ಟೆ ಗಳ ಬಾಡಿಗೆ ಬಾಬ್ತು ಜೂನ್ 24 ರ ಅಂತ್ಯಕ್ಕೆ ಸುಮಾರು ರೂ 40,32,476 ಬಾಕಿ ಉಳಿದಿದೆ. ಇದನ್ನೂ ಕಾನೂನು ಮೂಲಕ ಕ್ರಮಕೈಗೊಂಡು ವಸೂಲಿಗೆ ಕೂಡಲೇ ಮುಂದಾಗುವಂತೆ ಸಭೆ ಒಕ್ಕೊರಲಿನಿಂದ ಆಗ್ರಹಿಸಿದೆ.
ಕಳೆದ ಹತ್ತಾರು ವರ್ಷಗಳಿಂದ ಸುಮಾರು 30 ಮಂದಿ ಟೆಂಡರ್ ದಾರರು ಹಲವು ವರ್ಷಗಳ ಮಳಿಗೆ ಬಾಡಿಗೆಯನ್ನೆ ಸರಿಯಾಗಿ ಪಾವತಿಸಿಲ್ಲ. ಈ ಹಿಂದಿನ ಅಧಿಕಾರಿಗಳು ಈ ವರೆಗೆ ಏನು ಮಾಡ್ತ ಕುಳಿತ್ತಿದ್ದರು.?! ಇದರಿಂದ ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ಭಾರೀ ಹಿನ್ನಲೆ ಆಗಿದೆ. ಈ ಕೂಡಲೇ ಬಾಕಿ ಬಾಡಿಗೆ ವಸೂಲಿ ಕ್ರಮ ವಹಿಸುವಂತೆ ಸಭೆ ತಾಕೀತು ಮಾಡಿತು.
ಇದಕ್ಕೆ ಮುಖ್ಯಾಧಿಕಾರಿ ಉತ್ತರ ನೀಡಿ, ಪ್ರತಿ ಬಾರಿ ಬಾಡಿಗೆ ವಸೂಲಿಗೆ ಸಿಬ್ಬಂದಿಗಳು ಮುಂದಾದಾಗ, ರಾಜಕೀಯ ವ್ಯಕ್ತಿಗಳ ಮೂಲಕ ಪ್ರಭಾವ ಬಳಸಲಾಗುತ್ತಿದೆ, ಸಿಬ್ಬಂದಿಗಳು ಸರಿಯಾದ ಕ್ರಮವಹಿಸದಂತೆ ತಡೆಯಲಾಗಿದೆ. ಚುನಾಯಿತ ಜನಪ್ರತಿನಿಧಿಗಳಾಗಲಿ, ಪ್ರಭಾವಿ ವ್ಯಕ್ತಿಗಳಾಗಲಿ ನಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸದೆ ಇದ್ದಲ್ಲಿ ಶೀಘ್ರದಲ್ಲೆ ಈ ಮಳಿಗೆಗಳ ಬಾಡಿಗೆ ಬಾಕಿ ವಸೂಲಿಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬೆನ್ನಲ್ಲೆ ಸಭೆ ನಿರ್ಧಾರ ಅಂಗೀಕರಿಸಿತು.
ಸದಸ್ಯ ಉಮೇಶ್ ಹಾಲಗದ್ದೆ ಮಾತನಾಡಿ, ಪಟ್ಟಣ ಪಂಚಾಯತಿ ವಾರ್ಷಿಕ ಆದಾಯ ರೂ 56 ಲಕ್ಷ ಇದ್ದು ಮುಂದಿನ ಸಾಲಿನ ಆಯಾ-ವ್ಯಯಕ್ಕೆ ರೂ 64 ಲಕ್ಷ ಹೊಂದಿರುವುದು ಸ್ವಾಗತರ್ಹ ಸಂಗತಿ. ಈ ಹಣವನ್ನು ಪಟ್ಟಣದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಬೇಕೇ ಹೊರತು ಹೊಸ ಕಚೇರಿ ನಿರ್ಮಾಣಕ್ಕೆ ಕೂಡದು ಎಂದು ಸಭೆಯ ಗಮನಕ್ಕೆ ತಂದರು. ಉಳಿದ ಸದಸ್ಯರು ಒಪ್ಪಿಗೆ ಸೂಚಿಸಿದ್ದು ವಿಶೇಷವಾಗಿತ್ತು.
ಸದಸ್ಯೆ ಕೃಷ್ಣವೇಣಿ ಮಾತನಾಡಿ, ಇಲ್ಲಿನ ಶಿವಪ್ಪನಾಯಕ ಮಾರುಕಟ್ಟೆಯಲ್ಲಿ ಹಲವು ನ್ಯೂನ್ಯತೆಗಳಿವೆ. ಭದ್ರತೆಗೆ ಮಾರುಕಟ್ಟೆ ಸುತ್ತ ತಂತಿ ಬೇಲಿ ಹಾಗು ಹೆಚ್ಷುವರಿ ಶೌಚಾಲಯ ಶೀಘ್ರ ಆಗಬೇಕಿದೆ. ಆಲ್ಲದೆ, ಮಳೆಗಾಲದಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಬಾವಿಗಳ ಸ್ವಚ್ಚತಾ ತರವಲ್ಲ. ಸೋರುತ್ತಿರುವ ನಮ್ಮ ಕಚೇರಿಯ ಕೆಲವು ಭಾಗದಲ್ಲಿ ಮೊದಲು ಎ.ಸಿ.ಶೀಟ್ ಅಳವಡಿಸಿ ಎಂದು ಸಭೆಯ ಗಮನಸೆಳೆದರು.
ಸಭೆಯಲ್ಲಿ ಬಸ್ ನಿಲ್ದಾಣದ ಹೈ ಮಾಸ್ಕ್ ಕಂಬಕ್ಕೆ ಹೊಸ ದೀಪ ಅಳವಡಿಸುವುದು, ನೀರು ಸರಬರಾಜು ವಾರ್ಷಿಕ ಟೆಂಡರ್ ಕರೆಯುವುದು, ಸರ್ವೆ ನಂಬರ್ 40 ಹಾಗೂ 158ರ ಆಶ್ರಯ ಕಾಲೋನಿ ಫಲಾನುಭವಿಗಳ ನಿವೇಶನಗಳಿಗೆ ಪಿಐಡಿ ನೀಡುವುದು, ಬಸ್ ನಿಲ್ದಾಣ ಸೇರಿಕೆ ತಡೆ, ಪಂಚಾಯತಿ ವ್ಯಾಪ್ತಿಯನ್ನು ಹೆಚ್ಚಿಸಿ ಪುರಸಭೆ ದರ್ಜೆಗೆ ಏರಿಸಲು ಅಗತ್ಯ ಸಂಗತಿ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು.
ತಹಶೀಲ್ದಾರ್ ರಶ್ಮೀ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಗುರುರಾಜ, ನಾಗರಾಜ, ಅಶ್ವಿನಿ, ಸಿಂಥಿಯಾ, ಶಾಹಿನ, ಚಂದ್ರಕಲಾ, ಗಾಯತ್ರಿ ನಾಮ ನಿರ್ದೇಶಿತ ಸದಸ್ಯರಾದ ಹೆಚ್.ಎಂ. ನಿತ್ಯಾನಂದ, ಕೆ.ಎಸ್.ಗುರುರಾಜ್, ನೇತ್ರಾ ಸುಬ್ರಾಯಭಟ್, ಮುಖ್ಯಾಧಿಕಾರಿ ಎನ್.ಕೆ.ಸುರೇಶ್, ಕಂದಾಯ ನಿರೀಕ್ಷಕ ಮಂಜುನಾಥ್ ಸಿಬ್ಬಂದಿಗಳಾದ ಉಮಾ ಶಂಕರ್, ಲಕ್ಷಣ, ಸುಮಿತ್ರಾ, ಪರಶುರಾಮ, ಗರೀಶ್, ನೇತ್ರಾವತಿ ಇಂಜಿನಿಯರ್ ವಿಠಲ್ ಹೆಗಡೆ ಉಪಸ್ಥಿತರಿದ್ದರು.