
ಹೊಸನಗರ: ಚೆಲುವೆಯನ್ನು ಪೃಕೃತಿಗೆ ಹೋಲಿಸುತ್ತಾರೆ. ಆದರೆ ಪ್ರಕೃತಿಯಲ್ಲಿನ ಜೀವಿಯೊಂದು ಚೆಲುವೆಯ ಮುಖಚಿತ್ರ ಹೊಂದಿದ್ದರೆ….
ಹೌದು ಇಂತಹ ಒಂದು ವಿಸ್ಮಯದ ಘಟನೆಗೆ ನಾಗರಕೊಡಿಗೆ ಸಾಕ್ಷಿಯಾಗಿದೆ.
ಬಣ್ಣ ಬಣ್ಣದ ವಿನ್ಯಾಸವುಳ್ಳ ಸುಂದರ ನಟ ನಟಿಯರ ಮುಖಚಿತ್ರ ಇರುವ ಧಿರಿಸು ಧರಿಸುವುದು ಫ್ಯಾಶನ್ ಪ್ರಿಯರ ಗೀಳು. ಈ ಗೀಳು ಹುಳು ಹಪ್ಪಟೆಗಳಿಗೂ ಹಿಡಿಯಿತೊ ಎನ್ನುವಂತೆ ಇಲ್ಲೊಂದು ಹುಳ ಕಂಡು ಬಂದಿದೆ.


ಇಲ್ಲೊಂದು ಹುಳು (ಕೀಟ) ತನ್ನ ಮೈಯ ಮೇಲ್ಮೈಯಲ್ಲಿ ಚೆಲುವೆಯ ಮುಖಚಿತ್ರವನ್ನು ಮೈಗೂಡಿಸಿಕೊಂಡು ಗಮನ ಸೆಳೆದಿದೆ. ಹುಳುವಿನ ಮೇಲೆ ಸುಂದರ ಯುವತಿಯ ಚಿತ್ರ ಒಡಮೂಡಿದ್ದು ಅಚ್ಚರಿಗೆ ಕಾರಣವಾಗಿದೆ.
ಮೊನ್ನೆ ದೀಪಾವಳಿ ಸಮಯದಲ್ಲಿ ತಾಲ್ಲೂಕಿನ ನಾಗರಕೊಡಿಗೆ ಗ್ರಾಮದ ಎಂ.ಸಿ. ಸುಬ್ರಹ್ಮಣ್ಯ ಅವರ ಮನೆಗೆ ಒಂದು ಅತಿಥಿ ಬಂದಿದೆ. ಸಂಜೆ ಸುಮಾರಿಗೆ ಬಂದ ಈ ಅತಿಥಿಯನ್ನು ಯಾರು ಒಳ ಕರೆದಿಲ್ಲ. ಕೂರಿಸಿ ಕಷ್ಟ ಸುಖ ವಿಚಾರಿಸಿಲ್ಲ. ಆದರೂ ಮನೆಯ ಸೂರಂಚಿಗೆ ಬಂದ ಈ ಅತಿಥಿ ಒಳ ಬರಲು ನೋಡಿದೆ. ಟೈಲ್ಸ್ ನೆಲದಲ್ಲಿ ಸರಸರನೇ ಬರಲಾಗದೇ ಮೆಲ್ಲ ಮೆಲ್ಲನೆ ಅಡಿ ಇಟ್ಟಿದೆ. ಆಗ ಮನೆಯೊಡತಿ ಅನ್ನಪೂರ್ಣ ಈ ಅತಿಥಿಯನ್ನು ನೋಡಿ ‘ಇವರೇಕೆ ಬಂದರು.. ಎಂದು ಕಾಲಿನಲ್ಲಿ ಹೊರದೂಡಲು ಕಾಲು ಚಾಚಿದ್ದಾರೆ. ಆಗ ಅಚ್ಚರಿಯೊಂದು ಕಂಡಿದ್ದು.. ನೋಡಿ ಬೆರಗಾಗಿದ್ದಾರೆ.
ಹುಡುಗಿ ಚಿತ್ರ ಇರುವ ಹುಳು ಬರುತ್ತಿದೆಯೆಲ್ಲಾ.. ಅರರೆ ಇದೇನಿದು..
ಮನೆ ಬಾಗಿಲಿಗೆ ಬಂದ ಹುಳುವಿನ ಮೈ ಮೇಲೆ ಸುಂದರ ಯುವತಿಯ ರೂಪ ನೋಡಿ ಆಶ್ಚರ್ಯ ಪಟ್ಟಿದ್ದಾರೆ. ಕಾಗದ ಚೂರು ಅಂಟಿರಬಹುದೇನು ಎಂದು ಹತ್ತಿರದಿಂದ ಪರೀಕ್ಷಿಸಿದರೂ ಏನು ತಿಳಿಯಲಿಲ್ಲ. ಮಂಡೆಬಿಸಿ ಮಾಡಿಕೊಂಡ ಇವರು ಡಬ್ಬಿಯಲ್ಲಿ ಬಂಧಿಸಿಟ್ಟು ಸುಮ್ಮನಾಗಿದ್ದಾರೆ.
ಮನೆಗೆ ಬಂದರಿಗೆಲ್ಲ ಈ ಹುಳುವಿನ ಸೌಂಧರ್ಯವನ್ನು ತೋರಿಸಿ ಖುಷಿ ಪಡುತ್ತಿದ್ದಂತೆ ಒಂದು ದಿನ ಹುಳು ಕಾಣೆ ಆಗಿದೆ. ಡಬ್ಬಿಯಿಂದ ಹೊರ ನಡೆದ ಹುಳು ಜಗುಲಿ ದಾಟಿ ಹೊಗಿದೆ. ಮತ್ತೆ ಕಾಣಸಿಗಲಿಲ್ಲ.
ಎಲೆ ಕೀಟವೇ?:
ಅಷ್ಟರಲ್ಲೆ ವಿಷಯ ತಿಳಿದ ಕೆಲವರು ಮನೆಗೆ ಬಂದು ನೋಡಿದ್ದು ಹುಡುಗಿ ಚಿತ್ರ ಹೆಂಗೆ ಬಂತು ಎಂದು ತಲೆಕೆಡಿಸಿ ಕೊಂಡವರೇ ಹೆಚ್ಚು.
ಕೆಲ ಕೀಟಗಳು, ಹುಳುಗಳು ಎಲೆ ಆಕಾರ ಹೊಂದಿರುತ್ತವೆ. ಮಾವು, ಹಲಸು, ಕೌಲು ಮರದಲ್ಲಿ ಅದರ ಎಲೆಯಂತೆ ಕೀಟಗಳು ಅವತರಿಸಿದ ಉದಾಹರಣೆಗಳು ಇದೆ. ಗಿಡದಲ್ಲಿ ಹಸಿರೆಲೆ ಆಕಾರ ಹೊಂದಿರುವ ಕೀಟವು ನಡೆದಾಡಿ ಅಚ್ಚರಿಗೆ ಕಾರಣವಾಗಿದ್ದು ಇದೆ.
ಆದರೆ ಹುಳುವಿನ ಮೇಲ್ಮೈಯಲ್ಲಿ ಸುಂದರ ಯುವತಿಯ ಮುಖಚಿತ್ರ ಹೇಗೆ ಒಡಮೂಡಿರಬಹುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಪ್ರಶ್ನೆ ಹಾಗೆ ಉಳಿದಿದೆ.
ಅಚ್ಚರಿ ತಂತು:
ದೀಪಾವಳಿಯಂದು ಕಾಣಿಸಿಕೊಂಡ ಕೀಟ ಅಚ್ಚರಿ ತರಿಸಿತು. ಆದರೆ ಚೆಲುವೆಯ ಭಾವಚಿತ್ರವನ್ನು ಮೈಮೇಲೆ ಚಿತ್ರಿಕೊಂಡಂತೆ ಬಂದ ಈ ಕೀಟ ಮತ್ತೆ ಮರೆಯಾಗಿದೆ. ಆದರೆ ಕುತೂಹಲ ಮುಂದುವರೆದಿದೆ.
ಅನ್ನಪೂರ್ಣ ನಾಗರಕೊಡಿಗೆ.
