
-
HOSANAGARA| ಮನೆಪಕ್ಕದ ತೋಟಕ್ಕೆ ಹೋದ ವೃದ್ಧೆ ನಾಪತ್ತೆ | ಹುಡುಕಾಟ ಆರಂಭಿಸಿದ ನೂರಾರು ಜನರು | ವೃದ್ಧೆ ಜೊತೆ ನಾಪತ್ತೆಯಾಗಿದ್ದ ಶ್ವಾನ ಇಂದು ಪ್ರತ್ಯಕ್ಷ | 24 ಗಂಟೆಯಾದರೂ ವೃದ್ಧೆಯ ಸುಳಿವಿಲ್ಲ
ಹೊಸನಗರ: ಮನೆಯಲ್ಲಿದ್ದ ವೃದ್ಧೆ ಮನೆಪಕ್ಕದ ತೋಟಕ್ಕೆ ಹೋದವರು ನಾಪತ್ತೆಯಾದ ಘಟನೆ ಕರಿಮನೆ ಗ್ರಾಪಂ ವ್ಯಾಪ್ತಿಯ ಸಾದಗಲ್ ಗ್ರಾಮದಲ್ಲಿ ನಡೆದಿದೆ.
ಸಾದಗಲ್ ಗ್ರಾಮದ ಚನ್ನಪ್ಪಗೌಡ ಎಂಬುವವರ ಪತ್ನಿ 85 ವರ್ಷದ ಶಾರದಮ್ಮ ನಾಪತ್ತೆಯಾಗಿರುವ ವೃದ್ಧೆ.
ಭಾನುವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ತೋಟಕ್ಕೆ ದನ ಬಂದಿದಾವೇನೋ.. ನೋಡ್ಕೊಂಡು ಬರ್ತೀನಿ ಅಂತ ಹೋದ ಶಾರದಮ್ಮ ಮತ್ತೆ ವಾಪಾಸ್ ಬರಲಿಲ್ಲ. ಕೆಲಸಮಯ ಕಳೆದರೂ ಶಾರದಮ್ಮ ಮನೆಗೆ ಬಾರದ ಕಾರಣ ಮನೆಯವರು ತೋಟ, ಗದ್ದೆ ಜಮೀನು ಪ್ರದೇಶದಲ್ಲಿ ಹುಡುಕಾಡಿದ್ದಾರೆ.
ಹುಡುಕುತ್ತಿರುವ ನೂರಾರು ಜನರು:
ಭಾನುವಾರ ಮಧ್ಯಾಹ್ನದಿಂದ ನಾಪತ್ತೆಯಾದ ಶಾರದಮ್ಮ ರಾತ್ರಿ ಕಳೆದು ಬೆಳಗಾದರೂ ಸುಳಿವೇ ಇಲ್ಲ. ವಿಷಯ ತಿಳಿದು ಇಂದು ಬೆಳಿಗ್ಗೆ ಒಂದೆಡೆ ಸೇರಿದ ನೂರಾರು ಜನರು ಮನೆಹತ್ತಿರದ ಚಿಕ್ಕಟ್ಟಬ್ಬಿ, ಸಾದಗಲ್, ಕೆರೆ, ಬಾವಿ, ಹಳ್ಳಕೊಳ್ಳಗಳನ್ನು ಬಿಡದೇ ಹುಡುಕಾಡುತ್ತಿದ್ದಾರೆ. ಅಲ್ಲದೇ ಹತ್ತಿರದ ಕಾಡುಗಳ ಒಳಹೊಕ್ಕು ಹುಡುಕಿದರೂ ವೃದ್ಧೆಯ ಸುಳಿವು ಮಾತ್ರ ಸಿಕ್ಕಿಲ್ಲ.
ವೃದ್ಧೆ ಜೊತೆ ನಾಪತ್ತೆಯಾಗಿದ್ದ ಶ್ವಾನ ಹಾಜರ್:
ಭಾನುವಾರ ವೃದ್ಧೆಯೊಂದಿಗೆ ನಾಪತ್ತೆಯಾಗಿದ್ದ ಮನೆಯ ಶ್ವಾನದ ಸುಳಿವು ಕೂಡ ಇರಲಿಲ್ಲ. ಆದರೆ ಇಂದು ಬೆಳಿಗ್ಗೆ ಮನೆ ಆವರಣದಲ್ಲಿ ಶ್ವಾನ ಪತ್ತೆಯಾಗಿದೆ.
ಶಾರದಮ್ಮ ಕುಟುಂಬದ ಬಂಧುಗಳು, ನೆಂಟರು ಹುಡುಕಾಟ ನಡೆಸುತ್ತಿರುವ ಜೊತೆ ನಗರ ಪೊಲೀಸ್ ಠಾಣೆಗೂ ಮಾಹಿತಿ ತಿಳಿಸಿದ್ದು, ಪೊಲೀಸರು ಕೂಡ ಶೋಧ ಕಾರ್ಯದಲ್ಲಿ ಭಾಗವಹಿಸಿದ್ದರು. ಇವರಿಗೆ ಸಾದಗಲ್, ಬಾವಿಕಟ್ಟೆ, ಹಲಸಿನಹಳ್ಳಿ, ಕರಿಮನೆ ಗ್ರಾಮಸ್ಥರು ಸಾಥ್ ನೀಡಿದ್ದಾರೆ.
ಮನೆಯಲ್ಲಿ ಆರೋಗ್ಯವಾಗಿದ್ದ ಶಾರದಮ್ಮ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.