
ಹೊಸನಗರ: ತಾಲೂಕಿನ ಹುಲಿಕಲ್ ಸುರೇಶ್ ಭಟ್ಟರ ಬೈಕ್ ನಲ್ಲಿ ನಾಗರ ಹಾವೊಂದು ಅವಿತು ಆತಂಕ ಮೂಡಿಸಿದ ಘಟನೆ ಶುಕ್ರವಾರ ನಡೆದಿದೆ.
ಹುಲಿಕಲ್ ಚಂಡಿಕೇಶ್ವರಿ ದೇವಸ್ಥಾನದ ಆವರಣದಲ್ಲಿ ನಿಂತಿದ್ದ ಅರ್ಚಕ ಸುರೇಶ್ ಭಟ್ಟರ ಹೋಂಡಾ ಆಕ್ಟೀವಾ ಬೈಕ್‌ನಲ್ಲಿ ನಾಗರಹಾವು ಅವಿತಿದ್ದು ಭಟ್ಟರ ಗಮನಕ್ಕೆ ಗುರುವಾರ ಸಂಜೆ ಗಮನಕ್ಕೆ ಬಂದಿದೆ. ಆದರೆ ರಾತ್ರಿವರೆಗೂ ಎಷ್ಟೇ ಪ್ರಯತ್ನ ಮಾಡಿದರೂ ಹಾವು ಮಾತ್ರ ಕದಲಲೇ ಇಲ್ಲ. ಕೊನೆಗೆ ಹಾವು ತನ್ನಷ್ಟಕ್ಕೆ ಹೋಗಬಹುದು ಭಾವಿಸಿ ಸುಮ್ಮನಾದರು.
ಬೆಳಿಗ್ಗೆ ಎದ್ದು ಮತ್ತೆ ನೋಡಿದರೆ ಹಾವು ಬೈಕ್ ನಲ್ಲೇ ಇದ್ದು ಒಂದಿಂಚು ಕದಲಿರಲಿಲ್ಲ. ಬಳಿಕ ಬೇರೆ ದಾರಿ ಕಾಣದೇ ಸ್ಥಳೀಯ ಉರಗ ತಜ್ಞ ನಾರಾಯಣ ಕಾಮತ್ ರಿಗೆ ಸುದ್ದಿ ಮುಟ್ಟಿಸಿ ಕರೆಸಿದರು.
ನಾರಾಯಣ ಕಾಮತ್ ಬಂದು ಬೈಕ್ ನ ಒಂದೊಂದೆ ಭಾಗವನ್ನು ಬಿಚ್ಚಿ ನಾಗರಹಾವನ್ನು ಸೆರೆ ಹಿಡಿದರು. 4 ಅಡಿ ಉದ್ದದ ಹಾವನ್ನು ಬಳಿಕ ಸುರಕ್ಷಿತವಾಗಿ ಸಮೀಪದ ಕಾಡಿಗೆ ಬಿಡಲಾಯಿತು.
ಆದರೂ ಬುಸುಗುಡುತ್ತಲೇ ಇದ್ದ ಹಾವು ಅಲ್ಲೇ ಇದ್ದ ಮರದ ಕೊಂಬೆಯನ್ನು ಏರಿ ಹೆಡೆ ಅರಳಿಸಿ ರೋಷ ವ್ಯಕ್ತಪಡಿಸುತ್ತಿದ್ದು ನೋಡಿ ಆಶ್ಚರ್ಯ ತರಿಸಿತ್ತು. ಕೊಂಚ ಹೊತ್ತು ಕಾದೆವು ಆದರು ಅದು ಅರಳಿಸಿದ ಹೆಡೆಯನ್ನು ಮಡಚಲೇ ಇಲ್ಲ. ನಿಂತು ನಿಂತು ಇಂಬಳ ಕಚ್ಚಿಸಿಕೊಂಡು ಸಾಕಾಗಿ ಅಲ್ಲಿಂದ ಹೊರೆಟೆವು ಎನ್ನುತ್ತಾರೆ. ನಾರಾಯಣ ಕಾಮತ್.
ಸಾಕಷ್ಟು ಕುತೂಹಲಕ್ಕೆ ಕಾರಣವಾದ ಈ ಕಾರ್ಯಾಚರಣೆಗೆ ಮನೋಜ್, ಸುರೇಶ್, ಶ್ಯಾಮ್, ಮಾಸ್ತಿಕಟ್ಟೆ ರವಿ ಸಾಕ್ಷಿಯಾದರು.