ಹೊಸನಗರಉಡುಪಿಶಿವಮೊಗ್ಗ

ವೈಟ್ ಬೋರ್ಡ್ ಜೀಪ್ ನಲ್ಲಿ ಬಾಡಿಗೆ ನಿಲ್ಲಿಸಿ, ಯೆಲ್ಲೋ ಬೋರ್ಡ್ ಜೀಪ್ ಗಳಲ್ಲಿ ನಿಯಮ ಮೀರಿ ಜನ ತುಂಬಿದರೂ ಕ್ರಮ ಕೈಗೊಳ್ಳಿ | ಕೊಡಚಾದ್ರಿ ಜೀಪ್ ವಿವಾದ ಕುರಿತ ಸಭೆಯಲ್ಲಿ ಒಕ್ಕೊರಲ ಆಗ್ರಹ

ಹೊಸನಗರ: ಕೊಡಚಾದ್ರಿ ಗಿರಿಗೆ ಹೋಗುವ ಜೀಪ್‌ಗಳಲ್ಲಿ ಯೆಲ್ಲೋ ಮತ್ತು ವೈಟ್ ಬೋರ್ಡ್ ವಿವಾದ ಭುಗಿಲೆದ್ದಿದ್ದು ಶನಿವಾರ ಜೀಪ್‌ನ್ನು ಅಡ್ಡಗಟ್ಟಿದ ವೀಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಕಾರ್ಯನಿರ್ವಹಿಸುವ ಹಲವು ಸಮಿತಿಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ ವಿವಾದ ಬಗೆ ಹರಿಸುವ ಪ್ರಯತ್ನ ನಡೆಸಿವೆ.

ವೈರಲ್ ವೀಡಿಯೋ:
ಶನಿವಾರ ಕೊಡಚಾದ್ರಿ ಗಿರಿಗೆ ಸಾಗುವ ಮಾರ್ಗದಲ್ಲಿರುವ ವನ್ಯಜೀವಿ ಇಲಾಖೆಯ ಗೇಟ್ ಬಳಿಯಲ್ಲಿ ವೈಟ್ ಬೋರ್ಡ್ ಹೊಂದಿರುವ ಜೀಪ್‌ನ್ನು ಅಡ್ಡಗಟ್ಟಿದ ಯೆಲ್ಲೋ ಬೋರ್ಡ್ ಜೀಪ್ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಇದನ್ನು ಲೆಕ್ಕಿಸದೇ ಅಡ್ಡಗಟ್ಟಿದವರನ್ನು ದೂಡಿಕೊಂಡೇ ಜೀಪ್ ಚಲಾಯಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು ವಿ ಭುಗಿಲೆದ್ದಿತ್ತು.


ವಿವಾದ ಬಗೆ ಹರಿಸಲು ಸಭೆ:
ವಿವಾದ ಭುಗಿಲೇಳುತ್ತಿದ್ದಂತೆ ಕಟ್ಟಿನಹೊಳೆ ಟ್ಯಾಕ್ಷಿ ಯೂನಿಯನ್ ಸೋಮವಾರ ಸಭೆ ನಡೆಸಿದ್ದು ಇದರಲ್ಲಿ ಕರ್ನಾಟಕ ಟ್ಯಾಕ್ಷಿ ಚಾಲಕರ ಆಸೋಷಿಯೇಶನ್, ಕೊಡಚಾದ್ರಿ ವ್ಯವಸ್ಥಾಪನ ಸಮಿತಿ, ಇಡಿಸಿ ಸಮಿತಿ, ಗ್ರಾಪಂ, ಪೊಲೀಸ್ ಇಲಾಖೆಯ ಸಿಬ್ಬಂದಿಗಳು, 50ಕ್ಕು ಹೆಚ್ಚು ಚಾಲಕರು, ಮಾಲಕರು ಪಾಲ್ಗೊಂಡಿದ್ದರು.
ಈ ವೇಳೆ ಇನ್ಸೂರೆನ್ಸ್, ಟ್ಯಾಕ್ಸ್ ಕಟ್ಟಿಕೊಂಡು ಯೆಲ್ಲೊ ಬೋರ್ಡ್ ಜೀಪ್‌ನ್ನು ಕಷ್ಟಪಟ್ಟು ನಡೆಸುತ್ತಿದ್ದಾರೆ. ಆದರೆ ಇದ್ಯಾವುದರ ಗೊಡವೇ ಇಲ್ಲದ ವೈಟ್ ಜೀಪ್ ಮಾಲೀಕರು ಬಾಡಿಗೆ ಮಾಡುತ್ತಿದ್ದಾರೆ. ಹೀಗಾದರೇ ಯೆಲ್ಲೋ ಬೋರ್ಡ್ಗೆ ಮಾನ್ಯತೆ ಎಲ್ಲಿದೆ ಎಂದು ಪ್ರಶ್ನಿಸಿದರು. ವೈಟ್ ಬೋರ್ಡ್ ಜೀಪ್ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.


ಪೊಲೀಸ್ ಇಲಾಖೆಯ ದಫೈದಾರ್ ವೆಂಕಟೇಶ್, ಯಾವುದೇ ವಾಹನವನ್ನು ನಿಯಮ ಉಲ್ಲಂಘಿಸಿ ಚಲಾಯಿಸುವುದು ತಪ್ಪು, ಅದೇ ರೀತಿ ವಾಹನವನ್ನು ಏಕಾಏಕಿ ಅಡ್ಡಗಟ್ಟುವುದು ತಪ್ಪು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ಎಂದರು.
ಕೊಡಚಾದ್ರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿಟ್ಟೂರು ಶಿವರಾಮ ಶೆಟ್ಟಿ, ಕೊಡಚಾದ್ರಿಗೆ ಧಾರ್ಮಿಕ ನಂಬಿಕೆ ಹೊಂದಿದ ಅಪಾರ ಭಕ್ತರು ಬರುತ್ತಾರೆ. ಅವರನ್ನು ಗಿರಿಗೆ ಕರೆತಂದು ಸುರಕ್ಷಿತವಾಗಿ ವಾಪಾಸು ಬಿಡುವ ಜವಾಬ್ದಾರಿ ಜೀಪಿನ ಚಾಲಕ ಮತ್ತು ಮಾಲಕರದ್ದು. ಅನಗತ್ಯ ವಿವಾದ ಮಾಡಿಕೊಳ್ಳದೇ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುವಂತೆ ಮನವಿ ಮಾಡಿದರು.

ಕಟ್ಟಿನಹೊಳೆ ಟ್ಯಾಕ್ಸಿ ಯೂನಿಯನ್ ಅಧ್ಯಕ್ಷ ಕಟ್ಟಿನಹೊಳೆ ಗೋಪಾಲ್, ಯುನಿಯನ್ ವ್ಯಾಪ್ತಿಗೆ ಒಳಪಟ್ಟ ವೈಟ್ ಬೋರ್ಡ್ ಜೀಪ್ ನಿಲ್ಲಿಸಲು ಅಭ್ಯಂತರವಿಲ್ಲ. ಇಂದಿನಿಂದಲೇ ನಿಲ್ಲಿಸುತ್ತೇವೆ. ಅದೇ ರೀತಿ ಕೊಲ್ಲೂರು ಸಂಪೇಕಟ್ಟೆ, ನಿಟ್ಟೂರು ಇತರೆ ಭಾಗದಿಂದ ಬಾಡಿಗೆ ಮಾಡಿಕೊಂಡು ಬರುವ ವೈಟ್ ಬೋರ್ಡ್ ಜೀಪ್ ಗಳ ಮೇಲು ಕ್ರಮ ಕೈಗೊಳ್ಳಿ ಎಂದರು.

ವೈಟ್ ಬೋರ್ಡ್ಗೆ ಅವಕಾಶವಿಲ್ಲ, ಟ್ಯಾಕ್ಷಿಗಳಲ್ಲೂ ಹೆಚ್ಚಿನ ಜನರನ್ನು ತುಂಬುವಂತಿಲ್ಲ:
ಪರ ವಿರೋಧ ಚರ್ಚೆಗಳ ಬಳಿಕ ವೈಟ್ ಬೋರ್ಡ್ ವಾಹನಗಳನ್ನು ಸ್ವಂತಕ್ಕೆ ಬಳಸಬಹುದೇ ವಿನಃ ಬಾಡಿಗೆ ಮಾಡುವಂತಿಲ್ಲ. ಬೇಕಾದಲ್ಲಿ ಯೆಲ್ಲೋ ಬೋರ್ಡ್ಗೆ ಬದಲಾಯಿಸಲು ಅವಕಾಶವಿದೆ. ಇನ್ನು ಯೆಲ್ಲೋ ಬೋರ್ಡ್ ಹೊಂದಿರುವ ಟ್ಯಾಕ್ಷಿಗಳಲ್ಲಿ ನಿಯಮಕ್ಕಿಂತ ಹೆಚ್ಚಾಗಿ ತುಂಬುವAತಿಲ್ಲ. ಇದು ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ನಿರ್ಧರಿಸಿ ಸಭೆಯಲ್ಲಿ ನಿರ್ಣಯಿಸಲಾಯಿತು. ಈ ನಿರ್ಣಯ ಕೇವಲ ಕಟ್ಟಿನಹೊಳೆಗೆ ಮಾತ್ರ ಸೀಮಿತವಾಗಬಾರದು, ನಿಟ್ಟೂರು, ಸಂಪೇಕಟ್ಟೆ, ಕೊಲ್ಲೂರಿನಿಂದ ಗಿರಿಗೆ ಆಗಮಿಸುವ ಜೀಪ್‌ಗಳಿಗೂ ಅನ್ವಯವಾಗಬೇಕು ಎಂದು ಆಗ್ರಹಿಸಲಾಯಿತು.ಗ್ರಾಪಂ ಸದಸ್ಯ ಸತ್ಯನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು.
ನಿಟ್ಟೂರು ಗ್ರಾಪಂ ಸದಸ್ಯ ಅಶೋಕ ಕುಂಬಳೆ, ಇಡಿಸಿ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಕೆಟಿಡಿಒ ಜಿಲ್ಲಾ ಖಜಾಂಚಿ ಮದುಕುಮಾರ್ ಬಿ.ಎನ್, ಬಿದನೂರು ಟ್ಯಾಕ್ಷಿ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ರಾಜೇಂದ್ರ ಶೆಟ್ಟಿ, ಜಿ.ದೇವೇಂದ್ರ, ಮನುಕುಮಾರ್, ನಾಗೇಂದ್ರ ಜೋಗಿ, ಚಂದಯ್ಯ ಜೈನ್, ರಾಘವೇಂದ್ರ ರಿಪ್ಪನಪೇಟೆ, ನಾಗರಾಜ, ರಮೇಶ್, ಗಣೇಶ್, ತೀರ್ಥೇಶ್, ಪ್ರವೀಣ ಬಟ್ಟೆಮಲ್ಲಪ್ಪ, ದೀಪು ಬಟ್ಟೆಮಲ್ಲಪ್ಪ ಇದ್ದರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *