
ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಭಾಜನರಾದ ಶಿಕ್ಷಕಿ, ಕವಯಿತ್ರಿ.. ಅಂಸ
ಹೊಸನಗರ: ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೌಡಕೊಪ್ಪದ ಶಿಕ್ಷಕಿ ಕವಯಿತ್ರಿ ಶ್ರೀಮತಿ ಅಂಬಿಕಾ ಸಂತೋಷ(ಅಂಸ)ರಿಗೆ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಭವನದ ಅಕ್ಕಮಹಾದೇವಿ ಸಭಾಂಗಣದಲ್ಲಿ ಅಕ್ಷರನಾದ ಪ್ರತಿಷ್ಠಾನ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಸವಿ ನೆನಪಿನಲ್ಲಿ ನಡೆದ ಕವಿನುಡಿ ಸಂಭ್ರಮೋತ್ಸವ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಕ್ಷರನಾದ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕರಾದ ಡಾ. ಶ್ರುತಿ ಮಧುಸೂದನ್ (ರುದ್ರಾಗ್ನಿ) ಹಾಗೂ ಪದಾಧಿಕಾರಿಗಳು ಸಾಹಿತಿ ಶ್ರೀಮತಿ ಅಂಬಿಕಾ ಸಂತೋಷ್ (ಅಂಸ) ಅವರಿಗೆ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಿದರು.
ಈ ವೇಳೆಯಲ್ಲಿ ಮಾತನಾಡಿದ ಸಾಹಿತಿ ಶ್ರೀಮತಿ ಅಂಬಿಕಾ ಸಂತೋಷ (ಅಂಸ) ಕವಿಯ ಅಂತರಾಳದಿಂದ ಹೊರಹೊಮ್ಮುವ ಅನುಭವದ ಬರವಣಿಗೆಯೆ ಸಾಹಿತ್ಯವಾಗಿದೆ. ಕವಿತೆ,ಕವನ,ಕಾದಂಬರಿಗಳನ್ನು ಬರೆಯುವುದೆಂದರೆ ಸಾಮಾನ್ಯದ ಕೆಲಸವಲ್ಲ ಅದೊಂದು ಸಾಹಿತ್ಯದ ತಪಸ್ಸು. ಕವಿಗಳಾಗ ಬಯಸುವವರು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.