
-
ಮೇಲಿನಬೆಸಿಗೆ ಗ್ರಾಪಂ| ಸರ್ಕಾರಿ ಗೋಮಾಳ ಜಮೀನು ಒತ್ತುವರಿ ತೆರವು ಮಾಡಲು ಆಗ್ರಹ
ಹೊಸನಗರ; ತಾಲೂಕಿನ ಹುಂಚ ಹೋಬಳಿ ಮೇಲಿನಬೆಸಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಮಾಳ ಜಾಗದಲ್ಲಿ ಅಕ್ರಮ ಒತ್ತುವರಿ ತೆರವು ಗೊಳಿಸುವಂತೆ ಗ್ರಾಮಸ್ಥರು ತಹಶೀಲ್ದಾರ್ ರಶ್ಮಿ ಹಾಲೇಶ್ ಗೆ ಮನವಿ ಸಲ್ಲಿಸಿದ್ದಾರೆ.
ಶುಕ್ರವಾರ ತಾಲೂಕು ಕಚೇರಿಗೆ ತೆರಳಿ, ವಸವೆ ಗ್ರಾಮದ ಸರ್ವೆ ನಂ 17ರಲ್ಲಿ 38 ಎಕರೆ ಸರ್ಕಾರಿ ಗೋಮಾಳದ ವಿದ್ದು, 4 ಎಕರೆಯಷ್ಟು ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದು ಅಲ್ಲದೇ ಗುಡಿಸಲನ್ನು ಕೂಡ ನಿರ್ಮಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ದಿನಕಳೆದಂತೆ ಭೂ ಒತ್ತುವರಿ ಮುಂದುವರೆಸಲಾಗಿದೆ. ಸರ್ಕಾರಿ ಗೋಮಾಳ ಪ್ರದೇಶ ಸಮತಟ್ಟಾದ ಈ ಭೂ ಪ್ರದೇಶವಾಗಿದ್ದು ಗ್ರಾಮದ ವಿವಿಧ ಸರ್ಕಾರಿ ಯೋಜನೆಗಳ ಅನುಷ್ಠಾನವು ಸೇರಿದಂತೆ ಶಾಲೆ-ಆರೋಗ್ಯ ಕೇಂದ್ರದ ಕಟ್ಟಡಗಳ ನಿರ್ಮಾಣಕ್ಕೆ ಸೂಕ್ತವಾಗಿದೆ. ಈ ಹಿಂದೆಯು ಒತ್ತುವರಿ ತೆರವಿಗಾಗಿ ತಹಶೀಲ್ದಾರ್ ಕಚೇರಿಗೆ ದೂರು ಸಲ್ಲಿಸಿದ್ದರೂ ಈ ವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದರು.
ಈ ಕೂಡಲೇ ಅಕ್ರಮ ಭೂ ಒತ್ತುವರಿಯನ್ನು ತೆರವುಗೊಳಿಸುವಂತೆ ಗ್ರಾಪಂ ಸದಸ್ಯ ಧರ್ಮಪ್ಪ, ಗಣೇಶ್, ಚಂದ್ರಶೇಖರ, ಪ್ರಕಾಶ್ ಮನವಿಯಲ್ಲಿ ಆಗ್ರಹಿಸಿದ್ದಾರೆ.