
ಹೊಸನಗರ.ಆ.14: ಈ ಗ್ರಾಮದಲ್ಲಿ ವಿದ್ಯುತ್ಗಾಗಿ ಅದೆಷ್ಟು ಬೇಡಿಕೆ ಇಟ್ಟರು ಪ್ರಯೋಜನವಾಗಿಲ್ಲ. ಬಳಿಕ ಮನೆಗೊಂದರಂತೆ ಸೋಲಾರ್ ದೀಪವನ್ನು ವ್ಯವಸ್ಥೆ ಮಾಡಲಾಗಿದೆ. ಆದರೆ ಕಳೆದ ಎರಡು ತಿಂಗಳಿಂದ ಸೋಲಾರ್ ಬೆಳಕು ಕೂಡ ಕಾಣದೆ ಕತ್ತಲಲ್ಲಿ ರಾತ್ರಿ ಕಳೆಯುವಂತಾಗಿದೆ.
ಹೌದು ಇದು ಕರಿಮನೆ ಗ್ರಾಪಂ ವ್ಯಾಪ್ತಿಯ ಹುಡೋಡಿ ಗ್ರಾಮದ ಕತ್ತಲಲ್ಲಿ ಮುಳುಗಿದ ಎರಡು ಕುಟುಂಬಗಳ ದೈನೇಸಿ ಸ್ಥಿತಿ ಇದು. ಹೇಳಿ ಕೇಳಿ ಹುಡೋಡಿ ಗ್ರಾಮ ಕರಿಮನೆ ಗ್ರಾಪಂ ವ್ಯಾಪ್ತಿಗೆ ಬಂದರೂ, ಖೈರಗುಂದ ಗ್ರಾಪಂ ಮಾರ್ಗವಾಗಿ ಹುಲಿಕಲ್ನಿಂದ 9 ಕಿಮೀ ದೂರದಲ್ಲಿದೆ. ದಟ್ಟವಾದ ಕಾಡಿನ ನಡುವೆ ಕಾಣಬಹುದಾದ ಈ ಗ್ರಾಮಕ್ಕೆ ಹಗಲಿನಲ್ಲೇ ಹೋಗೋದು ಕಷ್ಟ. ಇನ್ನು ರಾತ್ರಿಯೋ ಸಾಧ್ಯವೇ ಇಲ್ಲ ಎಂಬ ಸ್ಥಿತಿ ಇಲ್ಲಿಯದು.
ಹುಡೋಡಿ.. ಕತ್ತಲಗೂಡು:
ಹುಡೋಡಿ ಗ್ರಾಮದಲ್ಲಿ 8 ಕುಟುಂಬಗಳು ವಾಸವಾಗಿವೆ. ಅದು ಖೈರಗುಂದ ಜಲಾಶಯದ ಮತ್ತೊಂದು ಮಗ್ಗುಲಲ್ಲಿ ಕಾಣಸಿಗುವ ಗ್ರಾಮ. ಈ ಗ್ರಾಮದ ಜನ ವಿದ್ಯುತ್ ಸಂಪರ್ಕಕ್ಕಾಗಿ ಕಳೆದ 3 ದಶಕದಿಂದ ಪ್ರಯತ್ನಿಸುತ್ತಲೇ ಬಂದಿದ್ದಾರೆ. ಆದರೆ ವನ್ಯಜೀವಿ ಇಲಾಖೆಯ ನಿಯಮಗಳಿಂದಾಗಿ ವಿದ್ಯುತ್ ಸಂಪರ್ಕ ಸಾಧ್ಯವಾಗಿಲ್ಲ. ನಕ್ಸಲ್ ಪೀಡಿತ ಪ್ರದೇಶಗಳಲ್ಲೊಂದಾಗಿರುವ ಈ ಗ್ರಾಮಕ್ಕೆ ನಕ್ಸಲ್ ಪ್ಯಾಕೇಜ್ ಬಿಡುಗಡೆಗೊಂಡರೂ ವಿದ್ಯುತ್ ಸಂಪರ್ಕ ಮಾತ್ರ ಸಿಗಲೇ ಇಲ್ಲ. ಹುಡೋಡಿ ಕತ್ತಲ ಗೂಡು ಎಂಬಂತಾಗಿದೆ.



ಸೌಭಾಗ್ಯ ತಂದ ದೌರ್ಭಾಗ್ಯ:
ಇನ್ನೇನು ವಿದ್ಯುತ್ ಸಂಪರ್ಕ ಸಾಧ್ಯವಿಲ್ಲ ಎಂದಾದಾಗ ಮೆಸ್ಕಾಂ ಈ ಭಾಗದಲ್ಲಿ ಸೋಲಾರ್ ಯುನಿಟ್ನ್ನು ಒದಗಿಸಿದೆ. ಹುಡೋಡಿ ಗ್ರಾಮದ 8 ಮನೆಗಳಿಗೆ ಸೋಲಾರ್ ಅಳವಡಿಕೆ ಮಾಡಲಾಗಿದೆ. ಅಳವಡಿಸಿದ ಸೌಭಾಗ್ಯ ಕಂಪನಿ ಅಳವಡಿಸಿದ ಸೋಲಾರ್ ಬೆಳಕು ಆರಂಭದಲ್ಲಿ ಪರವಾಗಿರಲಿಲ್ಲ. ಬರಬರುತ್ತಾ.. ದೀಪ ಉರಿಯುತ್ತಿದಿಯೋ ಇಲ್ಲವೋ ಅನುಮಾನ ಬರುವಷ್ಟು ದೀಪ ಮಂದವಾಗತೊಡಗಿದ್ದವು. ಕಳೆದ ಎರಡು ತಿಂಗಳಿಂದ ಸೋಲಾರ್ ಸಂಪೂರ್ಣ ಕೆಟ್ಟು ಹೋಗಿದ್ದು ಕುಟುಂಬಗಳು ಕತ್ತಲಲ್ಲಿ ಮುಳುಗಿವೆ.
ರಾತ್ರಿ ಎಂದರೆ ಪೇಟೆ ವಾಸ್ತವ್ಯ:
ಹುಡೋಡಿ ಗ್ರಾಮದಲ್ಲಿ ಹಿರಿಯಣ್ಣ ನಾಯ್ಕ್, ಚಂದ್ರಪ್ಪ ಸೇರಿದಂತೆ 8 ಕುಟುಂಬಗಳು ವಾಸವಾಗಿವೆ. ಅದರಲ್ಲಿ ಹಲವು ಕುಟುಂಬಗಳು ಗ್ರಾಮದ ಅವ್ಯವಸ್ಥೆಗಾಗಿ ಹುಲಿಕಲ್ ಮಾಸ್ತಿಕಟ್ಟೆಯಲ್ಲಿ ಬಾಡಿಗೆ ಮನೆಗಳನ್ನು ವಾಸ ಮಾಡುತ್ತಿವೆ. ರಾತ್ರಿ ಪೇಟೆ, ಹಗಲಿನಲ್ಲಿ ಹುಡೋಡಿಯತ್ತ ಪಯಣ ಎಂಬಂತಾಗಿದೆ ಅವರ ಬದುಕು. ಆದರೆ ಹಿರಿಯಣ್ಣ ನಾಯ್ಕ ಮತ್ತು ಚಂದ್ರಪ್ಪ ಕುಟುಂಬಗಳು ಹುಡೋಡಿಯಲ್ಲೇ ಸಂಪೂರ್ಣ ವಾಸ್ತವ್ಯ ಹೂಡಬೇಕಾದ ಸ್ಥಿತಿ ಇದ್ದು, ವಿದ್ಯುತ್ ಸಮಸ್ಯೆ ಬೆನ್ನು ಬಿಡದೇ ಕಾಡುತ್ತಿವೆ.
ಕೈಕೊಟ್ಟ ಸೋಲಾರ್.. ಆವರಿಸಿದ ಕತ್ತಲು:
ಹುಡೋಡಿ ಗ್ರಾಮದ ಹಿರಿಯಣ್ಣ ನಾಯ್ಕ, ಚಂದ್ರಪ್ಪ ಮನೆಯಲ್ಲಿ ಸೋಲಾರ್ ಉರಿಯುತ್ತಿಲ್ಲ. ಇತ್ತ ಸೀಮೆಎಣ್ಣೆ ವಿತರಣೆ ಕೂಡ ಸ್ಥಗಿತವಾಗಿದೆ. ದೀಪ ಹಚ್ಚುವುದಿರಲಿ.. ಒಲೆ ಹಚ್ಚಲು ಕೂಡ ಸಾಧ್ಯವಾಗದ ಧಾರುಣ ಸ್ಥಿತಿಗೆ ಬಂದಿವೆ. ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳಿಗೆ, ಸೌಭಾಗ್ಯ ಸೋಲಾರ್ ಸಿಬ್ಬಂದಿಗಳಿಗೆ ಸಂಪರ್ಕಿಸಬೇಕೆಂದರೂ ದೂರದ ವಿದ್ಯುತ್ ಸರಬರಾಜಿರುವ ಗ್ರಾಮಕ್ಕೆ ಬಂದು ಮೊಬೈಲ್ ಚಾರ್ಜ್ ಮಾಡಿಸಿಕೊಂಡು ಸಂಪರ್ಕಿಸಬೇಕು. ಸಾಹಸ ಮಾಡಿ ಸಂಪರ್ಕಿಸಿದರು ಕೂಡ ಇಂದು ಸರಿ ಮಾಡುತ್ತೇವೆ.. ನಾಳೆ ಸರಿ ಮಾಡುತ್ತೇವೆ ಎಂದು ಕಾಗೆ ಹಾರಿಸುವುದಕ್ಕೆ ಸೀಮಿತವಾಗಿದ್ದು ಈ ಕುಟುಂಬಗಳ ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿದೆ.
ಮೊಬೈಲ್ ಚಾರ್ಜ್ ಮಾಡಿಸಲು 9ಕಿಮೀ ಸಾಗಬೇಕು:
ಇಲ್ಲಿಯ ಕುಟುಂಬದ ಸ್ಥಿತಿ ಏನಾಗಿದೆ ಅಂದರೆ ಮನೆಯಲ್ಲಿ ಬೆಳಕು ಬರುವುದಿರಲಿ.. ಸ್ವಿಚ್ ಆಪ್ ಆದ ಮೊಬೈಲ್ನ್ನು ಚಾರ್ಜ್ ಮಾಡಿಸಲು 9 ಕಿಮೀ ದೂರದ ಹುಲಿಕಲ್ ಮಾಸ್ತಿಕಟ್ಟೆಗೆ ಬರಬೇಕು. ಅಲ್ಲಿ ಪರಿಚಿತರನ್ನು ಗೋಗೆರೆದು ಮೊಬೈಲ್ ಬ್ಯಾಟರಿ ಚಾರ್ಜ್ ಮಾಡಿಸಿ ವಾಪಾಸಬೇಕು. ಮೊಬೈಲ್ನಲ್ಲಿ ಹೊರಹೊಮ್ಮುವ ಟಾರ್ಚ್ ಬೆಳಕು ಇರೋತನಕ ಕಾಡಿನ ನಡುವಿನ ಮನೆಯಲ್ಲಿ ಚೂರುಪಾರು ಬೆಳಕು.. ಮತ್ತೆ ಮೊಬೈಲ್ ಸ್ವಿಚ್ಆಪ್ ಆಗುತ್ತಿದ್ದಂತೆ ಮತ್ತೆ ಕತ್ತಲಕೋಣೆಯೇ ಗತಿ ಎಂಬ ಸ್ಥಿತಿ ಇಲ್ಲಿಯದು.
ಬದುಕೇ.. ಕತ್ತಲೆ..
ಕಳೆದ ಎರಡು ತಿಂಗಳಿಂದ ಸೋಲಾರ್ ಕೆಟ್ಟು ಹೋಗಿದೆ. ಕಾಡಿನ ನಡುವೆ ಕತ್ತಲ ಬದುಕು ನಮ್ಮದಾಗಿದೆ. ಸೋಲಾರ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರೆ ದಿನದೂಡುತ್ತಾರೆ. ಗ್ರಾಮಕ್ಕೆ ಮಾತ್ರವಲ್ಲ ನಮ್ಮ ಬದುಕಿಗೆ ಕತ್ತಲು ಆವರಿಸಿದೆ.
– ಹಿರಿಯಣ್ಣ ನಾಯ್ಕ ಹುಡೋಡಿ ಗ್ರಾಮಸ್ಥ.ತುರ್ತು ದುರಸ್ಥಿಗೆ ಸೂಚಿಸಲಾಗಿತ್ತು:
ಕಳೆದ 15 ದಿನಗಳ ಹಿಂದೆ ಅಲ್ಲಿಯ ಗ್ರಾಮಸ್ಥರು ಈ ಬಗ್ಗೆ ಮಾಹಿತಿ ನೀಡಿದ್ದರು. ಕೂಡಲೇ ದುರಸ್ಥಿಗೊಳಿಸುವಂತೆ ಸೋಲಾರ್ ಸಿಬ್ಬಂದಿಗಳಿಗೆ ಸೂಚಿಸಲಾಗಿತ್ತು. ಈ ಬಗ್ಗೆ ಬೇಜಾವಾಬ್ದಾರಿ ತೋರಿದ ಸಿಬ್ಬಂದಿಗೆ ನೊಟೀಸ್ ನೀಡುತ್ತೇನೆ. ತುರ್ತಾಗಿ ದುರಸ್ಥಿ ಕ್ರಮ ಕೈಗೊಳ್ಳಲಾಗುವುದು– ಚಂದ್ರಶೇಖರ್ ಎಇಇ ಮೆಸ್ಕಾಂ ಹೊಸನಗರ
