
ಹೊಸನಗರ: ಯಾವುದೇ ಕಾರ್ಯಕ್ರಮಗಳಿರಲಿ.. ಶ್ರೀಮಂತಿಕೆ ಮತ್ತು ಅರ್ಥಪೂರ್ಣ ಸ್ಪರ್ಷ ನೀಡುವ ಚೇತನಾ ಬಳಗದ ಈ ಬಾರಿಯ ಸಿದ್ದಿವಿನಾಯಕ ವಿಸರ್ಜನಾ ಮೆರವಣಿಗೆಯನ್ನು ಕೂಡ ಅದ್ದೂರಿಯಾಗಿ ಆಯೋಜಿಸಲಾಗಿದೆ.
ಹೊಸನಗರ ತಾಲೂಕು ನಗರ ಗುಜರಿಪೇಟೆಯಲ್ಲಿ ಚೇತನಾ ಬಳಗದಿಂದ ಪ್ರತಿವರ್ಷದಂತೆ ಈ ವರ್ಷ ಕೂಡ ಗಣೇಶೋತ್ಸವ ನಡೆಸಲಾಗುತ್ತಿದೆ.
7 ದಿನಗಳ ಕಾಲ ಉತ್ಸವ ನಡೆಸಲಾಗುತ್ತಿದ್ದು ಕೊನೆ ದಿನ ಸೆ.25 ಸೋಮವಾರ ಸಂಜೆ 4 ರಿಂದ ವಿಸರ್ಜನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.


ಹೊಸನಗರದ ಪ್ರತಿಭಾವಂತ ಕಲಾವಿದ ವಿನಾಯಕ ನಿರ್ಮಿಸಿರುವ ಸುಮಾರು 7 ಅಡಿ ಎತ್ತರದ ವಿಶೇಷ ಗಣಪತಿ ವಿಗ್ರಹವನ್ನು ಸ್ಥಳೀಯ ಕಲಾವಿದ ಹರೀಶ್ ವಕ್ರತುಂಡ ಅವರ ವಿಶೇಷ ಆಕರ್ಷಕ ರಥದಲ್ಲಿ ವಿಘ್ನನಿವಾರಕನನ್ನು ಹೊತ್ತು ಮೆರವಣಿಗೆ ಸಾಗಲಿದೆ.
ಈಬಾರಿಯ ವಿಶೇಷವಾಗಿ ರಾಜಬೀದಿ ಉತ್ಸವ ಆಯೋಜಿಸಲಾಗಿದ್ದು ನುರಿತ ಪ್ರಸಿದ್ಧ ಕಲಾವಿದರ ಚಂಡೆ ವಾದನ, ನಾಸಿಕ್ ಬ್ಯಾಂಡ್, ಗೊಂಬೆ ಕುಣಿತ, ಡೊಳ್ಳು ಕುಣಿತ ಸೇರಿದಂತೆ ವಿಶೇಷ ಸಾಂಸ್ಕೃತಿಕ ವೈಭವ ಮೆರವಣಿಗೆಯಲ್ಲಿ ಮೇಳೈಸಲಿದೆ.
ಸಂಜೆ 4 ಗಂಟೆಗೆ ಗುಜರಿಪೇಟೆಯಿಂದ ಮೆರವಣಿಗೆ ಹೊರಡಲಿದ್ದು ನಗರ, ಚಿಕ್ಕಪೇಟೆ, ನೂಲಿಗ್ಗೇರಿವರೆಗೆ ಮೆರವಣಿಗೆ ಸಾಗಲಿದೆ. ಅದೇ ದಾರಿಯಲ್ಲಿ ವಾಪಾಸಾಗಿ ಕೊನೆಗೆ ಇತಿಹಾಸ ಪ್ರಸಿದ್ಧ ಕೋಟೆ ಕೆರೆಯಲ್ಲಿ ಸಿದ್ದಿವಿನಾಯಕನ ವಿಸರ್ಜನೆ ನಡೆಯಲಿದೆ.
ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷವಾಗಿ ಸಹಕರಸಿ ಮೆರವಣಿಗೆಯನ್ನು ಯಶಸ್ವಿಗೊಳಿಸಬೇಕು ಎಂದು ಚೇತನಾ ಬಳಗದ ಅಧ್ಯಕ್ಷ, ಗ್ರಾಪಂ ಸದಸ್ಯ ಪವನ ನಗರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
