
ಸಾವೇಹಕ್ಲು ಅಣೇಕಟ್ಟೆ | savehaklu dam
ಶಿವಮೊಗ್ಗ: ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದ ಸಾವೇಹಕ್ಕಲ್ ಆಣೆಕಟ್ಟೆ ತುಂಬಿ ಕೋಡಿ ಬಿದ್ದು ಅದನ್ನು ಸಾವಿರಾರು ಜನ ಬಂದು ವೀಕ್ಷಿಸಿದರು. ನೀರು ಬೀಳುವ spillway ನೋಡಿ ಅಬ್ಬಾ ಎಷ್ಟೊಂದು ಸುಂದರವಾಗಿದೆ ಎಂದು ಸಂತೋಷಪಟ್ಟರು. ಆ ಸಂತೋಷದ ಹಿಂದೆ ಸುಮಾರು 400ಕ್ಕೂ ಹೆಚ್ಚು ರೈತ ಕುಟುಂಬಗಳ ದುಃಖ ಇದೆ. ಅದು ಏನೇ ಇರಲಿ ಮುಗಿದ (ಮುಳುಗಡೆಯಾದ ) ವಿಷಯ.


ನದಿಯ ಹುಟ್ಟು:
ಆಣೆಕಟ್ಟೆ ವೀಕ್ಷಿಸಿದ ಹಲವರಿಗೆ ನದಿ ಹುಟ್ಟುವುದು ಹಾಗೂ ಹರಿಯುವ ಸ್ಥಳದ ಬಗ್ಗೆ ಗೊತ್ತಿಲ್ಲ. ಸಾವೇಹಕ್ಕಲ್ ಹೊಳೆಯು ಚಕ್ರ ನದಿಯ ಉಪನದಿ ಆಗಿದ್ದು ಹೊಸನಗರ ತಾಲೂಕು ನಗರ ಹೋಬಳಿ ಅಂಡಗದೋದೂರು ಗ್ರಾಮದ ಹೆರಟೆ – ಬಾಳ್ಮನೆ ಎಂಬಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ ಹರಿದು ನಂತರ ಚಕ್ರಾ ಸಮೀಪ ಸಾವೇಹಕ್ಕಲ್ ಎಂಬಲ್ಲಿ ಘಟ್ಟ ಪ್ರದೇಶದಲ್ಲಿ ಧುಮುಕಿ ಅರಣ್ಯ ಮಧ್ಯದಲ್ಲಿ ವಿರುದ್ಧ ದಿಕ್ಕಿನಿಂದ ಬರುವ ಚಕ್ರಾ ನದಿಯೊಂದಿಗೆ ಸೇರಿ ಕುಂದಾಪುರ ತಾಲ್ಲೂಕಿನ ಚಕ್ರಾ ಮೈದಾನ, ವಂಡ್ಸೆ ಮೂಲಕ ಗಂಗೊಳ್ಳಿ ಸಮೀಪ ಅರಬ್ಬೀಸಮುದ್ರ ಸೇರುತ್ತದೆ.
2.4 TMC ನೀರು ಸಂಗ್ರಹ:
1980ನೇ ಇಸವಿಯಲ್ಲಿ ಕರ್ನಾಟಕ ವಿದ್ಯುತ್ ನಿಗಮವು ಸಾವೇಹಕ್ಕಲ್ ಹೊಳೆಗೆ ಚಕ್ರಾನಗರ ಸಮೀಪದ ಸಾವೇಹಕ್ಕಲ್ ಎಂಬಲ್ಲಿ 2.4 ಟಿಎಂಸಿ ಜಲಸಂಗ್ರಹ ಸಾಮರ್ಥ್ಯದ ಆಣೆಕಟ್ಟು ನಿರ್ಮಿಸಿದ ಕಾರಣ ನೀರಿನ ಹರಿಯುವ ದಿಕ್ಕು ಬದಲಾಯಿತು.
1) ಸಾವೇಹಕ್ಕಲ್ ನೀರನ್ನು ಸಾವೇಹಕ್ಕಲ್ intake ನಿಯಂತ್ರಣ ಗೇಟುಗಳ ಮೂಲಕ ಶರಾವತಿ ನದಿಯ ಲಿಂಗನಮಕ್ಕಿ ಆಣೆಕಟ್ಟೆಗೆ ಹರಿಸಲಾಗುವುದು. ಸಾವೇಹಕ್ಕಲ್ intake ಗೇಟುಗಳಿಂದ ನೀರು ಸುರಂಗ ಮಾರ್ಗ, ತೆರೆದ ಕಾಲುವೆ ಮೂಲಕ ಕಾನ್ಮನೆ, ಮಳಲಿ, ಸಂಡೋಡಿ ಊರುಗಳ ಮೂಲಕ ಬಿದನೂರು ನಗರದಲ್ಲಿ ಶರಾವತಿ ಹಿನ್ನೀರಿಗೆ ಸೇರುತ್ತದೆ. ಶರಾವತಿ ನದಿ ಜೊತೆ ಸೇರಿ ವಿದ್ಯುತ್ ಯೋಜನೆಯ ಲಿಂಗನಮಕ್ಕಿ, ಶರಾವತಿ ವಿದ್ಯುದಾಗಾರ, ಗೇರುಸೊಪ್ಪದ ನಂತರ ಹೊನ್ನಾವರದಲ್ಲಿ ಅರಬ್ಬೀ ಸಮುದ್ರ ಸೇರುತ್ತದೆ.
2) ಸಾವೇಹಕ್ಕಲ್ ಆಣೆಕಟ್ಟೆಯ ವಿರುದ್ಧ ದಿಕ್ಕಿನಲ್ಲಿ ಹುಲಿಕಲ್ ಸಮೀಪ ಖೈರಗುಂದ saddle ಆಣೆಕಟ್ಟು ಕಟ್ಟಿದ್ದು ಅಲ್ಲಿನ ನಿಯಂತ್ರಣ ಗೇಟ್ ಗಳ ಮೂಲಕ ಸಾವೇಹಕ್ಕಲ್ ನೀರನ್ನು ವಾರಾಹಿ ಯೋಜನೆಯ ಪಿಕಪ್ ಆಣೆಕಟ್ಟೆಗೆ ಹರಿಸುವ ಅವಕಾಶವನ್ನು ಹೊಂದಿದೆ. ವಾರಾಹಿ ನದಿ ಜೊತೆ ಸೇರಿ ಭೂಗರ್ಭ ವಿದ್ಯುದಾಗರದ ಉತ್ಪಾದನೆ ನಂತರ ಹಾಲಾಡಿ ಹೊಳೆಯ ಮೂಲಕ ಗಂಗೊಳ್ಳಿಯಲ್ಲಿ ಅರಬ್ಬೀ ಸಮುದ್ರ ಸೇರುತ್ತದೆ.
3) ಸಾವೇಹಕ್ಕಲ್ ಆಣೆಕಟ್ಟೆ ತುಂಬಿ ಕೋಡಿಯಲ್ಲಿ (Spillway ) ನೀರು ಬಿದ್ದರೆ ಅದು ಅರಣ್ಯ ಮಧ್ಯೆ ಚಕ್ರಾ ನದಿಯನ್ನು ಸೇರಿ ವಂಡ್ಸೆ ಮೂಲಕ ಗಂಗೊಳ್ಳಿಯಲ್ಲಿ ಅರಬ್ಬೀ ಸಮುದ್ರ ಸೇರುತ್ತದೆ. ಇದು ಮೂಲ ನದಿ ಹರಿಯುವ ಜಾಗ.
ಹೀಗೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ನಗರ ಹೋಬಳಿಯಲ್ಲಿ ಹುಟ್ಟುವ ಸಾವೇಹಕ್ಕಲ್ ಹೊಳೆಯು 3 ವಿವಿಧ ಮಾರ್ಗಗಳಲ್ಲಿ, 3 ಜಿಲ್ಲೆಗಳಲ್ಲಿ, 3 ನದಿಗಳೊಂದಿಗೆ ಸೇರಿ, ಹಲವು ವಿದ್ಯುತ್ ಉತ್ಪಾದನ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದಿಸಿ ಕೊನೆಗೆ ಅರಬ್ಬೀ ಸಮುದ್ರ ಸೇರುತ್ತದೆ.
ಮಾಹಿತಿ: ವಿನಾಯಕ ಕುಮಾರ್ ಕೆ
