
ಹೊಸನಗರ: ಸಮಾಜ, ಪರಿಸರ, ಕಳಕಳಿಯ ಜೊತೆಗೆ ಶಿಕ್ಷಕಿಯಾಗಿ ಕಳೆದ 15 ವರ್ಷಗಳಿಂದ ಅಕ್ಷರ ಸೇವೆ ಸಲ್ಲಿಸುತ್ತಿರುವ ತಾಲೂಕಿನ ಗೌಡಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಅಂಬಿಕಾ ಈಬಾರಿಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಉತ್ತಮ ಸಮಾಜ, ಉತ್ತಮ ಪರಿಸರ, ಉತ್ತಮ ಶಿಕ್ಷಣ ಎಂಬ ಕಾಳಜಿ ಹೊತ್ತ ಶ್ರೀಮತಿ ಅಂಬಿಕಾ 2007 ಜುಲೈ 20 ರಂದು ಶಿಕ್ಷಕಿಯಾಗಿ ಸೇವೆಗೆ ಸೇರಿದ್ದಾರೆ. ಅಲ್ಲಿಂದ ಈವರೆಗೆ ಅದೇ ಗೌಡಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದ್ದಾರೆ. ಸಮಾಜದ ನಡುವೆ ಬೆರೆತು. ಯಾವುದೇ ರಾಗ ದ್ವೇಷವಿಲ್ಲದೇ ಒಂದೇ ಕಡೆ ಕೆಲಸ ಮಾಡುವುದು ಅಪರೂಪ. ಆದರೆ ಅಂಬಿಕಾ ಅದನ್ನು ಸಾಧ್ಯ ಮಾಡಿಕೊಂಡು ತಮ್ಮ ಶಿಕ್ಷಣ ಸೇವೆ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮೂಲತಃ ಭದ್ರಾವತಿ ನಿವಾಸಿಯಾಗಿರುವ ಇವರು ಆಯ್ಕೆ ಮಾಡಿಕೊಂಡಿದ್ದು ಹೊಸನಗರ ತಾಲೂಕನ್ನು. ಸಹಜವಾಗಿ ಕಥೆ, ಕವನ, ಲೇಖನಬರೆಯುವುದು, ಸ್ವಯಂ ಸೇವಕಿಯಾಗಿ ಸಮಾಜಮುಖಿ ಕೆಲಸಗಳನ್ನು ಮಾಡುವ ತುಡಿತ ಹೊಂದಿರುವ ಅಂಬಿಕಾ, ಪ್ರೇರಣಾ ಸ್ವಯಂ ಸೇವಾ ಸಂಘವನ್ನು ರಚಿಸಿಕೊಂಡು ನಮ್ಮಿಂದ ಸಮಾಜಕ್ಕೆ ಒಂದಿಷ್ಟು ಅಳಿಲು ಸೇವೆ ಎಂಬ ಪರಿಕಲ್ಪನೆ ಅಡಿ ಸೇವೆ ಸಲ್ಲಿಸಿಕೊಂಡು ಬಂದಿದ್ದಾರೆ.
ಗ್ರಾಮೀಣ ಜನರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ಗ್ರಾಮದ ಬಸ್‌ನಿಲ್ದಾಣ, ಶಾಲೆ, ದೇಗುಲ ಆವರಣದ ಸ್ವಚ್ಚತಾ ಕಾರ್ಯ, ಬಡಕುಟುಂಬಗಳಿಗೆ ಅಗತ್ಯ ಕಿಟ್ ಪೊರೈಕೆ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನ, ಕಲಿಕಾ ಸಾಮಗ್ರಿ ವಿತರಣೆ, ಬೇಸಿಗೆ ಶಿಬಿರ ಆಯೋಜನೆ, ಗ್ರಂಥಾಲಯಕ್ಕೆ ಉಚಿತ ಪುಸ್ತಕಗಳ ಕೊಡುಗೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿ ಸೈ ಎನಿಸಿಕೊಂಡಿದ್ದಾರೆ ಅಂಬಿಕಾ.
ಶಿಕ್ಷಕಿ ಅಂಬಿಕಾರ ಶಿಕ್ಷಣ ಸೇವೆ, ಸಾಮಾಜಿಕ ಕಾರ್ಯವನ್ನು ಪರಿಗಣಿಸಿ 2018ರಲ್ಲಿ ತಾಲೂಕು ಉತ್ತಮ ಶಿಕ್ಷಕಿ ಪ್ರಶಸ್ತಿ, 2022ರಲ್ಲಿ ಪ್ರತಿಲಿಪಿ ಡಿಜಿಟಲ್ ಸಾಹಿತ್ಯ ವೇದಿಕೆಯಿಂದ ಗೋಲ್ಡ್ನ್ ಬ್ಯಾಡ್ಜ್, ಸಾಧಕ ಪ್ರಶಸ್ತಿ ಜೊತೆಗೆ ಈಬಾರಿಯ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕತೆ ಕವನಗಳಲ್ಲಿ ಆಸಕ್ತಿ ಹೊಂದಿರುವ ಅಂಬಿಕಾ ಈಗಾಗಲೇ ಸದಾಶಯ ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ.
ಪ್ರಶಸ್ತಿಯಿಂದ ಮತ್ತಷ್ಟು ಜವಾಬ್ದಾರಿ:
ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿರುವುದು ಸೇವೆ ಸಂದ ಗೌರವ. ಇದರಿಂದ ಇನ್ನಷ್ಟು ಜವಾಬ್ದಾರಿ ಹೆಚ್ಚಿದೆ. ಉತ್ತಮ ಸೇವೆ ನಿರ್ವಹಿಸಲು ಸಹಕರಿಸಿದ ಶಿಕ್ಷಕರು, ಶಿಕ್ಷಣ ಇಲಾಖೆ, ಶಾಲಾಭಿವೃದ್ಧಿ ಸಮಿತಿ, ಪೋಷಕರಿಗೆ ಕೃತಜ್ಞತೆಗಳು
– ಅಂಬಿಕಾ, ಶಿಕ್ಷಕಿ