ಅಂದು ಅಧ್ಯಕ್ಷ ಸ್ಥಾನದ ಕುರ್ಚಿ ಹರಿದು ಕೆಳಗೆ ಹೋಗಿತ್ತು.. ದಿಂಬು ಹಾಕಿಕೊಂಡು ಕೂತಿದ್ದೆ..

ಹೊಸನಗರ: ಅಂದು ಅಧ್ಯಕ್ಷ ಸ್ಥಾನದ ಕುರ್ಚಿಯಲ್ಲಿ ಕುಳಿತಾಗ.. ವಯರ್ ನಿಂದ ಹೆಣೆದ ಕುರ್ಚಿಯಾದ ಕಾರಣ ಕೆಳಗೆ ಹೋಗಿತ್ತು… ಆಮೇಲೆ ಕಾರಿನಲ್ಲಿದ್ದ ದಿಂಬು (PILLOW) ತಂದು ಕುರ್ಚಿ ಮೇಲೆ ಹಾಕಿ ಕುಳಿತಿದ್ದೆ.. ಆದರೆ ಈಗ..

ಹೀಗಂತ ಹೇಳಿದ್ದು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ. ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪದಲ್ಲಿ ನಡೆದ 69ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆದರೆ ಇಂದು ಡಿಸಿಸಿ ಬ್ಯಾಂಕ್ ಹೆಮ್ಮರವಾಗಿ ಬೆಳೆದಿದೆ. ಅಂದು ಬೈಕ್ ಕೂಡ ಇಲ್ಲದೇ ಓಡಾಡಬೇಕಿದ್ದ ಅಧಿಕಾರಿ ನೌಕರರು ಇಂದು ಕಾರಿನಲ್ಲಿ ಓಡಾಡುತ್ತಿದ್ದಾರೆ.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಸದೃಢಗೊಳಿಸಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಆದರೆ ಇದೇ ಮಂಜುನಾಥ ಗೌಡ ಏನು ಮಾಡಿದ್ದಾರೆ ಕೇಳುತ್ತಾರೆ. ನಾನೇ ಎಲ್ಲ ಮಾಡಿದ್ದೇವೆ ಎಂದು ಹೇಳುವವರ ಸಂಖ್ಯೆ ಹೆಚ್ಚಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

ಸಹಕಾರ ಕ್ಷೇತ್ರದಲ್ಲಿ ದುಡ್ಡು ಕೊಟ್ಟು ಚುನಾವಣೆ ಮಾಡಿಲ್ಲ. ಈ ಬಾರಿ ನನ್ನನ್ನು ಸೋಲಿಸಲು ಬಾರೀ ಹಣ ಖರ್ಚು ಮಾಡಿದರು. ಘಟಾನುಘಟಿ ನಾಯಕರೇ ಶ್ರಮಿಸಿದರು. ಆದರೂ ನನಗೆ ದೊಡ್ಡಮಟ್ಟದ ಜಯ ಸಿಕ್ಕಿದೆ. ಎದುರಾಳಿಗಳಿಗೆ ಉತ್ತರ ಸಿಕ್ಕಿದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಯಿಸಿದರು.

ನನ್ನ ಶಕ್ತಿ ಗೊತ್ತಿದ್ದರಿಂದಲೇ ಟೀಕೆ:
ನನ್ನ ಬಗ್ಗೆ ಸುಖಾಸುಮ್ಮನೆ ಟೀಕೆ ಮಾಡುತ್ತಾರೆ.. ಹೀಯಾಳಿಸುತ್ತಾರೆ. ವ್ಯಂಗ್ಯ ಮಾಡುತ್ತಾರೆ. ಅವರಿಗೆ ನನ್ನ ಪ್ರಭಾವ, ತಾಕತ್ತು, ಶಕ್ತಿ ಗೊತ್ತಿರುವ ಕಾರಣದಿಂದಲೇ ಟೀಕೆ ಮಾಡುತ್ತಾರೆ ಎನ್ನೋದು ನನಗೂ ಗೊತ್ತು ಎಂದರು.

ಸೊಳ್ಳೆ, ನೊಣಗಳಿಗೆ ಹೆದರುತ್ತೇನೆಯೇ?
ಸಹಕಾರ ಕ್ಷೇತ್ರದಲ್ಲಿ ನೀವು ಇರಬಾರದು ಎಂದರು.. ನೀವು ಇರಬೇಕು ಎಂಬ ಒತ್ತಾಯ ಕೇಳಿ ಬಂದ ಹಿನ್ನೆಲೆ ಪ್ರತಿಕ್ರಯಿಸಿದ ಮಂಜುನಾಥಗೌಡ, ಸಹಕಾರ‌ ಕ್ಷೇತ್ರ ಎಂತೆಂಥ ಸವಾಲು ಎದುರಿಸಿದ್ದೇನೆ. ಈ ಸೊಳ್ಳೆ ನೊಣಗಳಿಗೆ ಹೆದರುತ್ತೇನೆಯೇ.. ಹೇಗೆ ನಿಭಾಯಿಸಬೇಕು ಎಂಬುದು ನನಗೆ ಗೊತ್ತಿದೆ ಎಂದು ಎದುರಾಳಿಗಳಿಗೆ ತಿರುಗೇಟು ನೀಡಿದರು.

ಸಹಕಾರಿ ಪ್ರಶಸ್ತಿಗೆ ವಾಟಗೋಡು ಸುರೇಶ ಏಕೆ ಆಯ್ಕೆಯಾಗಿಲ್ಲ ಎಂಬುದು ನನಗೆ ಅಚ್ಚರಿ ತಂದಿದೆ. ಸಹಕಾರಿ ಕ್ಷೇತ್ರದ ಅರಿವು ಇರದ, ಅದಕ್ಕಾಗಿ ಶ್ರಮವಹಿಸದವರು ಕೂಡ ಪ್ರಶಸ್ತಿ ಭಾಜನರಾಗುತ್ತಿದ್ದಾರೆ ಎಂದರು.

ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಗುತ್ತಿದೆ. ಪಕ್ಷದ ಬೆಂಬಲಿಗ ಅನ್ನೋ ಕಾರಣಕ್ಕೆ ಅಧ್ಯಕ್ಷರನ್ನಾಗಿ ಮಾಡಲಾಗುತ್ತಿದೆ. ಇದು ಸಹಕಾರ ಕ್ಷೇತ್ರದ ಭವಿಷ್ಯಕ್ಕೆ ಮಾರಕ ಎಂದು ವಿಷಾದಿಸಿದರು.

Exit mobile version