
ಶಿವಮೊಗ್ಗ: ಹರಕೆ ಹೊತ್ತು ಘಟ್ಟಕ್ಕೆ ಬರುವ ಭಕ್ತಾದಿಗಳ ಸಕಲ ಅಭೀಷ್ಟಗಳನ್ನು ಈಡೇರಿಸುವ ಶ್ರೀ ಜೇನುಕಲ್ಲಮ್ಮ ದೇವಿ ನೆಲೆವೀಡಾದ ಅಮ್ಮನಘಟ್ಟ ಜಾತ್ರೆ ನಾಡಿನ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿದೆ.
ಜಿಲ್ಲೆಯ ವಿಶಿಷ್ಟ ಪ್ರಾಕೃತಿಕ ಸೌಂರ್ಯ ಹೊಂದಿದ ಧಾರ್ಮಿಕ ಶ್ರದ್ಧಾಕೇಂದ್ರವಾದ ಜೇನಮ್ಮನಘಟ್ಟ ಹಲವು ಜನಾಂಗಗಳ ಕುಲದೈವಿಯಾಗಿ ನೆಲೆನಿಂತ ತಾಣ..
ರಮಣೀಯ ವನಸಿರಿಯ ಮಧ್ಯೆ ಬೃಹದಾಕಾರದ ಕಲ್ಲು ಬಂಡೆಗಳು. ಮನ ಸೂರೆಗೊಳ್ಳುವ ಹಸಿರು ಸಂಪತ್ತಿನ ಸಸ್ಯಗಳು. ದಟ್ಟ ಕಾನನದಲ್ಲಿ ತೂರಿ ಬರುವ ಜೇನಿನ ಝೇಂಕಾರ. ನಿಸರ್ಗ ನಿರ್ಮಿತ ಹೆಬ್ಬಂಡೆಯನ್ನೆ ಆಲಯ ಮಾಡಿಕೊಂಡ ಶ್ರೀದೇವಿ. ಇದು ಅಮ್ಮನಘಟ್ಟದ ಒಟ್ಟಾರೆ ಚಿತ್ರಣ.


ವೈಭವ ಸಾರುವ ಜಾತ್ರೆ:
ಹೆಬ್ಬಂಡೆಯನ್ನು ಆಲಯ ಮಾಡಿಕೊಂಡು ನೆಲೆನಿಂತ ಶ್ರೀ ಜೇನುಕಲ್ಲಮ್ಮ ದೇವಿ ತನ್ನಲ್ಲಿಗೆ ಬರುವ ಭಕ್ತರನ್ನು ಎಂದಿಗೂ ಕೈ ಬಿಡಲಾರಳು. ಸಂಕಷ್ಟದಲ್ಲಿ ಹೊತ್ತ ಎಲ್ಲ ಹರಕೆ ಇಲ್ಲಿ ಸಿದ್ಧಿಸುತ್ತದೆ ಎಂಬುದು ಪ್ರತೀತಿ. ಅದಕ್ಕೆಂದೆ ನಾಡಿನ ಉದ್ದಗಲದಲ್ಲೂ ಶ್ರೀದೇವಿಯ ಭಕ್ತರಿದ್ದಾರೆ.
ಪಿತೃ ಮಾಸದ ಹುಣ್ಣಿಮೆಯಿಂದ ಅಮವಾಸ್ಯೆ ವರೆಗಿನ ಮಂಗಳವಾರ- ಶುಕ್ರವಾರ ದಿನಗಳಂದು ಜಾತ್ರೆಗಳು ನಡೆಯುತ್ತವೆ. ಆ ದಿನಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಘಟ್ಟಕ್ಕೆ ಬರುತ್ತಾರೆ. ಬಂದವರು ತಮ್ಮ ಹರಕೆ ಸಲ್ಲಿಸಿ ಪೂಜೆ ನಡೆಸಿ ಪುನೀತರಾಗುತ್ತಾರೆ.
ಸ್ಥಳ ಪುರಾಣ:
ಅಮ್ಮನ ಘಟ್ಟದ ತುಂಬೆಲ್ಲ ಬೃಹದಾಕಾರದ ಕಲ್ಲುಬಂಡೆಗಳೆ ಕಾಣ ಸಿಗುತ್ತವೆ. ಬಂಡೆಗಳು ಜೇನುಗಳ ಆವಾಸ ಸ್ಥಾನವಾಗಿವೆ. ಜೇನುಗೂಡುಗಳ ಮತ್ತು ಕಲ್ಲು ಬಂಡೆಗಳ ಪೊಟರೆಯಲ್ಲಿ ನೆಲೆ ನಿಂತ ಕಾರಣ ಶ್ರೀ ದೇವಿಗೆ ಜೇನುಕಲ್ಲಮ್ಮ ಎಂದು ಹೆಸರು ಬಂದಿದೆ.
ಈ ಹಿಂದೆ ಜಮದಗ್ನಿ ಮಹರ್ಷಿಯು ತನ್ನ ಮಡದಿ ರೇಣುಕಾದೇವಿಯಲ್ಲಿ ವಿರಸಗೊಂಡು ತನ್ನ ಮಗ ಪರಶುರಾಮನನ್ನು ಕರೆಸಿ ತಾಯಿಯ ಶಿರಛೇಧನಕ್ಕೆ ಆಜ್ಞಾಪಿಸುತ್ತಾರೆ. ಅಂತೆಯೇ ಮಗ ಪರಶುರಾಮ ಶಿರವನ್ನು ಕತ್ತರಿಸಿದಾಗ ದೇವಿಯ ಅಗೋಚರ ಶಕ್ತಿಯೊಂದು ಇಲ್ಲಿ ಘಟ್ಟದ ಕಲ್ಲು ಬಂಡೆಗಳ ಮಧ್ಯೆ ನೆಲೆಸಿತು. ಅಲ್ಲಿಂದ ಭಕ್ತರು ಈಕೆಯನ್ನು ಜೇನುಕಲ್ಲಮ್ಮ ಎಂದೆ ಪೂಜೆಸಿದರು ಎನ್ನುತ್ತದೆ ಸ್ಥಳಪುರಾಣ.
ಹಳೆ ಅಮ್ಮನಘಟ್ಟ:
ಈಗಿರುವ ಅಮ್ಮನಘಟ್ಟ ಎದುರು ಮತ್ತೊಂದು ಅಮ್ಮನಘಟ್ಟ ಇದೆ. ಅದು ಹಳೆ ಅಮ್ಮನಘಟ್ಟ. ಇಲ್ಲಿಯೇ ಮೂಲಮರ್ತಿ ಇದ್ದಿದ್ದು. ಈ ಘಟ್ಟ ದರ್ಗಮವಾಗಿದ್ದು ಭಕ್ತರು ಹೋಗಿಬರಲು ಕಷ್ಟಸಾಧ್ಯವಾಗಿದೆ.
ಜಾತ್ರೆ ದಿನದಲ್ಲಿ ಗರ್ಭಿಣಿಯೋರ್ವಳು ಅಲ್ಲೆ ಪ್ರಸವಿಸಿದ ಕಾರಣ ಘಟ್ಟ ಪರಿಸರ ಮೈಲಿಗೆ ಆಗಿ ಅಮ್ಮ ಕೋಪಗೊಂಡು ಎದುರಿದ್ದ ಘಟ್ಟಕ್ಕೆ ಬಂದು ನೆಲೆಸಿದಳು ಎಂಬುದು ವಾಡಿಕೆಯಲ್ಲಿದೆ.
ಬುತ್ತಿ ಸೇವೆ:
ಅಮ್ಮನಿಗೆ ನಡೆದುಕೊಳ್ಳುವ ಜನಾಂಗದವರು ಬುತ್ತಿ ಸೇವೆ ಒಪ್ಪಿಸದೇ ಜಾತ್ರೆಗೆ ಬರುವಂತಿಲ್ಲ. ನರ್ಧಿಷ್ಟ ಜಾತ್ರೆ ದಿನದಂದು ಬುತ್ತಿ ಕಟ್ಟಿಕೊಂಡು ಬರುವ ಕುಟುಂಬಸ್ಥರು ಪೂಜೆ, ಸೇವೆ ಸಲ್ಲಿಸಿ ಅಲ್ಲಿಯೇ ಬುತ್ತಿ ಉಂಡು ಮರಳುವುದು ಪದ್ದತಿ. ಈ ಸೇವೆ ಸಲ್ಲಿಸದೇ ಜಾತ್ರೆಗೆ ಹೋಗುವಂತಿಲ್ಲ ಎಂಬ ಕರಾರು ಎಷ್ಟೂ ಕುಟುಂಬಗಳಲ್ಲಿದೆ.
ನವ ದಂಪತಿಗಳು, ಚೊಚ್ಚಲ ಮಕ್ಕಳ ತಾಯಂದಿರು ಜಾತ್ರೆಗೆ ಬರಲೇ ಬೇಕೆಂಬುದು ಇಲ್ಲಿನ ಪರಿಪಾಠವಾಗಿದೆ.
ಹರಕೆ ನಾಗ: ತೋಟಗದ್ದೆ, ಕೊಟ್ಟಿಗೆ, ದನಕರುಗಳ ಬಗ್ಗೆ ಹರಕೆ ಹೊತ್ತ ಗ್ರಾಮೀಣರು ಹರಕೆ ನಾಗ ಒಪ್ಪಿಸುತ್ತಾರೆ. ಆಯಾಯ ಹರಕೆಗೆಂದೆ ಬಗೆಬಗೆಯ ತಾಮ್ರದ ತಗಡಿನ ನಾಗಗಳು ಇಲ್ಲಿ ಸಿಗುತ್ತವೆ.
ಸಂರಕ್ಷಿತ ತಾಣ:
ಕಲ್ಲುಬಂಡೆಗಳ ರಾಶಿ ರಾಶಿಯನ್ನು ತನ್ನಲ್ಲಿ ಹುದುಗಿಸಿಕೊಂಡ ಅಮ್ಮನಘಟ್ಟ ಅಮೂಲ್ಯ ಗಿಡ ಮೂಲಿಕೆಗಳ ಕಾಡಾಗಿದೆ. ಸುತ್ತಲಿನ ಹತ್ತಾರು ಹಳ್ಳಿಗಳಿಗೆ ನೀರುಣಿಸುವ ನೀರಸೆಲೆ ಆಗಿರುವ ಘಟ್ಟ ಪ್ರದೇಶವನ್ನು ಸರ್ಕಾರ ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಿದೆ.
ಜಾತ್ರೆ ಆರಂಭ:
ಈಬಾರಿ ಸೆ.13 ರಂದು ಮಂಗಳವಾರ ಮೊದಲ ಜಾತ್ರೆ ಆರಂಭವಾಗಿದೆ. 16ರಂದು ಶುಕ್ರವಾರ ಎರಡನೇ ಜಾತ್ರೆ. 20ರಂದು ಮಂಗಳವಾರ ಮೂರನೇ ಜಾತ್ರೆ. 23ರಂದು ಕೊನೆಯ ಜಾತ್ರೆ ನಡೆಯುತ್ತದೆ.
ಅಲ್ಲದೆ ನವರಾತ್ರಿ ದಿನಗಳಲ್ಲಿ ವಿಶೇಷ ಉತ್ಸವಗಳು ನಡೆಯುತ್ತವೆ. ವಿಜಯದಶಮಿ ದಿನ ಚಂಡಿಕಾ ಹೋಮ ನಡೆಯುತ್ತದೆ. ಜಾತ್ರೆ ದಿನಗಳಲ್ಲಿ ಜನಸ್ತೋಮವೇ ಘಟ್ಟದತ್ತ ಹರಿದು ಬರುವುದು ವಿಶೇಷವಾಗಿದೆ.
ಇಲ್ಲಿದೆ ಅಮ್ಮನಘಟ್ಟ
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕೊಡೂರು ಗ್ರಾಪಂ ವ್ಯಾಪ್ತಿಯಲ್ಲಿ ಅಮ್ಮನಘಟ್ಟ ಬರುತ್ತದೆ. ಶಿವಮೊಗ್ಗ ದಿಂದ ಹೊಸನಗರ ಬರುವ ಹೆದ್ದಾರಿ ಕೊಡೂರು ಸಮೀಪದಿಂದ ಬಲಭಾಗಕ್ಕೆ ಮೂರು ಕಿಮೀ ಕ್ರಮಿಸಬೇಕು.
