
ಹೊಸನಗರ: ತಾಲೂಕಿನ ಉತ್ತಮ ಸಹಕಾರಿ ಪ್ರಶಸ್ತಿಗೆ ನಗರ ಶ್ರೀ ನೀಲಂಕಂಠೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಕೆ.ಲೀಲಕೃಷ್ಣ ಮಕ್ಕಿಮನೆ ಭಾಜನರಾಗಿದ್ದಾರೆ.
ಬಟ್ಟೆಮಲ್ಲಪ್ಪದಲ್ಲಿ ನಡೆದ 69ನೇ ಅಖಿಲಭಾರತ ಸಹಕಾರ ಸಪ್ತಾಹದಲ್ಲಿ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಡಾ.ಆರ್.ಮಂಜುನಾಥಗೌಡ ಪ್ರಶಸ್ತಿ ಪುರಸ್ಕೃತ ಎಂ.ಕೆ.ಲೀಲಕೃಷ್ಣ ಮಕ್ಕಿಮನೆಯವರನ್ನು ಉತ್ತಮ ಸಹಕಾರಿ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು.
ಎಂ.ಕೆ.ಲೀಲಕೃಷ್ಣ ಸಾಧನೆ:
ಅಂಡಗದೋದೂರು ಗ್ರಾಪಂ ವ್ಯಾಪ್ತಿಯ ಮಕ್ಕಿಮನೆ ನಿವಾಸಿ ಕೇಶವಗೌಡ ಮತ್ತು ರುಕ್ಮಿಣಿಯಮ್ಮ ದಂಪತಿಗಳ ಮಗನಾದ ಎಂ.ಕೆ.ಲೀಲಕೃಷ್ಣ ಪ್ರತಿಷ್ಠಿತ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗುವ ಮೂಲಕ ಸಹಕಾರಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸಿದರು. ನಂತರದ ದಿನದಲ್ಲಿ ಹೊಸನಗರ ತಾಲೂಕು ನಗರ ಶ್ರೀನೀಲಕಂಠೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಹಕಾರ ಸಂಘದ ಏಳಿಗೆಗಾಗಿ ಶ್ರಮಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರು, ಸಿಇಒಗಳ ಸಹಕಾರ ಇವರ ಅಭಿವೃದ್ಧಿಯ ಆಶಯಗಳಿಗೆ ಮುನ್ನುಡಿ ಬರೆಯಿತು.
ಈಗಾಗಲೇ ಆರು ಬಾರಿ ಸಹಕಾರ ಸಂಘದ ಅಧ್ಯಕ್ಷರಾಗಿರುವ ಎಂ.ಕೆ.ಲೀಲಕೃಷ್ಣ ಪ್ರಸ್ತುತ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಪಾಧ್ಯಕ್ಷ ಹಿಲ್ಕುಂಜಿ ಕುಮಾರ್ ಸೇರಿದಂತೆ ಆಡಳಿತ ಮಂಡಳಿ, ಮತ್ತು ಸಿಇಒ ವಿಷ್ಣುವರ್ಧನ್ ಸೇರಿದಂತೆ ಸಿಬ್ಬಂದಿ ವರ್ಗ ಸಹಕಾರ ಸಂಘದ ಅಭಿವೃದ್ಧಿಗೆ ಹೆಗಲು ಕೊಟ್ಟಿದೆ.
ಆರಂಭದಲ್ಲಿ ಲಕ್ಷಗಳಲ್ಲಿದ್ದ ನಗರ ಸಹಕಾರ ಸಂಘದ ವಹಿವಾಟು ಈಗ ಕೋಟಿಗಳ ಲೆಕ್ಕಾಚಾರದಲ್ಲಿದೆ. ಎಲ್ಲ ರೈತರಿಗೂ ಸಕಾಲದಲ್ಲಿ ಸಾಲಸೌಲಭ್ಯ ನೀಡುವ ವಿಚಾರದಲ್ಲಿ ಹೆಚ್ಚಿನ ಗಮನ ಕೂಡ ನೀಡಿದ್ದಾರೆ.
ಎಂ.ಕೆ.ಲೀಲಕೃಷ್ಣ ಸಹಕಾರ ಕ್ಷೇತ್ರ ಸುದೀರ್ಘ ಸೇವೆಯನ್ನು ಪರಿಗಣಿಸಿ, ತಾಲೂಕಿನ ಉತ್ತಮ ಸಹಕಾರಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.