
ವಿಧಾನ ಪರಿಷತ್ತಿನಲ್ಲಿ ಬಿದನೂರು ಸ್ಮಾರಕದ ಬಗ್ಗೆ ಪ್ರಸ್ತಾಪ|
ಸ್ಮಾರಕಗಳ ಸಂರಕ್ಷಣೆಗೆ ಡಿ.ಎಸ್.ಅರುಣ್ ಒತ್ತಾಯ
ಹೊಸನಗರ: ಬೆಳಗಾವಿ ಅಧಿವೇಶನದಲ್ಲಿ ಇತಿಹಾಸ ಪ್ರಸಿದ್ಧ ಬಿದನೂರಿನಲ್ಲಿರುವ ಸ್ಮಾರಕಗಳ ವಿಷಯ ಪ್ರಸ್ತಾಪವಾಗಿದ್ದು ಸಂರಕ್ಷಣೆಗೆ ಒತ್ತಾಯ ಮಾಡಲಾಗಿದೆ.
ವಿಧಾನ ಪರಿಷತ್ ಕಲಾಪದ ಶೂನ್ಯ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಈ ವಿಷಯ ಪ್ರಸ್ತಾಪಿಸಿದ್ದು ಸೂಕ್ತ ಸಂರಕ್ಷಣಾ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬಿದನೂರು ಕೊಪ್ಪಲುಮಠದಲ್ಲಿರುವ ಕೆಳದಿ ಅರಸರ ಐತಿಹಾಸಿಕ ಸ್ಮಾರಕಗಳು ಒತ್ತುವರಿಯಾಗಿದೆ. ನಾಡಿಗೆ ಆದರ್ಶಮಯ ಆಡಳಿತ ನೀಡಿದ ಕೆಳದಿ ಅರಸರ ಸಮಾಧಿಗಳು ನಶಿಸುವ ಹಂತಕ್ಕೆ ತಲುಪಿವೆ. ಈ ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದರು.
ಅಲ್ಲದೇ ಹೊಸನಗರ ತಾಲೂಕಿನ ಹುಂಚಾ ಹೋಬಳಿ ಮೇಲಿನಬೆಸಿಗೆ ಗ್ರಾಮದಲ್ಲಿ ಗೋಮಾಳ ಜಾಗವನ್ನು ಕೂಡ ಅಕ್ರಮ ಒತ್ತುವರಿ ಮಾಡಲಾಗಿದ್ದು ತೆರವುಗೊಳಿಸುವಂತೆ ಒತ್ತಾಯ ಮಾಡಿದರು.
ಸದರಿ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸ್ಮಾರಕಗಳ ರಕ್ಷಣೆ ಮತ್ತು ಅಕ್ರಮ ಒತ್ತುವರಿ ತೆರವು ಸಂಬಂಧ ಕಂದಾಯ ಮತ್ತು ಪುರಾತತ್ವ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.