
ಇಂಗ್ಲೀಷ್ ನೆಲದಲ್ಲಿ ಅಪ್ಪಟ ಕನ್ನಡದ ಯಕ್ಷಗಾನ.! ಸರಣಿ ಯಕ್ಷಗಾನ..ಯಕ್ಷನೃತ್ಯ ಗಾನವೈಭವ.. ಯಾರೆಲ್ಲಾ ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ?
SIRSI | ಶಿರಸಿ: ಲಂಡನ್ ನ ಅನಿವಾಸಿ ಯಕ್ಷಗಾನ ಅಭಿಮಾನಿ ಮಂಡಳಿ ಹಾಗೂ ಯಕ್ಷಗಾನ ಅಭಿಮಾನಿಗಳ ಸಹಕಾರದಲ್ಲಿ ಅಭಿನೇತ್ರಿ ಯಕ್ಷಕಲಾ ಸಂಸ್ಥೆ 5. ದಿನಗಳ ಯಕ್ಷ ಸರಣಿ, 6ನೇ ಪ್ರಯೋಗವಾಗಿ ಯಕ್ಷನೃತ್ಯ ಗಾನ ವೈಭವ ವನ್ನು ಆಯೋಜಿಸಿದೆ. ಬಡಗುತಿಟ್ಬಿನ ಯಕ್ಷಗಾನದ ಖ್ಯಾತ ಕಲಾವಿದರು ಯುನೈಟೆಡ್ ಕಿಂಗಡಮ್ ನ ಹಲವಡೆ ಯಕ್ಷಗಾನ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.
ಆಂಗ್ಲ ಭಾಷಿಕರ ನೆಲದಲ್ಲಿ ಅಪ್ಪಟ ಕನ್ನಡದ ಕಲೆಯು ಝೇಂಕರಿಸಲಿದ್ದು, ಜೂನ್ 20ರಿಂದ ಜುಲೈ 6ರ ತನಕ ಗಂಡುಮೆಟ್ಟಿನ ಕಲೆ ಯಕ್ಷಗಾನದ ಶ್ರೀಮಂತಿಕೆ ಮೇಳೈಸಲಿದೆ.
ಪ್ರಸಿದ್ಧ ಕಲಾವಿದರಾದ ಭಾಗವತ ಪ್ರಸನ್ನ ಭಟ್ಟ ಬಾಳ್ಕಲ್, ಮದ್ದಲೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ, ಚಂಡೆಯಲ್ಲಿ ಗಣೇಶ ಗಾಂವಕರ್ ಹಿಮ್ಮೇಳವನ್ನು ಮುನ್ನೆಡಸಲಿದ್ದಾರೆ. ಮುಮ್ಮೇಳದಲ್ಲಿ ಖ್ಯಾತ ಕಲಾವಿದರಾದ
ನೀಲಕೋಡ ಶಂಕರ ಹೆಗಡೆ, ಸನ್ಮಯ ಭಟ್ಟ ಮಲವಳ್ಳಿ ವೈವಿಧ್ಯಮಯ ಪಾತ್ರ ಮಾಡಲಿದ್ದಾರೆ. ಜೊತೆಗೆ ಅಲ್ಲಿನ ಸ್ಥಳೀಯ ಕಲಾವಿದರಾದ ಯೋಗೇಂದ್ರ ಮರವಂತೆ, ರಾಜೀವ ಹೆಗಡೆ, ಡಾ. ಗುರುಪ್ರಸಾದ ಕೂಡ ರಂಗಸ್ಥಳದಲ್ಲಿ ಮಿಂಚಲಿದ್ದಾರೆ.


ಯಾವಾಗ.. ಎಲ್ಲಿ.?
ಜೂನ್ 20ರಂದು ಬ್ಯಾಸಿಲ್ಡನ್ನಲ್ಲಿ ಲಂಕಾ ದಹನ, 21ರಂದು ರೇಡಿಂಗ್ ನಲ್ಲಿ ಕಂಸ ವಧೆ , 22 ರಂದು ಕಾರ್ಡಿಫ್ ನಲ್ಲಿ ಜಾಂಬವತಿ ಕಲ್ಯಾಣ
28 ರಂದು ಡರ್ಬಿಯಲ್ಲಿ ಗದಾಯುದ್ಧ ,
29 ರಂದು ಮ್ಯಾಂಚೆಸ್ಟರ್ ನಲ್ಲಿ ಪಾಂಚಜನ್ಯ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಜುಲೈ 5ರಂದು ಬರ್ಮಿಂಗ್ ಹ್ಯಾಮ್ ನಲ್ಲಿ ಭಸ್ಮಾಸುರ ಮೋಹಿನಿ ಪ್ರದರ್ಶನವಾಗಲಿದ್ದು ಜುಲೈ 6 ರಂದು ಬ್ರಿಸ್ಟಲ್ ನಲ್ಲಿ ಗಾನ – ನೃತ್ಯ ವೈಭವ ಆಯೋಜನೆಗೊಂಡಿದೆ.
ಕನ್ನಡದ ಶ್ರೀಮಂತಿಕೆಯ ಯಕ್ಷಗಾನ.. ವಿದೇಶಿ ನೆಲದಲ್ಲಿ ಪ್ರಸ್ತುತಗೊಳ್ಳುವ ಕ್ಷಣಕ್ಕಾಗಿ ಕಲಾವಿದರು ಉತ್ಸುಕರಾಗಿದ್ದಾರೆ.. ಅದನ್ನು ಆಸ್ವಾಧಿಸಲು ಯಕ್ಷಪ್ರಿಯರು ಕಾತರರಾಗಿದ್ದಾರೆ.
