ಸೋಮವಾರಪೇಟೆ ಹಳೇ ಸೇತುವೆಯಿಂದ ಬೈಕ್ ಸಮೇತ ಹಿನ್ನೀರಿಗೆ ಬಿದ್ದು ನಿವೃತ್ತ ಮುಖ್ಯ ಶಿಕ್ಷಕ ಸಾವು| ಜಾತ್ರಾ ಸಂಭ್ರಮಕ್ಕೆ ಸೂತಕದ ಛಾಯೆ ತಂದ ಗಣೇಶ  ಅಗಲಿಕೆ

ಸೋಮವಾರಪೇಟೆ ಹಳೇ ಸೇತುವೆಯಿಂದ ಬೈಕ್ ಸಮೇತ ಹಿನ್ನೀರಿಗೆ ಬಿದ್ದು ನಿವೃತ್ತ ಮುಖ್ಯ ಶಿಕ್ಷಕ ಸಾವು| ಜಾತ್ರಾ ಸಂಭ್ರಮಕ್ಕೆ ಸೂತಕದ ಛಾಯೆ ತಂದ ಗಣೇಶ  ಅಗಲಿಕೆ

ಹೊಸನಗರ: ತಾಲೂಕಿನ ಬಿದನೂರು ನಗರ ಸಮೀಪದ ಸೋಮವಾರಪೇಟೆ ಸೇತುವೆ ಮೇಲೆ ಬೈಕ್ ನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬೈಕ್ ಸಮೀಪ ಹಿನ್ನೀರಿಗೆ ಬಿದ್ದು ನಿವೃತ್ತ ಶಿಕ್ಷಕನೋರ್ವ ಸಾವನ್ನಪ್ಪಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಸಂಪೇಕಟ್ಟೆ ಸರ್ಕಾರಿಯಲ್ಲಿ ಮುಖ್ಯ ಶಿಕ್ಷಕರಾಗಿ ಕೆಲವು ತಿಂಗಳ ಹಿಂದೆಯಷ್ಟೇ ನಿವೃತ್ತಿಯಾಗಿದ್ದ ಗಣೇಶ್ (61) ಮೃತ ವ್ಯಕ್ತಿಯಾಗಿದ್ದಾರೆ.

ಮೃತ ಗಣೇಶ್ ಶನಿವಾರ ಬೆಳಿಗ್ಗೆ ಪತ್ನಿ ವೀಣಾರನ್ನು ಅವರು ಕಾರ್ಯನಿರ್ವಹಿಸುತ್ತಿರುವ ಅರಮನೆಕೊಪ್ಪ ಗ್ರಾಪಂಗೆ ಬಿಟ್ಟು, ವಾಪಾಸ್ ಬಂದಿದ್ದರು. ಬಳಿಕ ಕಾರ್ಯನಿಮಿತ್ತ ಬಸವನಬ್ಯಾಣದ ಕಡೆ ಹೋಗುತ್ತಿರುವಾಗ ಈ ದುರ್ಘಟನೆ ನಡೆದಿದೆ. ಹಿನ್ನೀರಿನಲ್ಲಿ ಬಿದ್ದಿದ್ದ ಬೈಕ್ ಮತ್ತು ವ್ಯಕ್ತಿಯ ಮೃತದೇಹ ನೋಡಿದ ಯಾರೋ ಸಾರ್ವಜನಿಕರು ಪರಿಚಿತರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ನಗರ ಠಾಣೆ ಪೊಲೀಸರು ಉಕ್ಕಡದ ಮೂಲಕ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ದಡಕ್ಕೆ ತಂದಿದ್ದಾರೆ. ಬಳಿಕ ಸ್ಥಳೀಯರ ಸಹಕಾರದಿಂದ ಬೈಕ್‌ನ್ನು ಮೇಲಕ್ಕೆ ಎತ್ತಿದ್ದಾರೆ.

 

ಈ ಸಂಬಂಧ ಮೃತರ ಪತ್ನಿ ವೀಣಾ ಠಾಣೆಗೆ ದೂರು ಸಲ್ಲಿಸಿದ್ದಾರೆ. ಬಿದನೂರು ಶ್ರೀ ಮಾರಿಕಾಂಬಾ ಜಾತ್ರೆ ನಡೆಯುತ್ತಿದ್ದು ಶನಿವಾರ ಕೊನೆಯದಿನವಾಗಿದೆ. ಬೆಳಿಗ್ಗೆಯಷ್ಟೇ ಮೃತ ಗಣೇಶ್ ಕೂಡ ದೇಗುಲಕ್ಕೆ ಬಂದು ದೇವಿಯ ದರ್ಶನ ಮಾಡಿ ಕೈಮುಗಿದು ಹೋಗಿದ್ದರು. ದೇವಸ್ಥಾನದ ಅಣತಿ ದೂರದಲ್ಲಿ ಮೃತರ ಮನೆ ಇದ್ದು ರೋಧನೆ ಮುಗಿಲು ಮುಟ್ಟಿದೆ. ಸಹಜವಾಗಿ ಮೃತ ಮುಖ್ಯಶಿಕ್ಷಕ ಗಣೇಶ್ ಸಾವು ಜಾತ್ರಾ ಸಂಭ್ರಮಕ್ಕೆ ಸೂತಕದ ಛಾಯೆ ಆವರಿಸುವಂತೆ ಮಾಡಿದೆ.

Exit mobile version