
ಶಿವಮೊಗ್ಗ ಜು.26: ದಕ್ಷಿಣದ ಚಿರಾಪುಂಜಿ ಸ್ಥಾನ ಅಲಂಕರಿಸಿರುವ ಮಳೆಕಾಡು ಆಗುಂಬೆಯ ಮಳೆಗೆ ಪೈಪೋಟಿ ನೀಡುವಂತೆ ರಾಜ್ಯದ ಹಲವು ತಾಣಗಳು ಕಂಡು ಬರುತ್ತಿವೆ. ಇದರಲ್ಲಿ ಆಗುಂಬೆಗೆ ಹತ್ತಿರದಲ್ಲಿರುವ ಹುಲಿಕಲ್ ಇತ್ತೀಚೆಗೆ ಹುಲಿಕಲ್ ತಾನೇ ಫಸ್ಟ್ ಎಂದು ಸಾಬೀತು ಪಡಿಸುತ್ತಲೇ ಇದೆ.
ಹಾಗೆ ನೋಡಿದರೆ ಆಗುಂಬೆ ಮತ್ತು ಹುಲಿಕಲ್ ಏರಿಯಲ್ ಡಿಸ್ಟೆನ್ಸ್ ಹೆಚ್ಚೇನು ಇಲ್ಲ. ಹೆಚ್ಚೆಂದೆರೆ 25 ರಿಂದ 30 ಕಿಮೀ ಒಳಗೆ ಈ ಎರಡು ಮಳೆಯ ಹಾಟ್‌ಸ್ಪಾಟ್‌ಗಳು ಕಂಡು ಬರುತ್ತವೆ.
ಹುಲಿಕಲ್ ಮಳೆ:
ಕಳೆದ 13 ವರ್ಷದಲ್ಲಿ 9 ವರ್ಷ ಹುಲಿಕಲ್‌ನಲ್ಲಿ ಹೆಚ್ಚು ಮಳೆ ಸುರಿದಿದ್ದು ಗಮನ ಸೆಳೆದಿದೆ. ಉಳಿದ 4 ವರ್ಷದಲ್ಲಿ ಆಗುಂಬೆಯಲ್ಲಿ ಹೆಚ್ಚು ಮಳೆಯಾಗಿದೆ. 2009, 2010, 2011, 2012, 2013, 2019, 2020, 2021ರಲ್ಲಿ ಹುಲಿಕಲ್‌ನಲ್ಲಿ ಹೆಚ್ಚು ಮಳೆ ಬಿದ್ದಿದೆ.
ಈ ವರ್ಷವೂ ಮುಂದೆ:
ಆಗುಂಬೆ ಮತ್ತು ಹುಲಿಕಲ್ ನಡುವೆ ಬರುವ ಹಲವು ಪ್ರದೇಶಗಳಲ್ಲೂ ಕೂಡ ಮಳೆ ದಾಖಲಾಗುತ್ತಿದ್ದು ಗಮನ ಸೆಳೆದಿದೆ. ಈ ವರ್ಷ ಜು.25ರ ತನಕ ಹುಲಿಕಲ್‌ನಲ್ಲಿ 3960 ಮಿಮೀ ಸುರಿದಿದ್ದರೆ, ಆಗುಂಬೆಯಲ್ಲಿ 3729 ಮಳೆ ಬಿದ್ದಿದೆ.
ಹುಲಿಕಲ್ ಅಭಿವೃದ್ಧಿ ಅಗತ್ಯ
ಕಳೆದ ಐದಾರು ದಶಕದಿಂದಲೂ ಹುಲಿಕಲ್‌ನಲ್ಲೇ ಹೆಚ್ಚು ಮಳೆಯಾಗುತ್ತಿದೆ. ಆದರೆ ಬಹಳ ಹಿಂದಿನ ಅಂಕಿಅAಶಗಳು ಸಿಗುತ್ತಿಲ್ಲ. ಸಿಕ್ಕ ಅಂಕಿ ಅಂಶದಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತಿರುವುದು ಸ್ಪಷ್ಟ. ಅಲ್ಲದೇ ಹುಲಿಕಲ್ ಇತ್ತೀಚೆಗೆ ಪ್ರವಾಸಿಗರ ನೆಚ್ಚಿನ ಪ್ರವಾಸಿತಾಣವಾಗಿ ಗಮನ ಸೆಳೆಯುತ್ತಿದೆ. ಪ್ರವಾಸೋಧ್ಯಮ ಅಭಿವೃದ್ಧಿ ಇಲ್ಲಿಯ ತುರ್ತು ಅಗತ್ಯವಾಗಿದೆ.
ಅನಂತಮೂರ್ತಿ ಶೆಣೈ, ಸ್ಥಳೀಯರು.