Bekkodi| ನಾವು ಸತ್ತಂತೆ ಆಗಿದೆ.. ಬದುಕಿಸಿ ಉಳಿಸಿ ಸ್ವಾಮಿ.. ಕೈಮುಗಿದು ಬೇಡಿದ ಬಡ ರೈತ ಕುಟುಂಬ

ಹೊಸನಗರ: ನನಗೆ 67 ವರ್ಷ. ಒಂದೊಳ್ಳೆ ಮನೆ ಕಟ್ಟಬೇಕು ಎಂಬುದು ಹಿಂದಿನ ಆಸೆ. ಮಕ್ಕಳು ಸೇರಿಕೊಂಡು ಮನೆಗೆ ಬುನಾದಿ ಹಾಕಿದೆವು. ಆಗ ಈಭಾಗದಲ್ಲಿ ಹೆದ್ದಾರಿ ಹೋಗುತ್ತೆ ಅಂದಾಗ ಆತಂಕಗೊAಡೆವು. ಅಧಿಕಾರಿಗಳ ಬಳಿ ಕೇಳಿದ್ರೆ ಮನೆಕಟ್ಟಲಿಕ್ಕೆ ತೊಂದರೆ ಇಲ್ಲ ಅಂದರು. ಸಾಲ ಸೋಲ ಮಾಡಿಕೊಂಡು ಮನೆ ಅರ್ಧ ಆಗಿದೆ. ಈಗ ಮನೆಯ ಮಧ್ಯಭಾಗಕ್ಕೆ ಸರಿಯಾಗಿ ಸರ್ವೇ ಕಲ್ಲು ನೆಟ್ಟಿದ್ದಾರೆ. ಮುಂದೇನು ಅಂತ ಗೊತ್ತಿಲ್ಲ.

ಹೌದು ಇದು ಅರಮನೆಕೊಪ್ಪ ಗ್ರಾಪಂ, ಹೆಬ್ಬುರುಳಿ ಗ್ರಾಮದ ಬೆಕ್ಕೋಡಿ ರೈತ ಪುಟ್ಟನಾಯ್ಕನ ಗೋಳು. ರಾಷ್ಟಿçÃಯ ಹೆದ್ದಾರಿಯಿಂದಾಗಿ ಈಗಾಗಲೇ ಸಾಲ ಮಾಡಿಕೊಂಡು ಈಗಾಗಲೇ 10 ಲಕ್ಷಕ್ಕು ಹೆಚ್ಚು ವೆಚ್ಚವಾಗಿರುವ ಹೊಸ ಮನೆಯ ಕಟ್ಟಡವನ್ನೇ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ. ಮುಂದೇನು ಅಂತ ದಾರಿ ಕಾಣದೆ ಕಂಗಾಲಾಗಿದ್ದಾರೆ.

ನಿಮಗೆ ಸಮಸ್ಯೆ ಇಲ್ಲ ಅಂದಿದ್ರು:
ಆರಂಭದಲ್ಲಿ ಬೈಪಾಸ್ ರಸ್ತೆಯನ್ನು ಹೊಸನಗರ-ಜಯನಗರ-ಸುತ್ತಾ, ಬೆಕ್ಕೋಡಿ-ಸಂಪೇಕಟ್ಟೆ ಮಾರ್ಗವಾಗಿ ಬೈಪಾಸ್ ಕಲ್ಪಿಸಲು ಉದ್ದೇಶಿಸಲಾಗಿದ್ದು ಇದಕ್ಕಾಗಿ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿ ಕಲ್ಲುಗಳನ್ನು ಹಾಕಲಾಗಿತ್ತು. ಸರ್ವೇ ಕಲ್ಲು 200 ಅಡಿಗಿಂತ ದೂರದಲ್ಲಿತ್ತು. ಈ ವೇಳೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಮನೆಕಟ್ಟಿಕೊಳ್ಳಿ ನಿಮಗೇನು ಸಮಸ್ಯೆ ಬರಲ್ಲ ಅಂದಿದ್ರು.
ನಂತರ ಬೈಪಾಸ್ ಮಾರ್ಗ ಬದಲಾಗಿದ್ದು ಮತ್ತೆ ಕಲ್ಲು ಹಾಕಿದ್ದು ಮನೆಯ ಮಧ್ಯಭಾಗಕ್ಕೆ ಬಂದಿದೆ. ಬೆಕ್ಕೋಡಿ- ಕೊಡಸೆ- ಆರಬೈಲು, ಮೂಡಾಗ್ರೆ, ಕೋಣೆಬೈಲು-ಹೊಸೂರು ಕಲ್ಲುಕೊಪ-ಅಡಗೋಡಿ ಮೂಲಕ ಬೈಪಾಸ್ ಹಾದು ಹೋಗಲಿದೆ. ಈಗ ಮನೆ ಕೆಲಸ ನಿಲ್ಲಿಸಿ ಅಂತ ಅಧಿಕಾರಿಗಳು ಹೇಳುತ್ತಿದ್ದಾರೆ. ಎಂದು ರೈತ ಪುಟ್ಟ ನಾಯ್ಕ ಆರೋಪಿಸಿದ್ದಾರೆ.

ಬೈಪಾಸ್ ಸರ್ವೇಯಲ್ಲಿ ಒಂದೇ ಮನೆಗೆ ಹಾನಿ:
ಹೊಸದಾಗಿ ಮಾಡಲಾಗಿರುವ ಬೈಪಾಸ್ ಸರ್ವೇಯಲ್ಲಿ ಒಂದಷ್ಟು ರೈತರ ಖಾತೆ ಜಮೀನು, ಬಗರ್‌ಹುಕುಂ ಜಮೀನು ಬಲಿಯಾಗಲಿದೆ. ಆದರೆ ಮನೆಗಳಲ್ಲಿ ಪುಟ್ಟನಾಯ್ಕರು ಹೊಸದಾಗಿ ಕಟ್ಟುತ್ತಿರುವ ಮನೆ ಮಾತ್ರ ಬಲಿಯಾಗುವ ಭೀತಿ ಎದುರಾಗಿದೆ. ಅಪ್ಪನ ಕಾಲದಲ್ಲಿ 15 ಗುಂಟೆ ಜಾಗ ಮಾತ್ರ ನಮ್ಮ ಪಾಲಿಗೆ ಬಂದಿದ್ದು ಅಲ್ಲೆ ಸೂರು ನಿರ್ಮಿಸಲಾಗಿತ್ತು. ಅದು ಕೂಡ ದುಸ್ಥಿತಿಗೆ ಬಂದಿದ್ದು ಬೀಳುವ ಹಂತಕ್ಕೆ ಬಂದಿದೆ. ಬೇರೆ ದಾರಿ ಕಾಣದೆ ಹೊಸ ಮನೆಕಟ್ಟಲು ಮನಸ್ಸು ಮಾಡಿದೆವು. ಈಗ ಮತ್ತೆ ಬಡ ರೈತನ ಪಾಲಿಗೆ ಅತಂತ್ರ ಸ್ಥಿತಿ ಎದುರಾಗಿದೆ.

ಹಕ್ಕುಪತ್ರ ದಾಖಲೆ ಇಲ್ಲ:
ಮೊದಲು ಮನೆಕಟ್ಟಿಕೊಳ್ಳಿ ಎಂದ ಅಧಿಕಾರಿಗಳು ಈಗ ಮನೆ ಜಾಗದ ದಾಖಲೆ ಕೇಳುತ್ತಿದ್ದಾರೆ. ಅಪ್ಪನ ಕಾಲದಿಂದಲೂ ಸುಮಾರು 100 ವರ್ಷಕ್ಕು ಮಿಗಿಲಾಗಿ ಇಲ್ಲೇ ಬದುಕು ಕಟ್ಟಿಕೊಂಡಿದ್ದೇವೆ. ಆದರೆ ಭೂಮಿ ಹಕ್ಕುಪತ್ರ ಸಿಕ್ಕಿಲ್ಲ. ಕೆಪಿಸಿ 1997ರಲ್ಲೇ ಅರ್ಜಿ ಸಲ್ಲಿಸಿದ್ದೆವು ಆದರೂ ಈವರೆಗೆ ಪ್ರಯೋಜನವಾಗಿಲ್ಲ. ಈಗ ದಾಖಲೆ ಕೊಡಿ ಅಂದ್ರೆ ಎಲ್ಲಿಂದ ಕೊಡೋದು ಸ್ವಾಮಿ.. ದಾಖಲೆ ಇಲ್ಲ ಅಂದ್ರೆ ಪರಿಹಾರ ಇಲ್ಲ. ಮೈತುಂಬ ಸಾಲ ಮಾಡಿಕೊಂಡು ಮನೆ ಕಟ್ಟಲಾಗಿದೆ. ಮನೆ ನೆಲಸಮವಾದರೆ ನಮ್ಮ ಬದುಕೇ ಕುಸಿದಂತೆ ಎಂದು ರೈತ ಅಳಲು ತೋಡಿಕೊಂಡಿದ್ದಾನೆ.
ದಯಮಾಡಿ ಮನೆ ಉಳಿಸಿಕೊಡಿ:
ನಗರ ಪ್ರದೇಶದಲ್ಲಿ ಪ್ರಭಾವಿಗಳ ಒತ್ತಡಕ್ಕೆ ಮಣಿದು ಕಟ್ಟಡಗಳನ್ನು ಉಳಿಸಿಕೊಂಡು ಉದಾಹರಣೆ ಇದೆ. ದೇವಸ್ಥಾನಕ್ಕೆ ಸಂಚಕಾರ ಬಂದಾಗ ಉಳಿಸಿಕೊಂಡ ಘಟನೆಯೂ ಹತ್ತಿರದಲ್ಲೇ ಇದೆ. ನಮಗೆ ಈ ಮನೆ ಬಿಟ್ಟರೇ ಬೇರೆನಿಲ್ಲ ಸ್ವಾಮಿ. ಅಕ್ಕಪಕ್ಕ ಬೇಕಾದಷ್ಟು ಜಾಗವಿದೆ. ದಯಮಾಡಿ ಮನೆ ಉಳಿಸಿಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಪುಟ್ಟನಾಯ್ಕರ ಮಗ ವೆಂಕಟೇಶ ಬೇಡಿಕೊಳ್ಳುವಂತಾಗಿದೆ.

ಪಾರ್ವತಮ್ಮ ಕಣ್ಣೀರು:
ಹೊಸಮನೆಯ ಪಕ್ಕ ಸರ್ವೇಕಲ್ಲು ನೆಡುತ್ತಿದ್ದಂತೆ ಪುಟ್ಟನಾಯ್ಕರ ಪತ್ನಿ ಪಾರ್ವತಮ್ಮ ಕಣ್ಣೀರಲ್ಲೇ ಕೈತೊಳೆಯುವಂತಾಗಿದೆ. ನಮಗೆ ಶಕ್ತಿ ಇಲ್ಲ. ದೊಡ್ಡವರ ಸಂಪರ್ಕವೂ ಇಲ್ಲ. ಇದ್ದ ಮನೆ ಕುಸಿಯುತ್ತಿದೆ. ಮಕ್ಕಳ ಶ್ರಮದಲ್ಲಿ ಸಾಲ ಮಾಡಿಕೊಂಡು ಮನೆ ಕಟ್ಟಲು ಶುರು ಮಾಡಿದ್ವಿ. ಅಧಿಕಾರಿ ಮೊದಲ ಸರ್ವೇ ಕಾರ್ಯದಲ್ಲೇ ಹೆದ್ದಾರಿ ಇಲ್ಲೇ ಹೋಗತ್ತೆ ಅಂದಿದ್ರೆ. ಸಾಲ ಮಾಡೋದು ಉಳಿತಿತ್ತು. ಈಗ ಮನೆನೂ ಹೋಗತ್ತೆ.. ಸಾಲ ಮಾತ್ರ ಉಳಿಯತ್ತೆ ಅಂದ್ರೆ ಬದುಕಿದ್ದು ಸತ್ತಂತೆ ಎಂದು ಅಲವತ್ತು ಕೊಂಡಿದ್ದಾರೆ.

VIDEO REPORT | ಬೆಕ್ಕೋಡಿ ಗೋಳು.. ನಮ್ಮನ್ನು ಬದುಕಿಸಿ  ಈ ವೀಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..https://youtu.be/HSuj2nP-1-I

ಖಿನ್ನತೆಗೆ ಒಳಗಾದ ಕುಟುಂಬವನ್ನು ರಕ್ಷಿಸಿ:
ಇದು ನಗರ ಪ್ರದೇಶದಲ್ಲಿರುವಂತೆ ಒತ್ತಟ್ಟಿಗೆ ಒಂದಷ್ಟು ಮನೆಗಳು ಇರೋ ಜಾಗವಲ್ಲ. ಇರುವುದೇ ಒಂದು ಮನೆ. ಸರ್ಕಾರ ಮನಸ್ಸು ಮಾಡಿದ್ರೆ ಮನೆಯನ್ನು ಉಳಿಸೋದು ಕಷ್ಟವಲ್ಲ. ಈಗಾಗಲೇ ಪುಟ್ಟನಾಯ್ಕ ಕುಟುಂಬ ಖಿನ್ನತೆಗೆ ಒಳಗಾಗಿದೆ. ಆ ಕುಟುಂಬಕ್ಕೆ ಬದುಕಿನ ರಕ್ಷಣೆ ನೀಡಬೇಕು.
– ಕೊಡಸೆ ಚಂದ್ರಪ್ಪ, ಸದಸ್ಯರು ಗ್ರಾಪಂ

ನಾವು ಸತ್ತಂತೆ.!
ಕಷ್ಟಪಟ್ಟು ಕಟ್ಟುತ್ತಿರುವ ಮನೆ ಕಣ್ಮುಂದೆ ಕುಸಿದರೆ ನಾವು ನಮ್ಮ ಬದುಕು ಸತ್ತಂತೆ. ಅಧಿಕಾರಿಗಳ ಬದಲಾದ ಹೇಳಿಕೆಗಳಿಂದ ನಮ್ಮ ಬದುಕು ಇಕ್ಕಟ್ಟಿಗೆ ಸಿಲುಕಿದೆ. ಸಾಲ ಮಾಡಿ ಮನೆಗೆ ವ್ಯಯ ಮಾಡಲಾಗಿದೆ. ಮನೆ ಬಲಿಯಾದರೇ ನಮ್ಮ ಕುಟುಂಬವೇ ಬಲಿಯಾದಂತೆ ದಯಮಾಡಿ ನಮ್ಮನ್ನು ರಕ್ಷಿಸಿ
– ವೆಂಕಟೇಶ್ ನಾಯಕ್, ಪುಟ್ಟನಾಯ್ಕರ ಪುತ್ರ

ಅನ್ಯಾಯ ಆಗಲ್ಲ:
ಪುಟ್ಟನಾಯ್ಕರ ನಿರ್ಮಾಣಗೊಳ್ಳುತ್ತಿರುವ ಮನೆ ಕಟ್ಟಡದ ವಿಚಾರ ಗಮನಕ್ಕೆ ಬಂದಿದೆ. ನಾನು ಬೆಂಗಳೂರಿನಲ್ಲಿದ್ದು, ದೆಹಲಿಗೆ ಭೇಟಿ ನೀಡುವ ಕೆಲಸವಿದೆ. ಅದನ್ನು ಮುಗಿಸಿಕೊಂಡು ಎರಡು ವಾರದ ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಅಲ್ಲಿಯ ನಿವಾಸಿಗಳ ಬಗ್ಗೆ ನಮಗೂ ಕಾಳಜಿ ಇದೆ. ಅನ್ಯಾಯವಾಗದಂತೆ ಕಾರ್ಯನಿರ್ವಹಿಸಲಾಗುವುದು
– ಪೀರ್ ಪಾಶಾ, ವಿಶೇಷ ಅಧಿಕಾರಿ ಹೆದ್ದಾರಿ ಪ್ರಾಧಿಕಾರ

Exit mobile version