
ಅದೊಂದು ಐದು ತಲೆಮಾರು ಇಂದಿಗೂ ಹೊಂದಿರುವ ಮನೆತನ.. 103 ವರ್ಷದ ಶತಾಯುಷಿ ಮುತ್ತಜ್ಜಿ.. ಉತ್ತಮ ಶಿಕ್ಷಕಿಗೆ ಮುತ್ತಜ್ಜಿಯಿಂದ ಮನೆತನದ ಗೌರವ ಸಲ್ಲಿಕೆ.. ಇದು ಸಂಪದಮನೆ ಕುಟುಂಬದ ಹಿರಿಮೆ
ಹೊಸನಗರ: ಉತ್ತಮ ಶಿಕ್ಷಕ- ಶಿಕ್ಷಕರಿಯರಿಗೆ ಶಿಕ್ಷಕರ ದಿನಾಚರಣೆಯ ಗೌರವ ಸರ್ವೇ ಸಾಮಾನ್ಯ. ಆದರೆ ಇಲ್ಲಿ ತಾಲೂಕು ಉತ್ತಮ ಶಿಕ್ಷಕಿ ಪಡೆದ ದೀಪಾಗೆ ಮನೆತನದ ಗೌರವ ನೀಡಿ ಗಮನ ಸೆಳೆದ ಘಟನೆ ತಾಲೂಕಿನ ಸಂಪದಮನೆಯಲ್ಲಿ ಗುರುವಾರ ನಡೆದಿದೆ.
ಬೇಳೂರು ನಾಗೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ದೀಪಾ ಶಿವರಾಮ ಶೆಟ್ಟಿ ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಕೊಂಡಿದ್ದು ಸಂಪದಮನೆ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿತ್ತು.
ಸಂಪದಮನೆ ಕುಟುಂಬದ ಮುತ್ತಜ್ಜಿ, 103 ವರ್ಷದ ಶತಾಯುಷಿ ಬೈಂದೂರಿನ ಪಟೇಲ್ ವಂಶದ ತುಂಗಮ್ಮ ಶೆಡ್ತಿ, ಪ್ರಶಸ್ತಿ ಪುರಸ್ಕೃತ ದೀಪಾರಿಗೆ ಪೇಟ್ ತೊಡಿಸಿ ಸನ್ಮಾನಿಸಿ ಗೌರವಿಸಿದರು.
ಇಂದಿಗೂ ಸಂಪದಮನೆ ಐದು ತಲೆಮಾರು ಹೊಂದಿರುವ ಅವಿಭಕ್ತ ಕುಟುಂಬವಾಗಿರುವುದು ವಿಶೇಷ. ದೀಪಾಳಿಗೆ ಪ್ರಶಸ್ತಿ ಬಂದಿರುವುದು ಮನೆತನದ ಗೌರವವನ್ನು ಹೆಚ್ಚಿಸಿದೆ. ಆಕೆಗೆ ದೇವರು ಒಳ್ಳೆಯದು ಮಾಡಲಿ ಎಂದು ಶತಾಯುಷಿ ತುಂಗಮ್ಮ ಶೆಡ್ತಿ ಹಾರೈಸಿದರು.
ಈ ವೇಳೆ ರಮಾ ಶೆಟ್ಟಿ, ಉಮಾ ಶೆಟ್ಟಿ, ಅಭಿರಾಮ್, ಕುಮಾರಿ ಅವನಿ ಉಪಸ್ಥಿತರಿದ್ದರು.