
- ಹೊಸನಗರ ತಾಲೂಕು ಪ್ರಾಥಮಿಕ ಶಾಲಾ ಗಣಪತಿ ಕುರಿತ ವೀಡಿಯೋ ಗಾಯನ.. ನ್ಯೂಸ್ ಪೋಸ್ಟ್ ಮಾರ್ಟಮ್ ಮೀಡಿಯಾ ಆಯೋಜನೆ.. TOP ONE ಆಗಿ ಹೊರಹೊಮ್ಮಿದ ಭೂಮಿ ಎನ್ ಪೂಜಾರ್.. ರಿಪ್ಪನಪೇಟೆ ಸರ್ಕಾರಿ ಮಾದರಿ ಶಾಲೆಯ ವಿದ್ಯಾರ್ಥಿನಿ.. 3102 VIEWS ಪಡೆದು ಪ್ರಥಮ ಸ್ಥಾನ
ಹೊಸನಗರ : ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆ, ನ್ಯೂಸ್ ವೆಬ್‌ಸೈಟ್ ಹಾಗೂ ನ್ಯೂಸ್ ಯುಟ್ಯೂಬ್ ಚಾನೆಲ್ ವತಿಯಿಂದ ಹೊಸನಗರ ತಾಲ್ಲೂಕಿನ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ಗಣಪತಿ ಕುರಿತ ಭಕ್ತಿಗೀತೆಯ ವಿಡಿಯೋ ಗಾಯನ ಸ್ಪರ್ಧೆಯಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಭೂಮಿ ಎನ್. ಪೂಜಾರ್ ಟಾಪ್ ಒನ್ ಆಗಿ ಹೊರಹೊಮ್ಮಿದ್ದಾಳೆ. ಸ್ಪರ್ಧೆಯ ಅಂತಿಮ ಸುತ್ತಿನಲ್ಲಿದ್ದ ಒಟ್ಟು 13 ವಿದ್ಯಾರ್ಥಿಗಳ ಹಾಡಿನ ವಿಡಿಯೋಗಳಲ್ಲಿ ಆರಂಭದಿಂದಲೂ ಮುಂಚೂಣಿಯಲ್ಲಿದ್ದ ಭೂಮಿ ಎನ್. ಪೂಜಾರ್ ಹಾಡಿನ ವಿಡಿಯೋ 3,102 ವೀಕ್ಷಣೆಗಳನ್ನು ಪಡೆದು ಸ್ಪರ್ಧೆಯಲ್ಲಿ ಗೆಲುವನ್ನು ತನ್ನದಾಗಿಸಿಕೊಂಡಿದೆ.
ಈ ಸ್ಪರ್ಧೆಯಲ್ಲಿ ಟಾಪ್ ಒನ್ ಎಂದು ಘೋಷಿಸಲ್ಪಟ್ಟಿರುವ ಭೂಮಿ ಎನ್. ಪೂಜಾರ್‌ಗೆ ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆ, ನ್ಯೂಸ್ ವೆಬ್‌ಸೈಟ್ ಹಾಗೂ ನ್ಯೂಸ್ ಯುಟ್ಯೂಬ್ ಚಾನೆಲ್ ವತಿಯಿಂದ 1,001 ರೂಪಾಯಿ ನಗದು ಬಹುಮಾನದೊಂದಿಗೆ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗುವುದು.
ಹೊಸನಗರ ತಾಲ್ಲೂಕಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು ಎನ್ನುವ ಉದ್ದೇಶದಿಂದ ಈ ಬಾರಿಯ ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ನ್ಯೂಸ್ ಪೋಸ್ಟ್‌ಮಾರ್ಟಮ್ ಪತ್ರಿಕಾ ಸಮೂಹ ಗಣಪತಿ ಕುರಿತ ವಿಡಿಯೋ ಗಾಯನ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸ್ಪರ್ಧೆಗೆ ಹೊಸನಗರ ತಾಲ್ಲೂಕಿನ ಪುಟಾಣಿ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆಯೇ ಸಿಕ್ಕಿದ್ದು, ಒಟ್ಟು 43 ವಿದ್ಯಾರ್ಥಿಗಳ ಗಣಪತಿ ಭಕ್ತಿಗೀತೆ ಗಾಯನದ ವಿಡಿಯೋ ನಮ್ಮನ್ನು ತಲುಪಿದ್ದವು. ಸ್ಪರ್ಧೆಗೆ ನ್ಯೂಸ್ ಪೋಸ್ಟ್‌ಮಾರ್ಟಮ್ ಹಲವು ನಿಯಮಗಳನ್ನು ವಿಧಿಸಿತ್ತು. ಆ ಎಲ್ಲಾ ನಿಯಮಗಳನ್ನು ಪಾಲಿಸಿದ ಮತ್ತು ಸ್ಪರ್ಧೆಗೆ ಎಲ್ಲಾ ರೀತಿಯಿಂದಲೂ ಸೂಕ್ತವಾದ ಒಟ್ಟು 13 ವಿದ್ಯಾರ್ಥಿಗಳ ಹಾಡಿನ ವಿಡಿಯೋವನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದ್ದು, ಮಕ್ಕಳ ಭಕ್ತಿಗೀತೆ ಗಾಯನದ ವಿಡಿಯೋಗಳು ನ್ಯೂಸ್ ಪೋಸ್ಟ್‌ಮಾರ್ಟಮ್ ಯುಟ್ಯೂಬ್ ಚಾನೆಲ್ಲಿನಲ್ಲಿ ಪ್ರಸಾರವಾಗುತ್ತಿದ್ದವು. ಅಕ್ಟೋಬರ್ 13ರವರೆಗೆ ಈ ವಿಡಿಯೋಗಳ ನಡುವೆ ಸ್ಪರ್ಧೆ ನಡೆಯಲಿದ್ದು, ಅಂದಿನವರೆಗೆ ಅತಿಹೆಚ್ಚು ಅಂದರೆ 3 ಸಾವಿರಕ್ಕಿಂತ ಹೆಚ್ಚು ವೀಕ್ಷಣೆ ಹಾಗೂ ಲೈಕ್‌ಗಳನ್ನು ಪಡೆದ ಒಬ್ಬ ಸ್ಪರ್ಧಿಯ ವಿಡಿಯೋವನ್ನು ಟಾಪ್ ಒನ್ ಎಂದು ಘೋಷಿಸಲಾಗುವುದು ಎಂದು ಸ್ಪರ್ಧೆಯ ಆರಂಭದಲ್ಲಿ ತಿಳಿಸಲಾಗಿತ್ತು. ಅದರಂತೆಯೇ ಭೂಮಿ ಎನ್. ಪೂಜಾರ್ ಈ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾಳೆ.
ಭೂಮಿ ಎನ್. ಪೂಜಾರ್ ನಂತರ ಹೊಸನಗರದ ಕುವೆಂಪು ವಿದ್ಯಾಶಾಲೆ 6ನೇ ತರಗತಿ ವಿದ್ಯಾರ್ಥಿ ದೇಶಿಕ್ ಚರಣ್ ಸಿ 1,224 ವೀಕ್ಷಣೆಗಳನ್ನು ಹಾಗೂ ಕಡಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಸೌಜನ್ಯ ಎನ್.ಎಸ್ 797 ವೀಕ್ಷಣೆಗಳನ್ನು ಪಡೆದುಕೊಂಡಿದ್ದಾರೆ.