
ಹೊಸನಗರ.ಜು.25: ಅತೀ ಹೆಚ್ಚು ಸಂತ್ರಸ್ಥರಿಂದ ಕೂಡಿದ ನಗರ ಹೋಬಳಿಯ ಬಡ ಮಧ್ಯಮ, ರೈತ, ಕೂಲಿಕಾರ್ಮಿಕರು, ವರ್ತಕರ ಹಿತದೃಷ್ಟಿಯಿಂದ ಚಿಕ್ಕಪೇಟೆ ನಗರದಲ್ಲಿ ಡಿಸಿಸಿ ಬ್ಯಾಂಕ್ ತೆರೆಯುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಸಂಬಂಧ ವರ್ತಕ ಸುರೇಶಭಟ್ ನೇತೃತ್ವದಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ ಬಳಿ ತೆರಳಿದ ನಿಯೋಗ ಡಿಸಿಸಿ ಬ್ಯಾಂಕ್ ಶಾಖೆ ತೆರೆಯುವ ಸಲುವಾಗಿ ಅಹವಾಲು ಸಲ್ಲಿಸಿದೆ.
ಹೋಬಳಿ ಕೇಂದ್ರ ನಗರ ಸಮೀಪವಿರುವ ಚಿಕ್ಕಪೇಟೆ ಜನನಿಬಿಡ ಪ್ರದೇಶವಾಗಿದ್ದು ಉತ್ತಮ ವ್ಯವಹಾರ ನಡೆಯುವ ಸ್ಥಳವಾಗಿದೆ. ಈ ನಗರ ಹೋಬಳಿ ರೈತರ ಆರ್ಥಿಕ ವ್ಯವಹಾರ, ಸೌಲಭ್ಯ ಸುಧಾರಿಸುವ ನಿಟ್ಟಿನಲ್ಲಿ ಬ್ಯಾಂಕ್ ನ ಅಗತ್ಯವಿದೆ ಎಂದು ನಿಯೋಗದ ಪ್ರಮುಖರು ಅಧ್ಯಕ್ಷರಿಗೆ ಮನದಟ್ಟು ಮಾಡಿದರು.
ಈ ಹಿಂದೆ ಕೂಡ ಈ ಭಾಗದಲ್ಲಿ ಶಾಖೆ ತೆರೆಯುವ ಸಂಬಂಧ ಸರ್ವೇ ನಡೆಸಲಾಗಿದ್ದು ನಂತರ ಸ್ಥಗಿತಗೊಂಡಿದೆ. ನಾಡಿನ ಬೆಳಕಿಗಾಗಿ ತ್ಯಾಗ ಮಾಡಿದ ನಗರ ಹೋಬಳಿಯ ಹಿತದೃಷ್ಟಿಯಿಂದ ಶಾಖೆ ತೆರೆಯುವ ಸಂಬಂಧ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಅಧ್ಯಕ್ಷ ಚನ್ನವೀರಪ್ಪ, ಶಾಖೆ ತೆರೆಯುವ ಸಂಬಂಧ ಡಿಸಿಸಿ ಬ್ಯಾಂಕಿಗಿರುವ ಅವಕಾಶ ಲಭ್ಯತೆ ಪರಿಗಣಿಸಬೇಕಾಗುತ್ತದೆ. ಮುಂದಿನ ದಿನದಲ್ಲಿ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಿಯೋಗದಲ್ಲಿ ಎಪಿಎಂಸಿ ಮಾಜಿ ಸದಸ್ಯ ಕಣಕಿ ಮಹೇಶ್, ನೂಲಿಗ್ಗೇರಿ ವರ್ತಕ ಭಾಸ್ಕರ್ ಭಟ್, ನಗರ ಸೊಸೈಟಿ ಮಾಜಿ ಉಪಾಧ್ಯಕ್ಷ ವಿನಾಯಕ ಚಕ್ಕಾರು, ಬಿದನೂರು ಗೇರುಬೀಜ ಕಾರ್ಖಾನೆ ಮಾಲೀಕ ಎನ್.ರಾಘವೇಂದ್ರ, ವೈಶ್ಣವಿ ಪ್ರಿಂಟರ್ಸ್ ಮಾಲೀಕ ಅರುಣಾಚಲ, ಭಾರತ್ ಫೌಲ್ಟ್ರಿ ಫಾರಂ ಮಾಲೀಕ ಮಾಲತೇಶ ಗೌಡ, ವರ್ತಕ ನರೇಂದ್ರಪೈ, ಟ್ರಾವೆಲ್ಸ್ ಮಾಲೀಕ ದತ್ತಾತ್ರೇಯ ರಾವ್ ಇದ್ದರು.