ಮೂರು ತಿಂಗಳಲ್ಲಿ ಮೂರು ಕೋಟಿ ಠೇವಣಿ : ಚಿಕ್ಕಪೇಟೆ ಡಿಸಿಸಿ ಬ್ಯಾಂಕ್ ಸಾಧನೆ : ಎಂ.ಎಂ.ಪರಮೇಶ್ವರ್
ಹೊಸನಗರ: ತಾಲೂಕಿನ ಚಿಕ್ಕಪೇಟೆ ನಗರದಲ್ಲಿರುವ ಡಿಸಿಸಿ ಬ್ಯಾಂಕ್‌ನ ನೂತನ ಶಾಖೆ ಕೇವಲ ಮೂರು ತಿಂಗಳಲ್ಲಿ ರೂ.3ಕೋಟಿ ಠೇವಣಿ ಸಂಗ್ರಹಿಸಿ ಸಾಧನೆ ಮಾಡಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ.ಪರಮೇಶ್ವರ ಹೇಳಿದರು.
ಹೊಸ ವರ್ಷ ಆರಂಭದ ಅಂಗವಾಗಿ ಬ್ಯಾಂಕಿನಲ್ಲಿ ಕೇಕ್ ಕತ್ತರಿಸಿ ಚಾಲನೆ ನೀಡಿದ ಅವರು, ಸದರಿ ಬ್ಯಾಂಕ್ ಶಾಖೆ ನಿರೀಕ್ಷೆ ಮೀರಿ ಪ್ರಗತಿಯತ್ತ ಹೆಜ್ಜೆ ಇಟ್ಟಿದೆ ಎಂದು ಶ್ಲಾಘಿಸಿದರು.
ನಗರ ಹೋಬಳಿಯ ಯಡೂರು, ಮಾಸ್ತಿಕಟ್ಟೆ, ನಿಟ್ಟೂರು ಸಂಪೇಕಟ್ಟೆ ಸೇರಿದಂತೆ ಗಡಿಭಾಗದ ರೈತಾಪಿ ವರ್ಗ ಡಿಸಿಸಿ ಬ್ಯಾಂಕಿಗಾಗಿ ತಾಲೂಕು ಕೇಂದ್ರ ಹೊಸನಗರಕ್ಕೆ ಹೋಗಬೇಕಿತ್ತು. ಹೋಬಳಿ ಕೇಂದ್ರದಲ್ಲಿ ಬ್ಯಾಂಕ್ ಶಾಖೆ ತೆರೆದಿರುವ ಕಾರಣ ಜನರಿಗೆ ಅನುಕೂಲವಾಗಿದೆ. ಬಂಗಾರ ಅಡಮಾನ ಸಾಲ ಸೇರಿದಂತೆ ಎಲ್ಲಾ ರೀತಿಯ ಸಾಲ ಸೌಲಭ್ಯ ನೀಡಲಾಗುತ್ತಿದ್ದು ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಉತ್ತಮ ವ್ಯವಹಾರಕ್ಕಾಗಿ ಸಿಬ್ಬಂದಿ ಕೊರತೆ ನೀಗಿಸುವ ಸಲುವಾಗಿ ಮನವಿ ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿ ಹೆಚ್ಚಿಸುವ ಭರವಸೆ ನೀಡಿದರು.
ಶಾಖಾ ವ್ಯವಸ್ಥಾಪಕ ಸ್ವಾಮಿ ಎಂ.ಆರ್, ಹೇಮಂತಕುಮಾರ್, ಪುನೀತ್ ಕುಮಾರ್, ವೀಣಾ ಶ್ರೀಧರ್, ನಂದಿತಾ, ಕಾವ್ಯಾ ಇಂದ್ರ, ಅರುಣಾಚಲ ಹೆಚ್.ಎಸ್, ಶಿವರಾಂ, ಜಗನ್ನಾಥ ಇದ್ದರು.