ಮತ್ತೆ ಚುನಾವಣೆಗೆ ನಿಂತಿಲ್ಲ.. ಆದರೂ ಪರಾಜಿತ ಅಭ್ಯರ್ಥಿ ಈಗ ಗ್ರಾಪಂ ಸದಸ್ಯ!

ಕೋರ್ಟ್ ತೀರ್ಪು ಹಿನ್ನೆಲೆ: ಈರಾಗೋಡು ಗೋಪಾಲ್ ಗೆ ಸದಸ್ಯತ್ವ ಪ್ರಮಾಣಪತ್ರ ವಿತರಣೆ

ಹೊಸನಗರ: ಹರಿದ್ರಾವತಿ ಗ್ರಾಪಂ ಹೀಲಗೋಡು ಕ್ಷೇತ್ರದಿಂದ ಆಯ್ಕೆಗೊಂಡಿದ್ದ ಸದಸ್ಯ ಹೆಚ್ ಅಶೋಕ್ ಎಂಬುವವರನ್ನು ಅನರ್ಹ ಗೊಳಿಸಿ ಹೊಸನಗರ ಜೆಎಂಎಫ್ಸಿ ನ್ಯಾಯಾಲಯ ನೀಡಿದ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದ ಹಿನ್ನೆಲೆಯಲ್ಲಿ ನೂತನ ಸದಸ್ಯ ಈರಾಗೋಡು ಗೋಪಾಲರಿಗೆ ತಹಶೀಲ್ದಾರ್ ರಾಕೇಶ್ ಪ್ರಾನ್ಸಿಸ್ ಬ್ರಿಟ್ಟೋ ಸದಸ್ಯತ್ವ ಪ್ರಮಾಣ ಪತ್ರವನ್ನು ಶುಕ್ರವಾರ ವಿತರಿಸಿದರು.

ಹರಿದ್ರಾವತಿ ಗ್ರಾಪಂನ ಹೀಲಗೋಡು ಸಾಮಾನ್ಯ ಕ್ಷೇತ್ರದಿಂದ ಪ್ರತಿಸ್ಪರ್ಧಿ ಈರಗೋಡು ಗೋಪಾಲ ವಿರುದ್ಧ ಹೆಚ್ ಅಶೋಕ ಕೇವಲ 3 ಮತದಿಂದ ಆಯ್ಜೆಯಾಗಿದ್ದರು. ಆದರೆ ಹೆಚ್.ಅಶೋಕ ಚುನಾವಣೆಗೆ ಸ್ಪರ್ಧಿಸುವ ವೇಳೆ ಕೆಲ ಅಂಶಗಳನ್ನು ಮುಚ್ಚಿಟ್ಟು ಸುಳ್ಳು ಮಾಹಿತಿ ನೀಡಿದ್ದರು ಎಂದು ಆರೋಪಿಸಿ ಈರಗೋಡು ಗೋಪಾಲ ಚುನಾವಣ ಆಯೋಗಕ್ಕೆ ದೂರು ನೀಡಿದ್ದರು.

ಪ್ರಕರಣ ಕೈಗೆತ್ತಿಕೊಂಡ ಹೊಸನಗರ ಜೆಎಂಎಫ್ಸಿ ನ್ಯಾಯಾಲಯ ಹೆಚ್.ಅಶೋಕರನ್ನು ಗ್ರಾಪಂ ಸದಸ್ಯ ಸ್ಥಾನದಿಂದ ಅಸಿಂಧುಗೊಳಿಸಿ, ಎರಡನೇ ಸ್ಥಾನದಲ್ಲಿದ್ದ ಈರಗೋಡು ಗೋಪಾಲ್ ಸದಸ್ಯ ಸ್ಥಾನಕ್ಕೆ ಅರ್ಹಗೊಳಿಸಿತ್ತು.. ಬಳಿಕ ಅಶೋಕ ಹೈಕೋರ್ಟ್ ಮೆಟ್ಟಲೇರಿ ತಡೆಯಾಜ್ಞೆ ತಂದಿದ್ದರು.
ಬಳಿಕ ವಿಚಾರಣೆ ನಡೆಸಿದ ಹೈಕೋರ್ಟ್.. ಈ ಹಿಂದೆ ಹೊಸನಗರ ನ್ಯಾಯಾಲಯ ನೀಡಿದ ತೀರ್ಪನ್ನು ಎತ್ತಿಹಿಡಿದಿತ್ತು.

ಹರಿದ್ರಾವತಿ ಗ್ರಾಪಂ ಸಭಾಂಗಣದಲ್ಲಿ ತಹಶೀಲ್ದಾರ್ ನೂತನ ಸದಸ್ಯರಿಗೆ ಪ್ರಮಾಣಪತ್ರ ವಿತರಿಸಿದರು.
ಹರಿದ್ರಾವತಿ ಗ್ರಾಪಂ ಅಧ್ಯಕ್ಷ ಹೆಚ್.ಆರ್.ಮಂಜುನಾಥ್, ಉಪಾಧ್ಯಕ್ಷೆ ಜಯ ಸುಬ್ರಾವ್, ಸದಸ್ಯರಾದ ವಾಟಗೋಡು ಸುರೇಶ್, ವಿಶಾಲಾಕ್ಷಿ ರಾಜೇಂದ್ರ, ಲೀಲಾವತಿ ಸುರೇಶ್, ಪೂರ್ಣಿಮ ಲಕ್ಷ್ಮಣ, ಸೀತಾ ಸಂತೋಷ್, ಗುರುಮೂರ್ತಿ ಇದ್ದರು.

Exit mobile version