
ಹೊಸನಗರ: ಗುರುವಾರ ರಾತ್ರಿ ಹುಲಿಕಲ್ ಸಮೀಪ ಭೀಕರ ರಸ್ತೆ ಅಪಘಾತ ನಡೆದು ಬಾಲಕ ಸೇರಿ ಇಬ್ಬರು ಸ್ಥಳದಲ್ಲೇ ಧಾರುಣ ಸಾವು ಕಂಡ ಘಟನೆ ನಡೆದಿದೆ.
ಮಹಿಳೆಯೋರ್ವಳ ಒಂದು ಕಾಲು ಕಟ್ ಆಗಿದ್ದು ಮತ್ತೊಂದು ಕಾಲು ಕೂಡ ಗಂಭೀರ ಗಾಯಗೊಂಡಿದ್ದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಂದೆ ಮತ್ತು ಅಣ್ಣನ ಮಗ ಸಾವು:
ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ಕಂಪದ ಕೈನಿವಾಸಿ ರವಿ, ಆತನ ಪತ್ನಿ ಶಾಲಿನಿ, ರವಿ ಅಣ್ಣನ ಮಗ ಬಾಲಕ ಶಿಶಿರ ಬೈಕ್ ನಲ್ಲಿ ಹುಲಿಕಲ್ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸ ಪೂಜೆ ಮುಗಿಸಿಕೊಂಡು ವಾಪಾಸುಗುತ್ತಿದ್ದರು. ಈ ವೇಳೆ ಅಪಘಾತಕ್ಕೆ ತುತ್ತಾಗಿ ರವಿ(47) ಮತ್ತು ಶಿಶಿರ(10) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಾಲಿನಿ(42) ಕಾಲಿಗೆ ಗಂಭೀರ ಗಾಯವಾಗಿದೆ.
ಹಿಟ್ ಅಂಡ್ ರನ್ (Hit and run) :
ಹುಲಿಕಲ್ ನಿಂದ ಬೈಕ್ ನಲ್ಲಿ ಮಾಸ್ತಿಕಟ್ಟೆ ಕಡೆ ವಾಪಾಸಾಗುತ್ತಿದ್ದ ವೇಳೆ ಎದುರಿನಿಂದ ಬಂದ ಲಾರಿಯೊಂದಕ್ಕೆ ಡಿಕ್ಕಿ ಹೊಡೆದು ಬೈಕ್ ಪಲ್ಟಿ ಹೊಡೆದು ಮೂವರು ಕೆಳಗೆ ಬಿದ್ದಿದ್ದಾರೆ. ಕುಂದಾಪುರ ಕಡೆಯಿಂದ ಮಾಸ್ತಿಕಟ್ಟೆ ಕಡೆ ಬರುತ್ತಿದ್ದ ಮತ್ತೊಂದು ಲಾರಿ ಮೂವರ ಮೇಲೆ ಹರಿದಿದೆ. ರವಿ ಮತ್ತು ಶಿಶಿರ ತಲೆ ಮೇಲೆ ಲಾರಿ ಹರಿದ ಪರಿಣಾಮ ಇಬ್ಬರು ಅಲ್ಲೇ ಮೃತಪಟ್ಟಿದ್ದಾರೆ. ಶಾಲಿನಿ ಕಾಲು ಸಂಪೂರ್ಣ ನಜ್ಜುಗುಜ್ಜಾಗಿದೆ ಎನ್ನಲಾಗಿದೆ.
ಅಪಘಾತ ಆಗುತ್ತಿದ್ದಂತೆ ಲಾರಿಗಳನ್ನು ನಿಲ್ಲಿಸದೇ ಹಿಟ್ ಅಂಡ್ ರನ್ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತಲೆ ಛಿದ್ರ ಛಿದ್ರ!
ಅಪಘಾತದಲ್ಲಿ ರವಿ ಮತ್ತು ಅಣ್ಣನಮಗ ಶಿಶಿರನ ತಲೆ ಛಿದ್ರಗೊಂಡಿದ್ದು ರಸ್ತೆ ತುಂಬೆಲ್ಲಾ ಹರಡಿತ್ತು. ಅಪಘಾತ ನೋಡಲು ಭಯಾನಕವಾಗಿತ್ತು.. ಅಪಘಾತಕ್ಕೆ ಇಡೀ ಹುಲಿಕಲ್ ಪ್ರದೇಶ ದಂಗು ಬಡಿದಂತಾಗಿತ್ತು.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಲಾರಿಗಳ ಶೋಧ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ. ಅಪಘಾತದ ಸಂಪೂರ್ಣ ವಿವರ ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.