ನೇಗಿಲೋಣಿ ಗುಂಡೇಟಿಗೆ ಬಲಿ ಪ್ರಕರಣ | ತನಿಖೆ ಮೇಲೆ ಅನುಮಾನ | ಸಮಗ್ರ ತನಿಖೆಗೆ ಹೊಸನಗರ ತಾಲೂಕು ಆರ್ಯ ಈಡಿಗ ಸಂಘ ಆಗ್ರಹ

ಹೊಸನಗರ: ತಾಲೂಕಿನ ನಗರ ಹೋಬಳಿ ವ್ಯಾಪ್ತಿಯ ನೇಗಿಲೋಣಿಯಲ್ಲಿ ನಡೆದ ಗುಂಡೇಟಿಗೆ ಯುವಕನೋರ್ವ ಬಲಿಯಾದ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಿ ತಪ್ಪಿತಸ್ಥರನ್ನು ಬಂಧಿಸಬೇಕೆಂದು ಹೊಸನಗರ ತಾಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಬಂಡಿ ರಾಮಚಂದ್ರ ಒತ್ತಾಯಿಸಿದರು.

ಈಡಿಗ ಸಂಘದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ, ನೇಗಿಲೋಣಿ ಗುಂಡೇಟು ಪ್ರಕರಣದಲ್ಲಿ ಅಂಬರೀಷ್ ಮೃತಪಟ್ಟಿದ್ದಾನೆ. ಆದರೆ ಗುಂಡೇಟು ಹೇಗೆ ತಗುಲಿತು ಎಂಬುದು ಬೆಳಕಿಗೆ ಬಂದಿಲ್ಲ. ಆಕಸ್ಮಿಕವಾಗಿ ನಡೆಯಿತೋ.. ಇಲ್ಲ ಉದ್ದೇಶಪೂರ್ವಕವಾಗಿ ಘಟನೆ ನಡೆದಿದಿಯೋ ಗೊತ್ತಿಲ್ಲ. ಈ ಬಗ್ಗೆ ಸೂಕ್ತ ಮತ್ತು ಸಮಗ್ರ ತನಿಖೆಯ ಅಗತ್ಯವಿದೆ ಎಂದು ಆಗ್ರಹಿಸಿದರು.

ಅಂಬರೀಷ್ ಸಾವಿನ ಬಗ್ಗೆ ಹೊರಬೀಳುತ್ತಿರುವ ವಿಚಾರಗಳು ಅನುಮಾನಾಸ್ಪದವಾಗಿದೆ. ಅಂಬರೀಷ್ ಜೊತೆಗೆ ಹೋಗಿದ್ದ ಕೀರ್ತಿಗೆ ಎಲ್ಲಾ ವಿಚಾರಗಳು ತಿಳಿದಿವೆ. ಆತನನ್ನು ಬಂಧಿಸಿ ತನಿಖೆಗೆ ಒಳಪಡಿಸಿದಲ್ಲಿ ಸತ್ಯಾಂಶ ಹೊರಬರಲಿದೆ. ಅಲ್ಲದೆ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅದೇ ಕ್ಷೇತ್ರದವರಾಗಿದ್ದರೂ ಸೂಕ್ತ ತನಿಖೆ ನಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ ಎಂದು ಆರೋಪಿಸಿದರು.

ಅನುಮಾನ ವ್ಯಕ್ತವಾಗುತ್ತಿರುವುದು ನೋಡಿದರೆ ಅಲ್ಲಿ ನಡೆದ ಘಟನೆಯೇ ಬೇರೆ.. ತನಿಖೆಯ ಹಾದಿಯೇ ಬೇರೆ ಎಂಬ ಸನ್ನಿವೇಶ ಸೃಷ್ಟಿಸಿದೆ. ಈ ಎಲ್ಲದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ತನಿಖೆಯಲ್ಲಿ ಲೋಪದೋಷ: ಬಿಜಿಎನ್
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಪ್ರಕರಣದ ತನಿಖೆಯಲ್ಲಿ ಹತ್ತಾರು ಲೋಪದೋಷಗಳು ಕಾಣುತ್ತಿವೆ. ಸಾವು ಕಂಡ ಪ್ರಕರಣಗಳಲ್ಲಿ ಹತ್ತಿರದ ರಕ್ತ ಸಂಬಂಧಿಯಿಂದ ದೂರು ಪಡೆಯಬೇಕು. ಆದರೆ ಮೃತ ಅಂಬರೀಷನ ತಂದೆತಾಯಿಯಿಂದ ದೂರು ಪಡೆಯದಿರುವುದು ಅನುಮಾನ ತರಿಸಿದೆ.
ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ಈ ಎಲ್ಲಾ ಅನುಮಾನಗಳಿಂದ ಮುಕ್ತಿಗೊಳಿಸಲಿ ಎಂದು ಆಗ್ರಹಿಸಿದರು.

ಸಂಘದ ಉಪಾಧ್ಯಕ್ಷ ಎರಗಿ ಉಮೇಶ್, ಶೇಖರಪ್ಪ, ಟೀಕಪ್ಪ, ಪ್ರವೀಣ್, ಷಣ್ಮುಖ ಸಮಾಜದ ಪ್ರಮುಖರು ಹಾಜರಿದ್ದರು.

ನೇಗಿಲೋಣಿ ಗುಂಡೇಟಿಗೆ ಬಲಿ ಪ್ರಕರಣದ ಬಗ್ಗೆ ಹೊಸನಗರ ಆರ್ಯ ಈಡಿಗ ಸಂಘ ನಡೆಸಿದ ಸುದ್ದಿಗೋಷ್ಠಿಯ ಸಂಪೂರ್ಣ ವಿವರಕ್ಕಾಗಿ ಈ ಕೆಳಗಿನ VIDEO ಲಿಂಕ್ ಒಪನ್ ಮಾಡಿ

https://youtu.be/zqscvlBXmNo

ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿಗಳ ಭೇಟಿ|

ನೇಗಿಲೋಣಿ ಗನ್ ಶಾಟ್ ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಶೀಘ್ರವೇ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು  ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು.

– ಬಿ.ಪಿ.ರಾಮಚಂದ್ರ, ಅಧ್ಯಕ್ಷರು, ತಾಲೂಕು ಆರ್ಯ ಈಡಿಗ ಸಂಘ, ಹೊಸನಗರ

Exit mobile version