
ಹೊಸನಗರ ಬಿಜೆಪಿ ಕಾರ್ಯಕಾರಿಣಿಯಲ್ಲಿ ಕೈಗೊಂಡ ನಿರ್ಣಯ ಏನು ಗೊತ್ತಾ?
ಹೊಸನಗರ: ತಾಲೂಕು ಬಿಜೆಪಿ ಘಟಕದ ಕಾರ್ಯಕಾರಿಣಿ ಸಭೆ ನಡೆದು ಮಹತ್ವದ ವಿಚಾರದ ಬಗ್ಗೆ ಮಂಡನೆ ಮತ್ತು ನಿರ್ಣಯ ಕೈಗೊಳ್ಳಲಾಗಿದೆ.
ತಾಲೂಕಿನಲ್ಲಿ ಮಳೆಹಾನಿ ತೀವ್ರತೆ, ಡೆಂಗ್ಯೂ ಹರಡುವಿಕೆ ಸೇರಿದಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಸಂಪೂರ್ಣ ವೈಫಲ್ಯದ ವಿರುದ್ಧ ತಾಲೂಕು ಬಿಜೆಪಿ ಕಾರ್ಯಕಾರಿಣಿಯಲ್ಲಿ ನಿರ್ಣಯ ದಾಖಲಿಸಲಾಗಿದೆ. ಮಾತ್ರವಲ್ಲ ಹೊಸನಗರ ವಿಧಾನಸಭಾ ಕ್ಷೇತ್ರ ಪುನರ್ ಸ್ಥಾಪಿಸಲು ಆಗ್ರಹಿಸಿ ಕೂಡ ನಿರ್ಣಯ ದಾಖಲಾಗಿದೆ.
ಶನಿವಾರ ಹೊಸನಗರದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ತಾಲೂಕಿನ ಬಹುತೇಕ ಭಾಗ ಮಳೆಹಾನಿಗೆ ಒಳಗಾಗಿದೆ.50 ಕ್ಕು ಹೆಚ್ಚು ಮನೆಗಳು ಕುಸಿತ ಕಂಡಿವೆ, ರೈತರ ಬೆಳೆ ಸಂಪೂರ್ಣ ಹಾನಿಯಾಗಿದೆ. ಬೆಳೆವಿಮೆ ಮಾಡಿಸಲು ಸಾಧ್ಯವಾಗುತ್ತಿಲ್ಲ. ತಾಲೂಕಿನ ಬಹುಪಾಲು ಪ್ರದೇಶ ಕತ್ತಲಲ್ಲಿ ಮುಳುಗಿದೆ. ಡೆಂಗ್ಯೂ ಮಹಾಮಾರಿ ತಾಲೂಕಿನಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡಿದೆ. ತಾಲೂಕು ಆಡಳಿತ ಇದೆಯೋ ಎಂಬ ಅನುಮಾನ ಕಾಡುತ್ತಿದೆ. ಈ ಸಮಸ್ಯೆ ನೀಗಿಸುವ ಮಾತಿರಲಿ, ಸ್ಪಂದಿಸುವಲ್ಲಿ ಕೂಡ ಶಾಸಕರು ವಿಫಲರಾಗಿದ್ದಾರೆ. ಸಮಸ್ಯೆಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಕೂಡ ಸೋತಿದ್ದಾರೆ ಎಂದು ಆರೋಪಿಸಿ ಮಂಡನೆ ಮಾಡಿ ನಿರ್ಣಯ ಕೈಗೊಳ್ಳಲಾಯಿತು.
ಜನರು ಸಂಕಷ್ಟದಲ್ಲಿರುವಾಗ ಶಾಸಕರು ಜನರ ಜೊತೆಗಿರಬೇಕು. ಅದು ಬಿಟ್ಟು ಫಾರಿನ್ ಟೂರ್ ನಲ್ಲಿದ್ದಾರೆ ಎಂದು ಕೂಡ ಸಭೆಯಲ್ಲಿ ಆರೋಪಿಸಲಾಯಿತು.
ಕ್ಷೇತ್ರ ಪುನರ್ ಸ್ಥಾಪನೆ ಆಗಬೇಕು. ಆ ಮೂಲಕ ತಾಲೂಕಿನ ಅಭಿವೃದ್ಧಿ ಸಾಧ್ಯ. ಯಾವುದೇ ರೀತಿಯ ಹೋರಾಟಕ್ಕು ಪಕ್ಷ ಸಿದ್ದವಿದೆ ಎಂಬ ನಿರ್ಣಯ ಮಂಡಿಸಲಾಯಿತು.
ಈ ವೇಳೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಸಭೆಗೆ ಚಾಲನೆ ನೀಡಿ ಮೂಡಾ ಹಗರಣ, ವಾಲ್ಮೀಕಿ ಹಗರಣವನ್ನು ರಾಜ್ಯ ಸರ್ಕಾರ ನಿಭಾಯಿಸುತ್ತಿರುವ ರೀತಿಯ ವಿರುದ್ಧ ವಾಗ್ದಾಳಿ ನಡೆಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವಿ.ಸುಬ್ರಹ್ಮಣ್ಯ ಮತ್ತಿಮನೆ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಬಿ.ಸ್ವಾಮಿರಾವ್, ಗಣಪತಿ ಬೆಳಗೋಡು, ಉಮೇಶ ಕಂಚುಗಾರ್, ಎನ್.ಆರ್.ದೇವಾನಂದ್, ಆರ್.ಟಿ.ಗೋಪಾಲ್, ಬಿ.ಯುವರಾಜ್, ಎಂ.ಎನ್.ಸುಧಾಕರ್, ಕೆ.ವಿ.ಕೃಷ್ಣಮೂರ್ತಿ, ಸುರೇಶ್ ಸ್ವಾಮಿರಾವ್, ಆಲುವಳ್ಳಿ ವಿರೇಶ್, ಬಂಕ್ರಿಬೀಡು ಮಂಜುನಾಥ್, ಎ.ವಿ.ಮಲ್ಲಿಕಾರ್ಜುನ್, ಎನ್.ವೈ.ಸುರೇಶ್, ಹೆಚ್.ಜಿ.ರಮಾಕಾಂತ ಹೆಬ್ಬುರುಳಿ, ಕಾರ್ಯದರ್ಶಿಗಳಾದ ನಾಗಾರ್ಜುನ ಸ್ವಾಮಿ, ಕಾಲಸಸಿ ಸತೀಶ, ತಾಲೂಕು ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.