![](https://goodmorningkarnataka.com/wp-content/uploads/2022/10/Sun-Time-electronics-hosanagara-ad.jpg)
ಈಬಾರಿ ಹೊಸನಗರ ದಸರಾ ವೈವಿಧ್ಯಮಯವಾಗಿ ಆಚರಣೆ : ದಸರಾ ಸಮಿತಿ ಅಧ್ಯಕ್ಷರಾಗಿ ಹಾಲಗದ್ದೆ ಉಮೇಶ್
ಹೊಸನಗರ: ಈಬಾರಿಯ ಹೊಸನಗರ ದಸರಾವನ್ನು ಅದ್ದೂರಿ ಮತ್ತು ವೈವಿಧ್ಯಮಯವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ದಸರಾ ಸಮಿತಿ ಅಧ್ಯಕ್ಷ ಹಾಲಗದ್ದೆ ಉಮೇಶ್ ಹೇಳಿದ್ದಾರೆ.
ತಹಶೀಲ್ದಾರ್ ಕಚೇರಿಯಲ್ಲಿ ನೂತನ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿ ಮಾತನಾಡಿ, ದಸರಾವನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ರೂಪುರೇಷೆ ತಯಾರಿಸಲಾಗುತ್ತಿದೆ ಎಂದರು.
ಈಬಾರಿ ಹೊಸನಗರ ತಾಲೂಕಿನ ಐತಿಹಾಸಿಕ, ಪ್ರಾಕೃತಿಕ ಶ್ರೀಮಂತಿಕೆ ಸಾರುವ ನಿಟ್ಟಿನಲ್ಲಿ ಸ್ತಬ್ಧಚಿತ್ರ, ಹಾಡು, ಭಜನೆ, ಡೊಳ್ಳು, ಚಂಡೆ ಸೇರಿದಂತೆ ಜನಪದ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮವನ್ನು ಮೆರವಣಿಗೆಯಲ್ಲಿ ಅಳವಡಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳು, ಸರ್ಕಾರೇತರ ಸಂಘ ಸಂಸ್ಥೆಗಳು, ಮಹಿಳಾ ಸಂಘಗಳು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಹಯೋಗದೊಂದಿಗೆ ಕಾರ್ಯಕ್ರಮ ಅನುಷ್ಠಾನ ಮಾಡಲಾಗುವುದು ಎಂದರು.
ಸ್ಪರ್ಧೆಗಳು: ದಸರಾ ಪ್ರಯುಕ್ತ ಮಹಿಳೆಯರಿಗಾಗಿ ರಂಗೋಲಿ, ಹಗ್ಗ ಜಗ್ಗಾಟ, ಮ್ಯೂಸಿಕಲ್ ಛೇರ್,
ಸಾಂಪ್ರಾದಾಯಿಕ ಉಡುಪು, ಸ್ಲೋ ವಾಕಿಂಗ್, ಸ್ಲೋ ಸೈಕಲ್ ರೇಸ್ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು.
ದಸರಾ 2023 ಸಮಿತಿ: ಅಧ್ಯಕ್ಷರಾಗಿ ಹಾಲಗದ್ದೆ ಉಮೇಶ್, ಅಧ್ಯಕ್ಷೀಯ ಅಧಿಕಾರಿ ತಹಶೀಲ್ದಾರ್ ರಾಕೇಶ್ ಪ್ರಾನ್ಸಿಸ್ ಬ್ರಿಟ್ಟೋ, ಮುಖ್ಯಾಧಿಕಾರಿಯಾಗಿ ಮಾರುತಿ ಎಸ್.ಜಿ, ಪ್ರಧಾನ ಕಾರ್ಯದರ್ಶಿಯಾಗಿ ವಿಜೇಂದ್ರ ಶೇಟ್, ಸಹಕಾರ್ಯದರ್ಶಿಯಾಗಿ ಅಶ್ವಿನಿ ಸುಧೀಂದ್ರ ಪಂಡಿತ್, ಖಜಾಂಚಿಯಾಗಿ ಬಸವರಾಜ್, ಅನುಷ್ಠಾನ ಸಮಿತಿ ಸದಸ್ಯರಾಗಿ ಸಿಂಥಿಯಾ ಶೆರಾವೋ, ಶ್ರೀಮತಿ ರಾಧಿಕಾ ರತ್ನಾಕರ ಶ್ರೇಷ್ಠಿ, ಶ್ರೀಮತಿ ಕೃಷ್ಣವೇಣಿ ರನ್ನು ಆಯ್ಕೆ ಮಾಡಲಾಗಿದೆ.
ಅಧಿಕಾರ ಸ್ವೀಕಾರದ ಸಭೆಯಲ್ಲಿ ತಹಶೀಲ್ದಾರ್ ರಾಕೇಶ್ ಪ್ರಾನ್ಸಿಸ್ ಬ್ರಿಟ್ಟೋ, ಪ್ರಮುಖರಾದ ಗುರುರಾಜ್ ಇತರರು ಇದ್ದರು.