
ಪ್ರತಿ ಗ್ರಾಪಂ ಮಟ್ಟದಲ್ಲಿ ಮದ್ಯದಂಗಡಿ | ಹಿಂದಿನ ಸಾರಾಯಿ ಮಾರಾಟಗಾರರಿಗೆ ಆಧ್ಯತೆ ನೀಡಲು ಆಗ್ರಹ
ಹೊಸನಗರ: ಪ್ರತಿ ಗ್ರಾಮಪಂಚಾಯ್ತಿ ಮಟ್ಟದಲ್ಲಿ ಮದ್ಯದಂಗಡಿ ತೆರೆಯುವುದಾದಲ್ಲಿ ಈ ಹಿಂದೆ ಸಾರಾಯಿ ಮಾರುತ್ತಿದ್ದವರಿಗೆ ಆಧ್ಯತೆ ನೀಡುವಂತೆ ಮೇಲಿನಬೆಸಿಗೆ ಗ್ರಾಪಂ ಮಾಜಿ ಅಧ್ಯಕ್ಷ ಶುಭಕರ ಪೂಜಾರಿ ಆಗ್ರಹಿಸಿದ್ದಾರೆ.
ಪಟ್ಟಣದ ಪ್ರವಾಸಿಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ, ರಾಜ್ಯದ ಪ್ರತಿ ಗ್ರಾಪಂ ಮಟ್ಟದಲ್ಲಿ ಮದ್ಯದಂಗಡಿ ತೆರೆಯುದಾಗಿ ಅಬಕಾರಿ ಸಚಿವರು ಹೇಳಿರುವುದನ್ನು ಅವರು ಸ್ವಾಗತಿಸಿದರು.
ಈ ಹಿಂದೆ ಸಾರಾಯಿ ಮಾರಾಟ ಮಾಡಿ ಅದೆಷ್ಟೋ ಕುಟುಂಬಗಳು ಬದುಕು ಕಟ್ಟಿಕೊಂಡಿದ್ದವು. ಆದರೆ 2006 ರಲ್ಲಿ ಸಾರಾಯಿ ಮಾರಾಟ ರದ್ದು ಮಾಡಿದ ನಂತರ ಅಂಗಡಿಗಳನ್ನು ಮುಚ್ವಿದ ಸಾರಾಯಿ ಮಾರಾಟಗಾರರು ಅತಂತ್ರರಾಗಿದ್ದರು ಎಂದು ತಿಳಿಸಿದರು.
ಸಾರಾಯಿ ಅಂಗಡಿ ಮುಚ್ಚುವ ಸಂದರ್ಭದಲ್ಲಿ ಅಬಕಾರಿ ಇಲಾಖೆಯಲ್ಲಿ ಕೆಲಸ ನೀಡುವ ಬಗ್ಗೆ ಮತ್ತು ಇತರೆ ವ್ಯಾಪಾರ ಮಾಡುವುದಾದಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಯಾವುದೇ ಸವಲತ್ತು, ಸಹಾಯಧನವಾಗಲಿ ಮಾರಾಟಗಾರರಿಗೆ ಈವರೆಗೆ ದೊರಕಿಲ್ಲ ಎಂದು ಆರೋಪಿಸಿದರು.
ಈಗ ಮತ್ತೆ ಪ್ರತಿ ಗ್ರಾಪಂ ಮಟ್ಟದಲ್ಲಿ ಮದ್ಯದಂಗಡಿ ತೆರೆಯುವ ಬಗ್ಗೆ ಅಬಕಾರಿ ಸಚಿವರು ಪ್ರಸ್ತಾಪಿಸಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಜೊತೆ ಚರ್ಚಿಸುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ತೆರೆಯುವುದಾದಲ್ಲಿ ಹಿಂದೆ ಸಾರಾಯಿ ಮಾರಾಟ ಮಾಡುತ್ತಿದ್ದವರಿಗೆ ಮೊದಲ ಆಧ್ಯತೆ ನೀಡುವಂತೆ ಒತ್ತಾಯಿಸಿದ್ದಾರೆ.
ಚಾಲುಕ್ಯ ಬಸವರಾಜ್, ರಾಧಾಕೃಷ್ಣ ಪೂಜಾರಿ, ಸುಂದ್ರೇಶ್ ಇತರರು ಇದ್ದರು.