ರಜೆ ಮಾಹಿತಿ ಪರದಾಟ| ನೆಟ್ ವರ್ಕ್ ಸಮಸ್ಯೆ | ಒಂದು ದಿನ ಮೊದಲೇ ರಜೆ ಘೋಷಿಸಲು ಆಗ್ರಹ
ಹೊಸನಗರ: ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಮಕ್ಕಳ ಹಿತದೃಷ್ಟಿಯಿಂದ ರಜೆ ಘೋಷಣೆ ಮಾಡುತ್ತಿರುವುದು ಸರಿ. ಆದರೆ ತಡವಾಗಿ ಘೋಷಣೆ ಮಾಡಿದರೇ ಮಕ್ಕಳು, ಪೋಷಕರಿಗೆ ಸಕಾಲಕ್ಕೆ ಮಾಹಿತಿ ಸಿಗದೇ ಪರದಾಡುವಂತಾಗಿದೆ.
ಗುರುವಾರ ರಾತ್ರಿ 8 ಗಂಟೆಯಿಂದ ವಿಪರೀತ ಬಿರುಗಾಳಿ ಕಂಡು ಬಂದಿದ್ದು ಜನರು ಭಯಪಡುವಂತಾಗಿತ್ತು. ಬಿರುಗಾಳಿ ಮುಂದುವರೆದ ಹಿನ್ನೆಲೆಯಲ್ಲಿ ಹೊಸನಗರ ತಹಶೀಲ್ದಾರ್ ಬೆಳ್ಳಂಬೆಳಗ್ಗೆ 3 ಗಂಟೆಗೆ ರಜೆ ಘೋಷಿಸಿದ್ದಾರೆ. ಶಾಲಾ ಕಾಲೇಜು ಮತ್ತು ಅಂಗನವಾಡಿ ಮಕ್ಕಳ ಮೇಲಿನ ಇವರ ಕಾಳಜಿ ಮೆಚ್ಚಬೇಕು. ಆದರೆ ಸಕಾಲಕ್ಕೆ ಮಾಹಿತಿ ಲಭ್ಯವಾಗದೇ ಮಕ್ಕಳು ಪೋಷಕರು ಪರದಾಡುವಂತಾಗಿತ್ತು.
ಕರೆಂಟ್ ಇಲ್ಲ.. ನೆಟ್ ವರ್ಕ್ ಸಮಸ್ಯೆ:
ತಾಲೂಕಿನ ಬಹುತೇಕ ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿವೆ. ಮೊಬೈಲ್ ಚಾರ್ಜ್ ಆಗುತ್ತಿಲ್ಲ. ನೆಟ್ ವರ್ಕ್ ಇಲ್ಲದಿರುವುದು ಕೂಡ ಸಕಾಲಕ್ಕೆ ಮಾಹಿತಿ ತಲುಪಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಮನೆಯಿಂದ ಹೊರಬರಲು ಕೂಡ ವಿಪರೀತ ಬಿರುಗಾಳಿ ಮಳೆ ಅವಕಾಶ ಕೊಡುತ್ತಿಲ್ಲ. ಹೀಗಾಗಿ ಮುಂಚಿತವಾಗಿ ರಜೆ ಘೋಷಿಸಲು ಆಗ್ರಹ ಕೇಳಿ ಬಂದಿದೆ.
ನಗರ ಹೋಬಳಿ ಸಮಸ್ಯೆ:
ಇನ್ನು ನಗರ ಹೋಬಳಿಯದ್ದೇ ವಿಭಿನ್ನ ಸಮಸ್ಯೆ. ಇಡೀ ತಾಲೂಕಿನಲ್ಲಿ ಮಳೆ ಕಡಿಮೆಯಾದರೂ ಕೂಡ ನಗರ ಹೋಬಳಿಯಲ್ಲಿ ಧೋ ಎಂದು ಒಂದೇ ಸಮನೆ ಮಳೆ ಸುರಿಯುತ್ತಿರುತ್ತದೆ. ಆದರೆ ಶಿಕ್ಷಣ ಇಲಾಖೆ ಆಯಾಯ ಶಾಲಾಭಿವೃದ್ಧಿ ಸಮಿತಿಗೆ ರಜೆ ನೀಡುವ ಜವಾಬ್ದಾರಿ ನೀಡಿದೆ. ಆದರೆ ನಗರ ಹೋಬಳಿಯಿಂದ ನೂರಾರು ಸಂಖ್ಯೆಯಲ್ಲಿ ಮಕ್ಕಳು ಹೊಸನಗರದ ಶಾಲಾ ಕಾಲೇಜುಗಳಿಗೆ ದಿನಂಪ್ರತಿ ಬರುತ್ತಾರೆ. ಇವರಿಗೆ ರಜೆ ಅನ್ವಯ ಆಗೋದಿಲ್ಲ. ಪೋಷಕರೇ ಜವಾಬ್ದಾರಿಯಿಂದ ಮಕ್ಕಳನ್ನು ಶಾಲೆಗೆ ಕಳಿಸದೇ ಇದ್ದರೆ ಹಾಜರಾತಿ ಖೋತಾ ಮತ್ತು ಪಾಠ ಕೂಡ ರಿಪೀಟ್ ಮಾಡುವುದಿಲ್ಲ. ಅದರಲ್ಲು ಹೊಸನಗರದಲ್ಲಿ ಖಾಸಗಿ ಶಾಲೆಗಳು ಹೆಚ್ಚಿದ್ದು ಮಕ್ಕಳ ಸಂಖ್ಯೆಯೂ ಜಾಸ್ತಿ ಇದೆ. ನಗರ ಹೋಬಳಿಯ ಮಕ್ಕಳಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ತಾಲೂಕು ಆಡಳಿತ ಮತ್ತು ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದು ಅಗತ್ಯ.
ಒಟ್ಟಾರೆ ಮಳೆಗಾಲ ಆರಂಭವಾಯಿತು ಎಂದರೇ ಹೊಸನಗರ ತಾಲೂಕು ಅಪಾಯ ಮತ್ತು ಸೂಕ್ಷ್ಮ ಪ್ರದೇಶವಾಗಿ ಹೊರಹೊಮ್ಮುತ್ತದೆ. ಪ್ರತಿ ವರ್ಷವೂ ಈ ಸಮಸ್ಯೆಗಳು ಉಲ್ಭಣವಾಗುವ ಕಾರಣ ತಾಲೂಕು ಆಡಳಿತ ಸೂಕ್ಯ ಹಾಗು ದಿಟ್ಟ ಕ್ರಮ ಕೈಗೊಳ್ಳಬೇಕಿದೆ ಎಂಬುದು ತಾಲೂಕಿನ ಜನತೆಯ ಆಶಯ