HULIKAL BUS ACCIDENT | ಹುಲಿಕಲ್ ಘಾಟ್ ಅಪಘಾತಗಳ ಇತಿಹಾಸದಲ್ಲಿ ಮೊದಲ ಬಲಿ! ಮದ್ಯರಾತ್ರಿ ನಡೆದ ಭೀಕರ ಅಪಘಾತದಲ್ಲಿ ಧಾರುಣ ಅಂತ್ಯ ಕಂಡ ಪುಟ್ಟ ಕಂದಮ್ಮ
ಹೊಸನಗರ: ಹುಲಿಕಲ್ ಘಾಟ್ ಮಾರ್ಗದಲ್ಲಿ ನೂರಾರು ಅಪಘಾತಗಳು ನಡೆದಿವೆ. ಗಂಭೀರ ಗಾಯಗೊಂಡ ಘಟನೆಗಳು ಕೂಡ ನಡೆದಿವೆ. ಆದರೆ ಸೋಮವಾರ ತಡರಾತ್ರಿ ನಡೆದ ಭೀಕರ ಅಪಘಾತ ಇತಿಹಾಸದಲ್ಲಿ ಮೊದಲ ಸಾವು ಕಂಡ ಅಪಘಾತ ಎಂದೇ ಬಿಂಬಿತವಾಗಿದೆ. ಬಸ್ಸಿನಲ್ಲಿ ಆರಾಮಾಗಿ ನಿದ್ರಿಸುತ್ತಿದ್ದ ಹಾಲುಗಲ್ಲದ ಮಗು ಅಪಘಾತದಲ್ಲಿ ಗಾಯಗೊಂಡು ಚಿರನಿದ್ರೆಗೆ ಜಾರಿದೆ.
ದಾವಣಗೆರೆಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಖಾಸಗಿ ದುರ್ಗಾಂಬ ಬಸ್ಸು ಹುಲಿಕಲ್ ಘಾಟ್ ರಸ್ತೆಯ ಬದಿ ಧರೆಗೆ ಗುದ್ದಿದ ಪರಿಣಾಮ ಪುಟ್ಟ ಮಗು ರಿಷನಾ ಪಾತೀಮ(2) ಸಾವು ಕಂಡಿದ್ದು, ಹಲವರು ಗಾಯಗೊಂಡ ಘಟನೆ ಸೋಮವಾರ ತಡರಾತ್ರಿ ನಡೆದ ಬಗ್ಗೆ ವರದಿಯಾಗಿದೆ.
ನಿದ್ದೆಯ ಮಂಪರು, ಚಾಲಕನ ನಿಯಂತ್ರಣ ತಪ್ಪಿ ದುರ್ಘಟನೆ ನಡೆದಿದೆ. ಗಂಭೀರ ಗಾಯಗೊಂಡವರಲ್ಲಿ ಶರೀಫಾಬಿ (57), ಇಮಾಮ್ ಸಾಬ್ (73), ಸಫಾನ (28) ಎಂಬುವರನ್ನು ಕೂಡಲೇ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.
ಖಾಸಗಿ ಬಸ್ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಘಟನೆಯ ಸಂಪೂರ್ಣ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.
ಘಟನೆ ನಡೆಯುತ್ತಿದ್ದಂತೆ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ. ಮಂಗಳವಾರ ಮುಂಜಾನೆ ಪೊಲೀಸ್ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಹುಲಿಕಲ್ ಘಾಟ್‌ನಲ್ಲಿ ಈ ಹಿಂದೆ ಹಲವಾರು ಅಪಘಾತಗಳು ನಡೆದಿವೆ. ಬಸ್ಸು, ಲಾರಿ, ಕಾರು ಸೇರಿದಂತೆ ಹತ್ತಾರು ವಾಹನಗಳು ನಾಲ್ಕಾರು ಪಲ್ಟಿಯಾಗಿ ಸಂಪೂರ್ಣ ಜಖಂಗೊಂಡ ಘಟನೆಗಳು ನಡೆದಿವೆ. ನಾಲ್ಕು ವರ್ಷದ ಹಿಂದೆ ಲಾರಿಯೊಂದು 400 ಅಡಿ ಪ್ರಪಾತಕ್ಕೆ ಉರುಳಿದ್ದ ನಿದರ್ಶನವೂ ಇದೆ. ಆದರೆ ಅದೆಷ್ಟೇ ಅಪಘಾತಗಳು ಸಂಭವಿಸಿದರು ಕೂಡ ಸಾವು ಮಾತ್ರ ನಡೆದಿರಲಿಲ್ಲ. ಆದರೆ ಸೋಮವಾರ ತಡರಾತ್ರಿ ನಡೆದ ಅಪಘಾತ ಪುಟ್ಟ ಮಗುವೊಂದನ್ನು ಬಲಿ ತೆಗೆದುಕೊಂಡಿದೆ.