
-
ತಾಳ್ಮೆಯ ಬದುಕು ಸುಫಲ ಪಡೆಯಲು ಸಾಧನ : ಮಳಲಿಶ್ರೀ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ
ಹೊಸನಗರ: ತಾಳ್ಮೆ ಕೆಲವೊಮ್ಮೆ ಕಹಿ ಎನಿಸುತ್ತದೆ. ಆದರೆ ಭವಿಷ್ಯತ್ತಿನಲ್ಲಿ ಸಿಹಿ ನೀಡುತ್ತದೆ ಎಂದು ಮಳಲಿ ಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಿಸಿದರು.
ತಾಲೂಕಿನ ಮತ್ತಿಮನೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಂಪೇಕಟ್ಟೆ ವಲಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಭಾನುವಾರ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ತಾಳ್ಮೆ ಇದ್ದವನ ಬದುಕು ಸುಫಲ ಪಡೆಯಲು ಸಾಧನ, ಯಾರಿಗೆ ತಾಳ್ಮೆ ಇರುತ್ತದೋ ಅವರಿಗೆ ಜೀವನದಲ್ಲಿ ಯಶಸ್ಸು ಸಿಗುತ್ತದೆ. ತಾಳ್ಮೆ ಎನ್ನುವುದು ಜೀವನದಲ್ಲಿ ಅತ್ಯಂತ ಮುಖ್ಯವಾದದ್ದು ಎಂದರು.
ಬೈದು ಹೇಳುವವರು ಬುದ್ಧಿ ಹೇಳಿದಂತೆ, ನಕ್ಕು ಹೇಳುವವರು ಕೆಡುಕು ಬಯಸಿದಂತೆ ಎಂಬ ಗಾದೆ ಮಾತು ನಿತ್ಯದ ಸತ್ಯವಾಗಿದೆ. ಯಾರು ನೇರ, ನಿಷ್ಠುರವಾಗಿ ಮಾತನಾಡುತ್ತಾರೋ ಅಂತವರ ಹೃದಯದಲ್ಲಿ ಯಾವುದೇ ಕಲ್ಮಶ ಇರುವುದಿಲ್ಲ ಎಂದರು.
ಎಲ್ಲವೂ ನಶ್ವರ ಆದರೆ ಧರ್ಮ ಶಾಶ್ವತ ಎಂದು ತಿಳಿದುಕೊಂಡು ತಂದೆತಾಯಿ ಗುರುಹಿರಿಯರಿಗೆ ಗೌರವಿಸಿ ಬದುಕು ಸಾಗಿಸಬೇಕಿದೆ ಎಂದರು.
ಉಪನ್ಯಾಸ ನೀಡಿದ ನಿವೃತ್ತ ಪ್ರಾಚಾರ್ಯ, ಸಾಹಿತಿ ಡಾ.ಶಾಂತರಾಮ ಪ್ರಭು, ಜಾತಿಮತ ಪಂಥ ಮೀರಿದ ಯಾವುದೇ ಆಚರಣೆ ಶ್ರೇಷ್ಠವಾಗಿದೆ. ಸಾಮೂಹಿಕ ಎಂದರೆ ಅದು ವಿಶೇಷ, ಧಾರ್ಮಿಕ, ಸಾಮಾಜಿಕವಾಗಿ ನಡೆಯುವ ಯಾವುದೇ ಕೆಲಸ ಕಾರ್ಯ ಖುಷಿ ನೀಡುತ್ತದೆ. ಧರ್ಮದ ಮೇಲಿನ ಒಂದುದಿನದ ನಿಷ್ಠೆ ತರವಲ್ಲ. ಪ್ರತಿದಿನ ಬದುಕಿನಲ್ಲೂ ಧರ್ಮವನ್ನು ಅಳವಡಿಸಿಕೊಳ್ಳಬೇಕು ಎಂದರು.
ಇದಕ್ಕು ಮುನ್ನ ಮತ್ತಿಮನೆಗೆ ಆಗಮಿಸಿದ ಶ್ರೀಗಳನ್ನು ಪೂರ್ಣ ಕುಂಭ ಸ್ವಾಗತ, ಚಂಡೆ, ನಾಸಿಕ್ ಭಜನಾ ತಂಡ, ಜಾನಪದ ಕಾರ್ಯಕ್ರಮಗಳೊಂದಿಗೆ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.
ಮತ್ತಿಮನೆ ಒಕ್ಕೂಟದ ಅಧ್ಯಕ್ಷ ಚಿನ್ನಪ್ಪ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ದೇವಿ ಕೃಷ್ಣಮೂರ್ತಿ, ಡಿ.ಟಿ.ಕೃಷ್ಣಮೂರ್ತಿ, ಹೆಚ್.ಜಿ.ರಮಾಕಾಂತ್, ಕೆ.ವಿ.ಸುಬ್ರಹ್ಮಣ್ಯ, ದೇವೇಂದ್ರಗೌಡ, ಗುರುರಾಜ.ಸಿ, ಟಿ.ಸಿ.ಕೃಷ್ಣ, ಎ.ಎನ್.ಗೋಪಾಲ್, ಶ್ರೀಧರ್, ರವಿ ಮುಂಡಿಗೆಮನೆ, ಸುಜಾತಮೂರ್ತಿ, ಮಂಜುನಾಥ, ದಿಲೀಪ್, ಸುಬ್ರಹ್ಮಣ್ಯ ಸಮಗೋಡು, ಗಂಗಮ್ಮ, ಪ್ರತಿಮಾ, ಶಿವರಾಮಶೆಟ್ಟಿ, ವ್ಯವಸ್ಥಾಪಕ ಸುಧೀರ್ ಇದ್ದರು.
ಕಾರ್ಯಕ್ರಮವನ್ನು ಮಂಜುಳಾ ಗುರುರಾಜ ನಿರ್ವಹಿಸಿದರು.
ಬಳಿಕ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.