
ಹೊಸನಗರ: ನಿಟ್ಟೂರು ಗ್ರಾಪಂ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿ ರಚಿಸಿ ಹೋರಾಟ ನಡೆಸಲು ಮುಂದಾಗಿರುವುದು ಬಿಜೆಪಿ ಕೃಪಾಪೋಷಿತ ಪ್ರತಿಭಟನೆ ಎಂದು ನಿಟ್ಟೂರು ಕಾಂಗ್ರೆಸ್ ಘಟಕ ಆರೋಪಿಸಿದೆ
ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪಕ್ಷದ ಮುಖಂಡರು, ಕರೊನಾ ಸಮಯದಲ್ಲಿ ಮೃತಪಟ್ಟ ನೀರುಗಂಟಿ ಮಜಿದ್ ಎನ್ನುವರಿಗೆ ಪರಿಹಾರ ನೀಡುವುದು ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಆರೋಗ್ಯ ಇಲಾಖೆ ರಿಪೋರ್ಟ್ ಮೇಲೆ ಪರಿಹಾರ ಸಂಬಂಧ ಕ್ರಮ ಕೈಗೊಳ್ಳುತ್ತದೆ. ಗ್ರಾಪಂಯಿಂದ ಪ್ರಸ್ತಾವನೆ ಕೇಳಿದ್ದಕ್ಕೆ ಕಳಿಸಿದ್ದೇವೆ. ಇದನ್ನೇ ಗ್ರಾಪಂ ಭ್ರಷ್ಟಾಚಾರ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದ್ದಾರೆ.
ಹಿಂದೆ ಮಜಿದ್ ಸಾವಿನ ವಿಚಾರಕ್ಕೆ ಸಂಬಂಧಿಸಿ ಪ್ರಸ್ತಾವನೆ ಸಲ್ಲಿಸಿದಾಗ ವಿರೋಧ ಕೇಳಿ ಬಂದಿದ್ದು ಗ್ರಾಮಸಭೆಯಲ್ಲಿ ಮಂಡಿಸಿ ತನಿಖೆಗೆ ಒತ್ತಾಯಿಸಲಾಗಿತ್ತು. ಈಗ ತನಿಖೆ ಮುಗಿದ ನಂತರ ಮರು ಪ್ರಸ್ತಾವನೆಯನ್ನು ಮೇಲಾಧಿಕಾರಿಗಳು ಕೇಳಿದ್ದು ಅದರಂತೆ ಸಲ್ಲಿಸಿದ್ದೇವೆ. ಇದನ್ನು ವಿರೋಧಿಸಿ ಇಬ್ಬರು ಸದಸ್ಯರು ರಾಜೀನಾಮೆ ಸಲ್ಲಿಸುವುದಕ್ಕಿಂತ ತಾವಂದುಕೊಂಡಿರುವ ಅನ್ಯಾಯದ ವಿರುದ್ಧ ಹೋರಾಡಬೇಕಿತ್ತು ಅದು ಬಿಟ್ಟು ಆಧಾರ ರಹಿತವಾಗಿ ಭ್ರಷ್ಟಾಚಾರದ ಆರೋಪ ಮಾಡಲಾಗುತ್ತಿದೆ.
ಈ ಹಿಂದೆಯೇ ತಾಪಂ ನಿಟ್ಟೂರು ಗ್ರಾಪಂಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ತಿಳಿಸಿದೆ. ಹೀಗಿದ್ದು ಪ್ರತಿಭಟನೆಗೆ ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಮಳೆಹಾನಿ ದಾಖಲೆ ಸೃಷ್ಟಿಸಿ ರೂ. 5ಲಕ್ಷ ಪರಿಹಾರ, ನಿಟ್ಟೂರು ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ ಅವ್ಯವಸ್ಥೆ, ಮತ್ತು ಪಂಚಾಯತ್ ರಾಜ್ ಕಾಯ್ದೆ ಉಲ್ಲಂಘಿಸಿ ನಡಾವಳಿ ತಿದ್ದುವುದು ಮತ್ತು ಸದಸ್ಯರ ಹಕ್ಕನ್ನು ಕಸಿಯುವುದು ಎಂದು ಬೇಕಾಬಿಟ್ಟಿ ಆರೋಪ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಶಾಸಕ ಸಂಸದರು ಕೂಡ ಬಿಜೆಪಿ ಪಕ್ಷದವರೇ ಆಗಿದ್ದಾರೆ. ಅವರ ವಿರುದ್ಧ ಪ್ರತಿಭಟನೆ ಮಾಡುವುದು ಬಿಟ್ಟು ಗ್ರಾಪಂ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದು ನೋಡಿದರೆ ಇದು ಮುಂಬರುವ ಚುನಾವಣೆಯ ಲೆಕ್ಕಾಚಾರ ಎಂದು ಕಾಂಗ್ರೆಸ್ ಆರೋಪಿಸಿದೆ.
ಡಿ.ಎಸ್.ಅರುಣ ಮರುಪರಿಶೀಲಿಸಲಿ:
ನಿಟ್ಟೂರು ಗ್ರಾಪಂನಲ್ಲಿ ನ.23 ರಂದು ನಡೆಸಲು ಉದ್ದೇಶಿಸಿರುವ ಬಿಜೆಪಿ ಕೃಪಾಪೋಷಿತ ಪ್ರತಿಭಟನೆಗೆ ವಿಧಾನ ಪರಿಷತ್ತು ಸದಸ್ಯ ಡಿ.ಎಸ್.ಅರುಣ್ ಭಾಗವಹಿಸುತ್ತಿದ್ದಾರೆ ಎಂದು ಸಮಿತಿ ಹೇಳಿಕೊಂಡಿದೆ. ಡಿ.ಎಸ್.ಅರುಣ್ ಪ್ರತಿಭಟನೆಗೆ ಬರುವ ಮುನ್ನ ರಾಜ್ಯದಲ್ಲಿ ಸರ್ಕಾರ ಯಾವುದಿದೆ, ಯಾರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ ಎನ್ನುವುದನ್ನು ಪರಿಶೀಲಿಸುವುದು ಒಳಿತು. ಇಲ್ಲವಾದರೆ ತಮ್ಮ ವಿರುದ್ಧ ತಾವೇ ಪ್ರತಿಭಟನೆ ಮಾಡಿಕೊಂಡ ಅಪಹಾಸ್ಯಕ್ಕೆ ಗುರಿಯಾಗಬೇಕಾದೀತು ಎಂದು ನಿಟ್ಟೂರು ಬ್ಲಾಕ್ ಕಾಂಗ್ರೆಸ್ ವ್ಯಂಗ್ಯ ಮಾಡಿದೆ.
ರೈತರನ್ನು ಬಿಟ್ಟುಬಿಡದೇ ಕಾಡುತ್ತಿರುವ ಎಲೆಚುಕ್ಕೆ ರೋಗ, ಜನರ ಕಣ್ಣೊರೆಸುವ ರೀತಿಯಲ್ಲಿ ಔಷಧಿ ವಿತರಣೆ, ವ್ಯಾಪಕ ಭ್ರಷ್ಟಾಚಾರ ನಡೆದಿರುವ ಗೌರಿಕೆರೆ ಬೆನ್ನಟ್ಟೆ ರಸ್ತೆ ಕಾಮಗಾರಿ, ಅರಣ್ಯ ಹಕ್ಕು ಅರ್ಜಿಯಲ್ಲಿ ಸಲ್ಲಿಸಿರುವ 90 ವರ್ಷದ ದಾಖಲೆಗಳನ್ನು ವಜಾಗೊಳಿಸಿರುವ ಬಗ್ಗೆ, ರೂ.4 ಕೋಟಿ ವೆಚ್ಚದ ನಾಗೋಡಿ ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಬೇಕಿದೆ.
ಮಳೆ ಹಾನಿ ಇರಬಹುದು, ಕೋವಿಡ್ ಪರಿಹಾರ ಇರಬಹುದು ಗ್ರಾಪಂ ಪರಿಹಾರ ಕೊಡುವುದಿಲ್ಲ ಎಂಬ ಕನಿಷ್ಠ ಜ್ಞಾನವೂ ಇಲ್ಲದೇ ಅದನ್ನೇ ಭ್ರಷ್ಟಾಚಾರ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿರುವುದೇ ದೊಡ್ಡ ವಿಪರ್ಯಾಸ ಎಂದು ಕಾಂಗ್ರೆಸ್ ವ್ಯಂಗ್ಯವಾಗಿದೆ.
ನಿಟ್ಟೂರು ಕಾಂಗ್ರೆಸ್ ಅಧ್ಯಕ್ಷ ನಾಗೇಂದ್ರ ಜೋಗಿ ಉಪಾಧ್ಯಕ್ಷ ಬೆನ್ನಟ್ಟೆ ಮಂಜಪ್ಪ, ಕೆ.ಆರ್.ನರಸಿಂಹಪೂಜಾರಿ, ಚಂದ್ರಶೇಖರ ಶೆಟ್ಟಿ ಬೇಳೂರು, ಗ್ರಾಪಂ ಸದಸ್ಯ ಚಂದಯ್ಯ ಜೈನ್, ನಾಗೋಡಿ ವಿಶ್ವನಾಥ್ ಉಪಸ್ಥಿತರಿದ್ದರು.