ಅಡಗೋಡಿ ಶ್ರೀಮೂಕಾರ್ತೇಶ್ವರದ ಶಿವಲಿಂಗ 700 ವರ್ಷ ಹಳೆಯದು | ಜೀರ್ಣೋದ್ಧಾರ ವೇಳೆ ಬೃಹತ್ ಶಿವಲಿಂಗದ ಮಹತ್ವ ಬೆಳಕಿಗೆ

ಅಡಗೋಡಿ ಶ್ರೀಮೂಕಾರ್ತೇಶ್ವರದ ಶಿವಲಿಂಗ 700 ವರ್ಷ ಹಳೆಯದು | ಜೀರ್ಣೋದ್ಧಾರ ವೇಳೆ ಬೃಹತ್ ಶಿವಲಿಂಗದ ಮಹತ್ವ ಬೆಳಕಿಗೆ

ಹೊಸನಗರ: ತಾಲೂಕಿನ ನಗರ ಹೋಬಳಿಯ ಅಡಗೋಡಿಯ ಶ್ರೀಮೂಕಾರ್ತೇಶ್ವರ ದೇಗುಲದ ಶಿವಲಿಂಗ ಪುರಾತನ ಕಾಲಕ್ಕೆ ಸೇರಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಶ್ರೀಮೂಕಾರ್ತೇಶ್ವರ ದೇಗುಲ ಶಿಥಿಲಗೊಂಡಿದ್ದು ಜೀರ್ಣೋದ್ಧಾರಕ್ಕೆ ದೇಗುಲ ಸಮಿತಿ ಮುಂದಾಗಿದೆ. ಈ ಸಂದರ್ಭದಲ್ಲಿ ಶಿವಲಿಂಗವನ್ನು ಕಿತ್ತ ಸಂದರ್ಭದಲ್ಲಿ ಲಿಂಗದ ವಿನ್ಯಾಸ ವಿಶೇಷವಾಗಿದ್ದು ಗಮನಸೆಳೆದಿದೆ. ಬಳಿಕ ಕಲ್ಲಿನ ವಿಶೇಷತೆ ಬಗ್ಗೆ ಇತಿಹಾಸ ತಜ್ಞರ ಗಮನಕ್ಕೆ ತಂದಾಗ ಇದು 14-15 ಶತಮಾನದ ಶಿವಲಿಂಗ ಎಂದು ತಿಳಿದುಬಂದಿದೆ.

4 ಅಡಿ ಎತ್ತರದ ಶಿವಲಿಂಗ:
ಶಿವಲಿಂಗ ಪೀಠ ಸೇರಿ 4 ಅಡಿ ಎತ್ತರವಿದೆ. 2.5 ಅಡಿಗೂ ಹೆಚ್ಚು ಸುತ್ತಳತೆ ಹೊಂದಿದ್ದು, ಪೀಠದಿಂದ ಶಿವಲಿಂಗ 1.5 ಅಡಿ ಎತ್ತರವಿದೆ ಎಂದು ಅಂದಾಜಿಸಲಾಗಿದೆ

ಶಿವಲಿಂಗದ ಮಹತ್ವ:
ಕರ್ಣಾಟ ಸಾಮ್ರಾಜ್ಯದ (ವಿಜಯನಗರ) ಕಾಲಮಾನದ ಶಿವಲಿಂಗ (ಪೀಠ ಸಹಿತ) ಇರುವುದು ಗಮನಕ್ಕೆ ಬಂದಿದೆ. ಶಿವಲಿಂಗ ಮತ್ತು ಪೀಠವು 14 – 15ನೇ ಶತಮಾನದಾಗಿದ್ದು ಕಂಡುಬಂದಿದೆ. ಇತಿಹಾಸ ತಜ್ಞ ಡಾ ಜಗದೀಶ್ ಅಗಸಿಬಾಗಿಲು, ಪುರಾತತ್ವ ಇಲಾಖೆಯ ಡಾ ಶೇಜೇಶ್ವರ, ಅಜಯಕುಮಾರ ಶರ್ಮಾ, ಈ ಶಿವಲಿಂಗ ಮತ್ತು ಅದರ ಪೀಠದ ಅಧಾರದ ಮೇಲೆ ಇದರ ಕಾಲಮಾನವನ್ನು 14-15ನೇ ಶತಮಾನಕ್ಕೆ ಅಂದರೆ 1301 ಇಂದ 1500ರ ಕಾಲಘಟ್ಟಕ್ಕೆ ಸೇರಿಸ ಬಹುದು ಎಂದು ಅಂದಾಜಿಸಿದ್ದಾರೆ.
ದೇವಸ್ಥಾನ ಸಮಿತಿ ಅಧ್ಯಕ್ಷ ನಾಗಪ್ಪ ನೇತೃತ್ವದಲ್ಲಿ ದೇಗುಲದ ಜೀರ್ಣೋದ್ಧಾರಕ್ಕೆ ಮುಂದಾಗಿದ್ದು ರೂ.20 ಲಕ್ಷ ವೆಚ್ಚ ಅಂದಾಜಿಸಲಾಗಿದೆ. ಇದೀಗ ಲಿಂಗ ಪುರಾತನ ಕಾಲದ ಮಹತ್ವ ಹೊಂದಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಜೀರ್ಣೋದ್ಧಾರಕ್ಕೆ ಮತ್ತಷ್ಟು ಮಹತ್ವ ಬಂದಿದೆ ಎಂದು ಸ್ಥಳೀಯ ಶುಶ್ರುತ್ ಭಟ್ ತಿಳಿಸಿದ್ದಾರೆ.

Exit mobile version