ಯಡೂರು ಅಬ್ಬಿ ಫಾಲ್ಸ್ ನಲ್ಲಿ ಹುಚ್ಚು ಸಾಹಸ! ನೋಡ ನೋಡುತ್ತಲೇ ಜೀವ ಕಳೆದುಕೊಂಡ ತಮಿಳುನಾಡು ಮೂಲದ‌ ವ್ಯಕ್ತಿ | ಈ ನಡುವೆ 100 ಅಡಿ ಕೆಳಗಿದ್ದ ಮೃತದೇಹವನ್ನು ಜಾರುವ ಬಂಡೆಗಳ ಮೇಲೆ ಹಗ್ಗ ಕಟ್ಟಿ ಮೇಲಕ್ಕೆತ್ತಿದ ಸಾಹಸಕ್ಕೆ.. ಒಂದು ಸಲಾಂ!

ಯಡೂರು ಅಬ್ಬಿ ಫಾಲ್ಸ್ ನಲ್ಲಿ ನೀರುಪಾಲಾದ ತಮಿಳುನಾಡು ಮೂಲದ ಯುವಕ
ಕಲ್ಲು ಬಂಡೆಯ ನಡುವೆ ಇಳಿಯುವ ಸಾಹಸ ಮಾಡಿ ದುರ್ಘಟನೆ

ಹೊಸನಗರ: ತಾಲೂಕಿನ ಯಡೂರು ಗಿಣಿಕಲ್ ಬಳಿ ಇರುವ ತಲಾಸಿ ಅಬ್ಬಿ ಫಾಲ್ಸ್ ವೀಕ್ಷಣೆಗೆ ತೆರಳಿದ್ದ ವೇಳೆ ತಮಿಳು‌ನಾಡು ಮೂಲದ ಯುವಕ ನೋರ್ವ ಕಲ್ಲು ಬಂಡೆಗಳ‌ ನಡುವೆ ಇಳಿಯುವ ಸಾಹಸ ಮಾಡಿ ನೀರುಪಾಲಾಗಿ‌ ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ತಮಿಳುನಾಡು ಸೇಲಂ ಕಲ್ಲುಕುರಚಿ ಜಿಲ್ಲೆಯ ರಮೇಶ (47). ಮೃತ ವ್ಯಕ್ತಿ.
ರಮೇಶ್ ಬೆಂಗಳೂರಿನ ಎಸ್ಎಮ್ಎಲ್ ಎಲೆಕ್ಟ್ರಿಕಲ್ ಪ್ರೈ ಕಂಪನಿಯ ಮ್ಯಾನೇಜರ್ ಆಗಿದ್ದು ತನ್ನ ಸ್ನೇಹಿತರಾದ ಭರತ್, ಮೋಹನ್, ಅರುಣಾವಲಂ, ಗಿರೀಶ್ ಜೊತೆ ಸೇರಿ ಬೆಂಗಳೂರಿನಿಂದ ಐವರು ಪ್ರವಾಸಕ್ಕೆ ಬಂದ ವೇಳೆ ಈ ದುರ್ಘಟನೆ ನಡೆದಿದೆ.

ಬೆಳಿಗ್ಗೆ ತೀರ್ಥಹಳ್ಳಿಯ ಕುಂದಾದ್ರಿ, ಕವಲೇದುರ್ಗ ನೋಡಿಕೊಂಡು ಮಧ್ಯಾಹ್ನದ ವೇಳೆ ಅಬ್ಬಿಫಾಲ್ಸ್ ಗೆ ಬಂದಿದ್ದರು.

ಮೃತ ರಮೇಶ್ ಜೊತೆ ಬಂದ ಸ್ನೇಹಿತರು

ಸುಮಾರು 150 ಅಡಿ ಧುಮುಕುವ ಫಾಲ್ಸ್ ಮೇಲ್ಭಾಗದಲ್ಲಿ ವೀಕ್ಷಣೆಗೆ ತೆರಳಿದ್ದು ರಮೇಶ ಎಂಬಾತ ಅಲ್ಲಿಂದ ಧುಮುಕುವ ನೀರಿಗೆ ಇಳಿಯುವ ಸಾಹಸ ಮಾಡಿದ್ದಾನೆ. ಕೆಳಗಡೆ ಬಂಡೆ ಸಿಗದ ಕಾರಣ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.

ದೃಶ್ಯ ಸೆರೆ:
ರಮೇಶ್ ನೀರುಪಾಲು ಆಗುವ ದೃಶ್ಯ ಸ್ನೇಹಿತರ ಮೊಬೈಲ್ ನಲ್ಲಿ ಸೆರೆಯಾಗಿದ್ದು ವೀಡಿಯೋ ವೈರಲ್ ಆಗಿದೆ.

ನೀರುಪಾಲಾದ ಮಾಹಿತಿ ತಿಳಿಯುತ್ತಿದ್ದಂತೆ ತೀರ್ಥಹಳ್ಳಿ‌ ಡಿವೈಎಸ್ಪಿ ಅರವಿಂದ್ ಕಲ್ಗುಜ್ಜಿ, ಹೊಸನಗರ ಸಿಪಿಐ ಗುರಣ್ಣ ಎಸ್ ಹೆಬ್ಬಾಳ್, ನಗರ ಎಎಸ್ಐ ಕುಮಾರ್ ಮತ್ತು‌ ಸಿಬ್ಬಂದಿಗಳು ದೌಡಾಯಿಸಿದ್ದಾರೆ.

100 ಅಡಿ ಕೆಳಗಿತ್ತು‌ ಮೃತ ದೇಹ!

ಜಲಪಾತದ ಮೇಲ್ಭಾಗದಿಂದ ಕೊಚ್ಚಿಕೊಂಡು ಹೋದ ವ್ಯಕ್ತಿ ಮೃತಪಟ್ಟಿದ್ದು,  ಶವ 100 ಅಡಿ ಕೆಳಭಾಗದಲ್ಲಿ ಪತ್ತೆಯಾಗಿದ್ದು ಅಗ್ನಿಶಾಮಕ ದಳ ಮತ್ತು ಸ್ಥಳೀಯರ ಸಹಕಾರದಿಂದ ಹಗ್ಗದ ಮೂಲಕ ಮೇಲಕ್ಕೆತ್ತಲಾಯಿತು. ಬಳಿಕ ಒಂದು ಕಿಮೀ ಕಡಿದಾದ ರಸ್ತೆಯಲ್ಲಿ ಶವವನ್ನು ಹೊತ್ತುಕೊಂಡೇ ಬಂದು ಮುಖ್ಯರಸ್ತೆಗೆ ತರಲಾಯಿತು.

ಬಳಿಕ ಮರಣೋತ್ತರ ಪರೀಕ್ಷೆಗೆ ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಯಿತು.

ಮೃತನಾದ ವ್ಯಕ್ತಿ ಮುಳುಗುತ್ತಿದ್ದ ದೃಶ್ಯ ಸ್ನೇಹಿತ‌ರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಜೀವದ ಬೆಲೆ ಅರಿಯದೇ ಹುಚ್ಚಾಟ ಮಾಡಿದರೇ ಸಾವು ಹೇಗೆ ಎದುರಾಗುತ್ತದೆ ಎಂಬುದು ಲೋಕಕ್ಕೆ ಜಗಜ್ಜಾಹಿರಾಗಿದೆ.  ಈ ನಡುವೆ 100 ಅಡಿ ಕೆಳಗಿದ್ದ ಮೃತದೇಹವನ್ನು ಜಾರುತ್ತಿದ್ದ ಬಂಡೆಗಳ ನಡುವೆ ಹಗ್ಗ ಕಟ್ಟಿ, ಸಾಹಸದ ಮೂಲಕ ಮೇಲಕ್ಕೆತ್ತಿದ್ದು ಮಾತ್ರವಲ್ಲ ಒಂದು ಕಿಮೀ ಕಡಿದಾದ ದಾರಿಯಲ್ಲಿ ಹೊತ್ತುಕೊಂಡು‌ ಬಂದು ಕಾರ್ಯಾಚರಣೆ ಮೆರೆದ ಪೊಲೀಸ್, ಅಗ್ನಿಶಾಮಕ ದಳ ಮತ್ತು ಸ್ಥಳೀಯರ ಸಹಕಾರಕ್ಕೆ ಸಲಾಂ ಹೇಳಲೇ ಬೇಕು.

Exit mobile version