
ವೀರಶೈವ ಸಮಾಜಕ್ಕೆ ಪ್ರಾತಿನಿಧ್ಯ ಸಿಗದ ಹಿನ್ನೆಲೆ: ಬಂಡಾಯ ಸ್ಪರ್ಧೆಗೆ ಮುಂದಾದ ಬಿ.ಯುವರಾಜ್
ಹೊಸನಗರ: ವಿಧಾನಸಭಾ ಚುನಾವಣೆಯಲ್ಲಿ ವೀರಶೈವ ಸಮಾಜಕ್ಕೆ ಪ್ರಾತಿನಿಧ್ಯ ನೀಡುವಲ್ಲಿ ಬಿಜೆಪಿ ನಿರ್ಲಕ್ಷ ತೋರಿದ ಹಿನ್ನೆಲೆಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಅಖಿಲ ವೀರಶೈವ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಬಿ.ಯುವರಾಜ್ ಘೋಷಿಸಿದ್ದಾರೆ.
ಸಾಗರ, ಹೊಸನಗರ, ತೀರ್ಥಹಳ್ಳಿ, ಸೊರಬ ಮತ್ತು ಶಿವಮೊಗ್ಗ ಕ್ಷೇತ್ರದಲ್ಲಿ ಸಮಾಜ ಬಾಂಧವರು ಸಾಕಷ್ಟು ಸಂಖ್ಯೆಯಲ್ಲಿದ್ದು ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿತ್ತು. ಆದರೆ ಯಾವುದೇ ಕ್ಷೇತ್ರದಲ್ಲಿ ನಮ್ಮ ಸಮಾಜಕ್ಕೆ ಪ್ರಾತಿನಿಧ್ಯ ಬಿಜೆಪಿ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಬಿಜೆಪಿಯ ಜಿಲ್ಲಾ ಸಮಿತಿಯ ಸದಸ್ಯ, ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯದರ್ಶಿ, ಈ ಹಿಂದೆ ಸಮಾಜದ ತಾಲೂಕು ಘಟಕದ ಅಧ್ಯಕ್ಷನಾಗಿ, ತಾಲೂಕು ಬಿಜೆಪಿ ಅಧ್ಯಕ್ಷನಾಗಿ ಕೂಡ ಕೆಲಸ ಮಾಡಿದ್ದೆ.
ಈ ನಾಲ್ಕು ಕ್ಷೇತ್ರಗಳ ಚುನಾವಣೆಯಲ್ಲಿ ಮಲ್ಲವ ವೀರಶೈವರು ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದರು. ಆದರೆ ವಿಧಾನಸಭೆ, ವಿಧಾನಪರಿಷತ್, ನಿಗಮ ಮಂಡಳಿಗೆ ಸಮಾಜದ ಯಾವೊಬ್ಬರಿಗೂ ಪ್ರಾತಿನಿಧ್ಯ ನೀಡಿಲ್ಲ. ಇದನ್ನು ಖಂಡಿಸಿ ಸಾಗರದಲ್ಲಿ ಬಂಡಾಯ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದೇನೆ ಎಂದರು.
ಏ.18 ರಂದು ನಾಮಪತ್ರ ಸಲ್ಲಿಕೆ:
ಸಮಾಜಕ್ಕೆ ಆದ ಅನ್ಯಾಯ, ಬಂಡಾಯ ಸ್ಪರ್ಧೆ ಬಗ್ಗೆ ಸಮಾಜದ ಹಿರಿಯರು, ಸ್ನೇಹಿತರು, ಹಿತೈಶಿಗಳಲ್ಲಿ ಚರ್ಚಿಸಿದ್ದೇನೆ. ಅವರು ಕೂಡ ಸಮ್ಮತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಏ.18 ರಂದು ನಾಮಪತ್ರ ಸಲ್ಲಿಸುವುದಾಗಿ ಬಿ.ಯುವರಾಜ್ ತಿಳಿಸಿದ್ದಾರೆ.