ಪಕ್ಷ ಬದಲಿಸಿದರೂ.. ಉಳಿಯಲಿಲ್ಲ ಗ್ರಾಮಾಧಿಕಾರ | ಇಡೀ ಗ್ರಾಪಂಯಲ್ಲಿ ಅಧ್ಯಕ್ಷರ ಪರ ಯಾವೊಬ್ಬ ಸದಸ್ಯ ಕೂಡ ನಿಲ್ಲಲಿಲ್ಲ | ಅಧ್ಯಕ್ಷರ ಲೆಕ್ಕಾಚಾರ ಠುಸ್ !

ಹೊಸನಗರ: ಸ್ಥಳೀಯ ಸದಸ್ಯರ ಮಾತಿನ ಒಡಂಬಡಿಕೆಯಂತೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕಾಗಿದ್ದರೂ ಬಿಡದೇ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲೇ ಬೇಕು ಎಂದು ಪಕ್ಷಾಂತರ ಮಾಡಿದರೂ ಕೊನೆಗೂ ಅಧ್ಯಕ್ಷ ಸ್ಥಾನದಿಂದ ಅವಿಶ್ವಾಸಗೊಂಡು ಕೆಳಗಿಳಿಯಬೇಕಾಗಿ ಬಂದ ಘಟನೆ ಹರತಾಳು ಗ್ರಾಪಂಯಲ್ಲಿ ನಡೆದಿದೆ.

ಹೌದು ಗುರುವಾರ ಹರತಾಳು ಗ್ರಾಪಂಯಲ್ಲಿ ಗ್ರಾಪಂ ಅಧ್ಯಕ್ಷ ಕಲ್ಲಿ ಯೋಗೇಂದ್ರಪ್ಪ ವಿರುದ್ಧ ಮಂಡಿಸಿದ ಅವಿಶ್ವಾಸಕ್ಕೆ 6-0 ಅಂತರದಲ್ಲಿ ಗೆಲುವಾಗಿದೆ.

8 ಸದಸ್ಯ ಬಲದ ಗ್ರಾಪಂ:
ಹರತಾಳು ಗ್ರಾಪಂ 8 ಸದಸ್ಯ ಬಲವನ್ನು ಹೊಂದಿದೆ. 4 ಕಾಂಗ್ರೆಸ್ ಬೆಂಬಲಿತ, 3 ಬಿಜೆಪಿ ಬೆಂಬಲಿತ, ಒರ್ವ ಪಕ್ಷೇತರ ಸದಸ್ಯರನ್ನು ಒಳಗೊಂಡಿತ್ತು. ಈ ಹಿಂದೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯ ಕಲ್ಲಿ ಯೋಗೇಂದ್ರಪ್ಪ ಆಯ್ಕೆಯಾಗಿದ್ದರು. ಬಿಸಿಎಂ ಎ ಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನವನ್ನುನಾಗರತ್ನ ವಾಸುದೇವ ಅಲಂಕರಿಸಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಒಡಂಬಡಿಕೆ:

ಕಾಂಗ್ರೆಸ್ ಬೆಂಬಲಿತ ಮತ್ತೋರ್ವ ಸದಸ್ಯ ಕಣಕಿ ನಾರಾಯಣಪ್ಪ ಅಧ್ಯಕ್ಷ ಸ್ಥಾನಕ್ಕೆ ಬಲವಾದ ಆಕಾಂಕ್ಷಿಯಾಗಿದ್ದರು. 15 ತಿಂಗಳ ನಂತರ ಬಿಟ್ಟು ಕೊಡುವ ಒಡಂಬಡಿಕೆಯೊಂದಿಗೆ ಕಲ್ಲಿ ಯೋಗೇಂದ್ರಪ್ಪರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದರೆ 15 ತಿಂಗಳ ಮೇಲೆ 3 ತಿಂಗಳಾದರೂ ಕೂಡ ಕಲ್ಲಿ ಯೋಗೇಂದ್ರಪ್ಪ ಬಿಟ್ಟುಕೊಡಲಿಲ್ಲ ಎಂಬುದು  ಕಣಕಿ ನಾರಾಯಣಪ್ಪರ ಆರೋಪ.

ಕಾಂಗ್ರೆಸ್ ಪ್ರಮುಖರಾದ ಬಂಡಿ ರಾಮಚಂದ್ರ, ಜಯಶೀಲಪ್ಪಗೌಡ್ರು, ನಾಗರಾಜಗೌಡ್ರು, ಕಾಂಗ್ರೆಸ್ ಘಟಕದ ಅಧ್ಯಕ್ಷ ಶ್ರೀಧರ ಸೇರಿ ನಾಲ್ಕು ಬಾರಿ ಸಭೆ ಸೇರಿದರೂ ಕಲ್ಲಿ ಯೋಗೇಂದ್ರಪ್ಪರನ್ನು ಸಭೆಗೆ ಕರೆಸಲು ಸಾಧ್ಯವಾಗಿರಲಿಲ್ಲ. ಒಮ್ಮೆ ಖುದ್ದು ಅವರ ಮನೆಗೆ ಹೋದರೂ ಪ್ರಯೋಜನವಾಗಿರಲಿಲ್ಲ.

ಬಿಜೆಪಿಗೆ ಭರ್ಜರಿ ಸೇರ್ಪಡೆ:

ಒಪ್ಪಂದಂತೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವಂತೆ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಶಾಸಕ ಹರತಾಳು ಹಾಲಪ್ಪನವರ ವಿಶ್ವಾಸ ಕುದುರಿಸಿದ ಕಲ್ಲಿ ಯೋಗೇಂದ್ರಪ್ಪ ಹೊಸನಗರ ಗಾಯತ್ರಿ ಮಂದಿರದಲ್ಲಿ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡು ವಿರೋಧಿಗಳಿಗೆ ಟಾಂಗ್ ನೀಡುವ ಮೂಲಕ ಅಧ್ಯಕ್ಷ ಸ್ಥಾನ ನಂದೇ ಎಂಬ ಸಂದೇಶ ರವಾನಿಸುವಲ್ಲಿ ಯಶಸ್ವಿಯಾಗಿದ್ದರು.

ಆದರೆ ಆಗಿದ್ದೇ ಬೇರೆ:

ಹರತಾಳು ಗ್ರಾಪಂಯಲ್ಲಿ ಬಿಜೆಪಿ ಬೆಂಬಲಿತ ಮೂವರು ಸದಸ್ಯರು ಮತ್ತು ಶಾಸಕರ ಕೃಪಾಕಟಾಕ್ಷದಿಂದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಬಹುದು ಎಂಬ ಕಲ್ಲಿ ಲೆಕ್ಕಾಚಾರ ತಲೆಕೆಳಗಾಗಿದೆ. ಅವಿಶ್ವಾಸ ಮಂಡನೆ ಹಾಜರಿದ್ದ 6 ಜನ ಸದಸ್ಯರು ಅವಿಶ್ವಾಸ ಮಂಡನೆ ಪರವಾಗಿ ಮತ ಚಲಾಯಿಸಿದ್ದಾರೆ. ಸದಸ್ಯೆ ಪ್ರೇಮಾ ಪುರುಶೋತ್ತಮ ಗೈರಾಗಿದ್ದರು. ಇನ್ನು ವಿಶೇಷ ಎಂದರೆ ಅಧ್ಯಕ್ಷ ಕಲ್ಲಿ ಯೋಗೇಂದ್ರಪ್ಪ ಸಭೆ ಗೈರಾಗಿ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ.

ಶಾಸಕರು ಒಲಿದರೂ ಬಿಜೆಪಿ ಸದಸ್ಯರು ಮಾತ್ರ ಒಲಿಯಲಿಲ್ಲ :

ಅವಿಶ್ವಾಸ ಮಂಡನೆಯಲ್ಲಿ ಬಿಜೆಪಿ ಬೆಂಬಲಿತ ಮೂವರು ಸದಸ್ಯರಲ್ಲಿ ಪ್ರೇಮಾ ಗೈರಾಗಿ ದೂರ ಉಳಿದರೆ ಉಳಿದ ಸದಸ್ಯರಲ್ಲಿ ನಾರಿ ರವಿ, ಸತ್ಯವತಿ ಚಂದ್ರಪ್ಪ ಅವಿಶ್ವಾಸ ಮಂಡನೆ ಪರವಾಗಿ ಮತ ಚಲಾಯಿಸಿದ್ದು ಅಧ್ಯಕ್ಷ ಪಾಲಿಗೆ ಮರ್ಮಾಘಾತವಾಗಿದೆ. ಈ ಮೂಲಕ ಕಲ್ಲಿ ಯೋಗೇಂದ್ರರನ್ನು ನೀವು ಒಪ್ಪಿದರೂ ನಾವು ಒಪ್ಪಲ್ಲ ಎಂಬ ಸಂದೇಶವನ್ನು ಸ್ಥಳೀಯ ಬಿಜೆಪಿ ಸದಸ್ಯರು ರವಾನಿಸಿದ್ದಾರೆ.

ಬಿಜೆಪಿ ವಿರೋಧ ಏಕೆ:

ಅಧ್ಯಕ್ಷರದು ಸರ್ವಾಧಿಕಾರಿ ಧೋರಣೆ, ಯಾವ ಸದಸ್ಯರನ್ನು ವಿಶ್ವಾಸ ತೆಗೆದುಕೊಂಡಿಲ್ಲ. ಮನೆ ಹಂಚಿಕೆಯಲ್ಲಿ ತಾರತಮ್ಯ, ಅಧ್ಯಕ್ಷರಾಗಿ ಮುಂದುವರೆದರೆ ಶಾಸಕರಿಗೂ ಕಳಂಕ. ಇದೇ ಬಿಜೆಪಿ ಬೆಂಬಲಿತ ಸದಸ್ಯರ ವಿರೋಧಕ್ಕೆ ಕಾರಣ ಮಾತ್ರವಲ್ಲ ನೂತನ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಕೂಡ ಬೇರೆ ಆಯ್ಕೆ ಮಾಡಬೇಕು ಎಂಬ ಸಂದೇಶ ಈ ಆರೋಪದಲ್ಲಿ ವ್ಯಕ್ತವಾಗಿದೆ.

ಶಾಸಕರಿಗೆ ಮುಜುಗರ:

ಇತ್ತೀಚೆಗೆ ತಮ್ಮ ನೇತೃತ್ವದಲ್ಲಿ ಪಕ್ಷಕ್ಕೆ ಸೇರಿಸಿಕೊಂಡ ಕಲ್ಲಿ ಯೋಗೇಂದ್ರಪ್ಪ ಅವಿಶ್ವಾಸ ಮಂಡನೆಯಲ್ಲಿ ಅಧಿಕಾರ ಕಳೆದುಕೊಂಡಿರುವುದು ಮತ್ತು ಯಾವೊಬ್ಬ ಸದಸ್ಯ ಕೂಡ ಕಲ್ಲಿ ಪರ ನಿಲ್ಲದಿರುವುದು ಶಾಸಕ ಹರತಾಳು ಹಾಲಪ್ಪರಿಗೆ ಮಜುಗರ ತರುವಂತಾಗಿದೆ ಎಂದು ಪಕ್ಷದ ವಲಯದಲ್ಲೇ ಕೇಳಿ ಬಂದಿದೆ.

ಹಾಲಿ ಬಲಾಬಲ:

ಹರತಾಳು ಗ್ರಾಪಂ 8 ಸದಸ್ಯ ಬಲ ಹೊಂದಿದೆ. ಕಾಂಗ್ರೆಸ್ ಬೆಂಬಲಿತ 3 (ಸಾಕಮ್ಮ ಮನೋಹರ, ಕಣಕಿ ನಾರಾಯಣಪ್ಪ, ನಾಗರತ್ನ ವಾಸುದೇವ) ಬಿಜೆಪಿ ಸದಸ್ಯರು 4 (ನಾರಿ ರವಿ, ಸತ್ಯವತಿ ಚಂದ್ರಪ್ಪ, ಪ್ರೇಮ ಪುತುಶೋತ್ತಮ, ಕಲ್ಲಿ ಯೋಗೇಂದ್ರ) ಮತ್ತು ಪಕ್ಷೇತರ ಸದಸ್ಯ ಎಸ್.ಇ.ಶಿವಮೂರ್ತಿ

ಒಟ್ಟಾರೆ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನಿಂದ ಬಿಜೆಪಿಗೆ ಜಿಗಿದರೂ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತಾಗಿದ್ದು ಕಲ್ಲಿ ಯೋಗೇಂದ್ರ ತೀವ್ರ ಹಿನ್ನೆಡೆ ಅನುಭವಿಸುವಂತಾಗಿದೆ.

ಇವರೇನಂತಾರೆ..

Exit mobile version