
ಹೊಸನಗರ: ನೇಗಿಲೋಣಿ ಗುಂಡೇಟಿಗೆ ಯುವಕ ಬಲಿಯಾದ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮೃತ ಅಂಬರೀಷ್ ನಿವಾಸಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಗುಂಡೇಟು ಪ್ರಕರಣ ಸಂಬಂಧಪಟ್ಟಂತೆ ಮೃತನ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು ಮರು ತನಿಖೆಗೆ ಈ ವೇಳೆ ಒತ್ತಾಯಿಸಿದರು. ಮೃತ ಅಂಬರೀಷ್ ತಂದೆ ಸಿದ್ದನಾಯ್ಕ, ತಾಯಿ, ಸಹೋದರಿ ಅಮಿತಾ, ಸಹೋದರ ಅಭಿಷೇಕ, ಮೃತ ಅಂಬರೀಷನ ಕುರಿತಾಗಿ ಮಾಹಿತಿಗಳನ್ನು ತೆರದಿಟ್ಟು ರೋಧಿಸಿದರು.
ಕುಟುಂಬಸ್ಥರ ಮನವಿಗೆ ಸ್ಪಂದಿಸಿದ ಸಚಿವರು ಶಿವಮೊಗ್ಗ ಎಸ್ಪಿಯವರಿಗೆ ದೂರವಾಣಿ ಮೂಲಕ ಮಾತನಾಡಿದರು.
ಸಮಗ್ರ ತನಿಖೆ ಮಾಡಲು ಸೂಚನೆ:
ಗುಂಡೇಟಿಗೆ ಬಲಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮಗ್ರ ತನಿಖೆ ನಡೆಸಬೇಕು. ಗುಂಡು ಸಿಡಿದ ಬಂದೂಕು ಯಾವುದು, ಯಾರದ್ದು ಗೊತ್ತಾಗಬೇಕು. ಮೃತರ ನಿವಾಸಕ್ಕೆ ಡಿವೈಎಸ್ಪಿ ಹಂತದ ಅಧಿಕಾರಿ ಭೇಟಿ ನೀಡಿ ತಂದೆ ತಾಯಿಯಿಂದ ಹೇಳಿಕೆ ಪಡೆದುಕೊಳ್ಳುವಂತೆ ಸೂಚಿಸಿದರು. ಮೃತ ಕುಟುಂಬಸ್ಥರಲ್ಲಿ ನೋವಿದೆ ಮತ್ತು ಈವರೆಗೆ ನಡೆದ ತನಿಖೆಯ ಮೇಲೆ ಅನುಮಾನವಿದೆ. ಈ ಬಗ್ಗೆ ಪರಿಶೀಲಿಸಿ ಕುಟುಂಬಸ್ಥರಿಗೆ ನ್ಯಾಯ ಕಲ್ಪಿಸುವಂತೆ ಸೂಚಿಸಿದರು.
ಭೇಟಿ ತಡವಾಗಿದ್ದಕ್ಕೆ ಅನ್ಯಥಾ ಭಾವಿಸಬೇಡಿ:
ಗುಂಡೇಟಿಗೆ ಬಲಿಯಾದ ಪ್ರಕರಣ ನಡೆದಾಗ. ಅದೇ ಗ್ರಾಮದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ. ಆ ಹೊತ್ತಿಗೆ ಘಟನೆಯ ಮಾಹಿತಿ ಬಂದಿರಲಿಲ್ಲ. ಅಲ್ಲದೇ ಶಿವಮೊಗ್ಗ ಮುರುಘರಾಜೇಂದ್ರ ಶರಣರ ಮಠದಲ್ಲಿ ಕಾರ್ಯಕ್ರಮವಿದ್ದ ಕಾರಣ ಅಲ್ಲಿಗೆ ಭೇಟಿ ನೀಡಬೇಕಿತ್ತು. ಮಾಹಿತಿ ಸಿಗುವ ಹೊತ್ತಿಗೆ ಬೆಂಗಳೂರಿನಲ್ಲಿದ್ದೆ. ವಿಷಯ ಗೊತ್ತಾದಾಗ ಎರಡು ದಿನದಲ್ಲಿ ಮೃತರ ನಿವಾಸಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದೆ. ಅದು ಬಿಟ್ಟು ಬೇರೆ ಉದ್ದೇಶ ಇಲ್ಲ. ಮಗನನ್ನು ಕಳೆದುಕೊಂಡ ತಂದೆತಾಯಿ ಸಂಕಟದ ಅರಿವು ನನಗಿದೆ ಈ ಬಗ್ಗೆ ತಪ್ಪು ಭಾವಿಸಬೇಡಿ ಎಂದು ಕುಟುಂಬಸ್ಥರಿಗೆ ಮನವಿ ಮಾಡಿದರಲ್ಲದೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದರು.
ಜಿಪಂ ಮಾಜಿ ಸದಸ್ಯ ಸುರೇಶ ಸ್ವಾಮಿರಾವ್, ಸಚಿವರ ಸಹಾಯಕ ಬಸವರಾಜ್, ಗ್ರಾಪಂ ಅಧ್ಯಕ್ಷ ಆದರ್ಶ ಹೆರಟೆ, ಎಪಿಎಂಸಿ ನಿರ್ದೇಶಕ ಕಣ್ಕಿ ಮಹೇಶ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಿತಿನ್ ನಗರ, ತಾಪಂ ಮಾಜಿ ಸದಸ್ಯ ಕೆ.ವಿ.ಸುಬ್ರಹ್ಮಣ್ಯ, ಗ್ರಾಮದ ಪ್ರಮುಖರು ಹಾಜರಿದ್ದರು.
ಸಮಗ್ರ ತನಿಖೆಗೆ ಸೂಚನೆ
ನೇಗಿಲೋಣಿಯಲ್ಲಿ ಗುಂಡೇಟಿಗೆ ಬಲಿಯಾದ ಪ್ರಕರಣದಲ್ಲಿ ತಪ್ಪು ಯಾರೇ ಮಾಡಿದ್ದರು ಶಿಕ್ಷೆಗೆ ಒಳಪಡಲೇ ಬೇಕು. ಮೃತರ ತಂದೆ ತಾಯಿ ಮತ್ತು ಕುಟುಂಬಸ್ಥರ ಅಹವಾಲು ಆಲಿಸಿದ್ದೇನೆ. ಸೂಕ್ತ ತನಿಖೆ ನಡೆಸುವಂತೆ ಅವರ ಸಮ್ಮುಖದಲ್ಲೇ ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದೇನೆ.
– ಆರಗ ಜ್ಞಾನೇಂದ್ರ, ಗೃಹ ಸಚಿವ