ಮಾನವೀಯ ನೆಲೆಯ ಸಮಾಜ ಸೇವೆ ಹೆಚ್ಚಾಗಬೇಕು | ಡಿವೈಎಸ್ಪಿ ಗಜಾನನ ವಾಮನ ಸುತಾರ

ಸರ್ಕಾರಿ ಶಾಲೆ ಅಭಿಮಾನ – ಸುಣ್ಣಬಣ್ಣ ಅಭಿಯಾನಕ್ಕೆ ಕೈ ಜೋಡಿಸಿದ ಕೆಚ್ಚೆದೆಯ ಕನ್ನಡತಿ ಅಕ್ಕ ಅನು

ಹೊಸನಗರ : ಮಾನವೀಯ ನೆಲೆಯ ಸಮಾಜ ಸೇವೆ ಅಮೂಲ್ಯವಾಗಿದ್ದು.. ಅಂತಹ ಕಾಳಜಿಯುಕ್ತ ಮನಸ್ಸುಗಳು ಹೆಚ್ಚಾಗಬೇಕಿದೆ ಎಂದು ಡಿವೈಎಸ್ಪಿ ಗಜಾನನ ವಾಮನ ಸುತಾರ ಅಭಿಪ್ರಾಯಿಸಿದರು.

ಪೋಸ್ಟ್ ಮ್ಯಾನ್ ಸುದ್ದಿ ಬಳಗ ಆಯೋಜಿಸಿದ ಕನ್ನಡ ಶಾಲೆಯ  ಸುಣ್ಣ ಬಣ್ಣದ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾನವನ ಜೀವಿತದಲ್ಲಿ ಅತ್ಯಂತ ಪವಿತ್ರವಾದ ಸ್ಥಳ ಶಾಲೆಯಾಗಿದ್ದು. ಶಾಲೆಯಲ್ಲಿ ಕಲಿತ ಪಾಠ ಪ್ರವಚನಗಳು, ಬದುಕಿನ ದಿಕ್ಕನ್ನೇ ಬದಲಾಯಿಸುವಂತಹ ಅದ್ಭುತವಾದ ಶಕ್ತಿಯನ್ನು ಹೊಂದಿದೆ ಎಂದರು.

ಕನ್ನಡದ ಶಾಲೆಯ ಬಗ್ಗೆ ಅಭಿಮಾನದ ಜೊತೆ  ಸರ್ಕಾರಿ ಶಾಲೆಗಳ ಬಗ್ಗೆ ಗಮನಹರಿಸಿ ಸುಣ್ಣ ಬಣ್ಣದ ಜೊತೆಗೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವ ಪೋಸ್ಟ್ ಮ್ಯಾನ್ ಬಳಗದ ಕಾಳಜಿ ನಿರಂತರವಾಗಿರಲಿ ಎಂದರು.

ಸರ್ಕಾರಿ ಶಾಲೆ ಅಭಿಮಾನ ಸುಣ್ಣಬಣ್ಣ ಅಭಿಯಾನ  ಕನ್ನಡ ಶಾಲೆ ಉಳಿಸಿ ಘೋಷಣೆಯಡಿಯಲ್ಲಿ ಅನುಕರಣೆ ಪ್ರತಿಷ್ಠಾನದ ಮೂಲಕ ರಾಜ್ಯದ ನೂರಾರು ಶಾಲೆಯನ್ನು ಅಂದಗಾಣಿಸಿ ಯುವ ಪೀಳಿಗೆಗೆ ಆದರ್ಶವಾಗಿರುವ ಕುಮಾರಿ ಕೆಚ್ಚೆದೆಯ ಕನ್ನಡತಿ ಅಕ್ಕ ಅನು ಗೋಡೆಗಳ ಬಣ್ಣಕ್ಕೆ ಚಾಲನೆ ನೀಡಿದರು.

21 ಸರ್ಕಾರಿ ಶಾಲೆಗಳ ಆಯ್ಕೆ:

ಪೋಸ್ಟ್ ಮ್ಯಾನ್  ಬಳಗದ ರಫ಼ಿ ರಿಪ್ಪನ್‌ಪೇಟೆ ಅಧ್ಯಕ್ಷತೆ  ವಹಿಸಿ ಮಾತನಾಡಿ ನಮ್ಮ ಬಳಗದಿಂದ ಹೊಸನಗರ ತಾಲೂಕಿನ ಒಟ್ಟು  21 ಸರ್ಕಾರಿ ಶಾಲೆಗಳ ಆಯ್ಕೆ ಮಾಡಿಕೊಂಡಿದೆ. ಕೆಂಚನಾಲ ಗ್ರಾಪಂ ವ್ಯಾಪ್ತಿಯ ಚಂದವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಆಯ್ಕೆ ಎಂದರು.

ಈ ಕಾರ್ಯಕ್ರಮದಲ್ಲಿ ಹೊಸನಗರ ತಾಪಂ ಕಾರ್ಯ ನಿರ್ವಾಹಣಾಧಿಕಾರಿ ವೈ ನರೇಂದ್ರ ಕುಮಾರ್ , ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಆರ್ ಕೃಷ್ಣಮೂರ್ತಿ, ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ ಇದ್ದರು.

Exit mobile version