ರಾಜ್ಯ ಸರ್ಕಾರದ ಕರಾಟೆ ತರಭೇತಿಯ ಯಶಸ್ವಿ ಅನುಷ್ಠಾನ | ಕರಾಟೆ ಶಿಕ್ಷಕ ಹರೀಶ್ ಮಾಸ್ಟರ್ ಗೆ ಸನ್ಮಾನ

ರಾಜ್ಯ ಸರ್ಕಾರದ ಕರಾಟೆ ತರಭೇತಿಯ ಯಶಸ್ವಿ ಅನುಷ್ಠಾನ | ಕರಾಟೆ ಶಿಕ್ಷಕ ಹರೀಶ್ ಮಾಸ್ಟರ್ ಗೆ ಸನ್ಮಾನ

ಹೊಸನಗರ: ರಾಜ್ಯ ಸರ್ಕಾರ ಜಾರಿಗೆ ತಂದ ಸರ್ಕಾರಿ ಪ್ರೌಢಶಾಲಾ ಹೆಣ್ಣುಮಕ್ಕಳಿಗೆ ಕರಾಟೆ ತರಭೇತಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕರಾಟೆ ಮಾಸ್ಟರ್ ಹರೀಶ್ ಎನ್.ಎಸ್ ರನ್ನು ಗೌರವಿಸಿ ಸನ್ಮಾನಿಸಲಾಯಿತು.

ಹೊಸನಗರ ತಾಲೂಕಿನ ನಗರ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಗ್ರ ಶಿಕ್ಷಣ ಯೋಜನೆಯಡಿ ಕರಾಟೆ 10 ತರಗತಿಗಳ ತರಭೇತಿ ಯೋಜನೆಯ ಸಮಾರೋಪ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದರ ನೆನಪಿಗೆ ಹರೀಶ್ ಮಾಸ್ಟರ್ ರೂ.1500 ಮೌಲ್ಯದ ಗೋಡೆ ಗಡಿಯಾರವನ್ನು ಶಾಲೆಗೆ ಕೊಡುಗೆಯಾಗಿ ನೀಡುವ ಮೂಲಕ ಗಮನ ಸೆಳೆದರು.


ಬಳಿಕ ಮಾತನಾಡಿದ ಹರೀಶ್, ತರಭೇತಿಗೆ ಅವಕಾಶ ನೀಡಿದ ರಾಜ್ಯ ಸರ್ಕಾರ, ಶಿಕ್ಷಣ ಇಲಾಖೆಗೆ ಕೃತಜ್ಞತೆ ಸಲ್ಲಿಸಿದರು.

ಪೊಲೀಸ್ ಇಲಾಖೆಯ ಮುಖ್ಯಪೇದೆ ವೆಂಕಟೇಶ್, ಕರಾಟೆ ಒಂದು ಉತ್ತಮ ಶಿಕ್ಷಣವಾಗಿದೆ. ದೈಹಿಕ ಕ್ಷಮತೆ ಹೆಚ್ಚಿಸುವ ಜೊತೆಗೆ, ಆಪತ್ಕಾಲಕ್ಕೆ ಹೆಣ್ಣುಮಕ್ಕಳಿಗೆ ಹೆಚ್ಚು ಸಹಕಾರಿ, ಮಲೆನಾಡಿನಲ್ಲಿ ಒಂಟಿ ಮನೆ, ನಿರ್ಜನ ಪ್ರದೇಶ ಹೆಚ್ಚಿದ್ದು ಹೆಣ್ಣುಮಕ್ಕಳಿಗೆ ಕರಾಟೆ ಅಗತ್ಯವಾಗಿದೆ ಎಂದರು.

ತಾಲೂಕು ದೈಹಿಕ ಪರಿವೀಕ್ಷಕ ಬಾಲಚಂದ್ರರಾವ್, ರಾಜ್ಯದ ಎಲ್ಲಾ ಸರ್ಕಾರಿ ಪ್ರೌಢಶಾಲೆಯಲ್ಲಿ ಕರಾಟೆ ತರಭೇತಿ ನೀಡಲು ಸರ್ಕಾರ ಸೂಚಿಸಿತ್ತು. ಎಲ್ಲಾ ಕಡೆಯೂ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ ಎಂದರು.
ಹೊಸನಗರ ತಾಲೂಕಿನಲ್ಲಿ ಕರಾಟೆ ಶಿಕ್ಷಣವನ್ನು ತಂದು ತರಭೇತಿಯನ್ನು ಆರಂಭಿಸಿದ ಕೀರ್ತಿ ರಾಘವೇಂದ್ರ ಜೆ.ಕೆ.ಮಾಸ್ಟರ್, ಹರೀಶ ಮಾಸ್ಟರ್, ಲಕ್ಷ್ಮಣ್ ಆಚಾರ್ ಮಾಸ್ಟರ್ ಗೆ ಸಲ್ಲಬೇಕು ಎಂದರು.

ಮುಖ್ಯ ಶಿಕ್ಷಕ ಡಾ.ಜಿ.ಸುಧಾಕರ್, ನಮ್ಮ ಶಾಲೆಯಲ್ಲಿ ಕರಾಟೆ ತರಭೇತಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಹರೀಶ್ ರನ್ನು ಅಭಿನಂದಿಸಿದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹೆಚ್.ಟಿ.ರಮೇಶ್ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷೆ ಅಶ್ವಿನಿ ರಮೇಶ್, ಗ್ರಾಪಂ ಸದಸ್ಯ ಕರುಣಾಕರಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷೆ ಶೈಲಜಾ ಪಾಂಡುರಂಗ, ಶಿಕ್ಷಕರಾದ ನಟರಾಜ್, ವೆಂಕಟೇಶ ವೈದ್ಯ, ಸೌಮ್ಯ, ಅಕ್ಷಯ್, ನಾಗೇಂದ್ರ, ಮಾಣಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕಿ ಸವಿತಾ ಕಾರ್ಯಕ್ರಮ ನಿರ್ವಹಿಸಿದರು. ಈ ವೇಳೆ ಕರಾಟೆ ತರಭೇತಿ ಪಡೆದ ವಿದ್ಯಾರ್ಥಿಗಳು ಕರಾಟೆಯ ಹಲವು ಪಟ್ಟುಗಳನ್ನು ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು.

Exit mobile version