
ಹೊಸನಗರ: ಮಾನಸಿಕ ದೈಹಿಕ ಉಲ್ಲಾಸಕ್ಕೆ ಕಾರಣವಾಗುವ ಕ್ರೀಡೆಯು ಸಾಮರಸ್ಯಕ್ಕೆ ಸ್ಪೂರ್ತಿಯಾಗಿದೆ ಎಂದು ಕೋಡೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಪ್ರಕಾಶ್ ಶೆಟ್ಟಿ ಹೇಳಿದರು.
ಕೋಡೂರು ಗ್ರಾಮ ಪಂಚಾಯತ್ ವತಿಯಿಂದ ಮುಖ್ಯಮಂತ್ರಿಗಳ ಗ್ರಾಮೀಣ ಕ್ರೀಡೆ ಉತ್ತೇಜಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮ “ಗ್ರಾಮೀಣ ಕ್ರೀಡಾಕೂಟ- 2022” ರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಗಳು ಇಂದಿನ ಒತ್ತಡ ಜೀವನದಿಂದ ಹೊರಬರಲು ಸಹಕಾರಿಯಾಗಿದೆ. ಯುವ ಸಮುದಾಯವನ್ನು ಮೊಬೈಲ್ ಇಂಟರ್ನೆಟ್ ಜಗತ್ತಿನಿಂದ ದೂರ ಮಾಡಿ, ದೈಹಿಕ ಮಾನಸಿಕ ಆರೋಗ್ಯವನ್ನು ಕಾಪಾಡುತ್ತವೆ. ಕ್ರೀಡೆಯು ಜಾತಿ- ಧರ್ಮ ಸೋಲು -ಗೆಲುವುಗಳ ಪರಿಧಿ ಮೀರಿ, ಎಲ್ಲರೂ ಒಟ್ಟಾಗಿ ಪಾಲ್ಗೊಳ್ಳುವುದರಿಂದ ಸಹಬಾಳ್ವೆಯ ದ್ಯೋತಕವಾಗಿದೆ ಎಂದರು.
ಕ್ರೀಡಾಕೂಟವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುನಂದ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು.
ರತ್ನಮ್ಮ ಪ್ರಾರ್ಥಿಸಿ, ಪಿಡಿಒ ನಾಗರಾಜ್ ಸ್ವಾಗತಿಸಿ, ಸಿ ಆರ್ ಸಿ ಪ್ರದೀಪ್ ನಿರೂಪಿಸಿದರು. ಸಿದ್ದಗಿರಿ ಶಾಲಾ ಶಿಕ್ಷಕಿ ಉಷಾ ವಂದಿಸಿದರು. ಕ್ರೀಡಾಕೂಟದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅನ್ನಪೂರ್ಣ ಮಹೇಶ್, ಶೇಖರಪ್ಪ ಎಲ್, ಚಂದ್ರಕಲಾ, ಯೋಗೇಂದ್ರಪ್ಪ, ರೇಖಾ, ಸುಧಾಕರ, ಪ್ರೀತಿ, ಉಮೇಶ್, ಮಂಜಪ್ಪ, ಶ್ಯಾಮಲಾ, ಸವಿತಾ ಮತ್ತು ಸಿಬ್ಬಂದಿ ವರ್ಗದವರು ಇನ್ನಿತರರು ಉಪಸ್ಥಿತರಿದ್ದರು.